Advertisement

“ಕಣ್ಣು-ಬಾಯಿ ಇಲ್ಲದಂತೆ ಮೋದಿ ವರ್ತನೆ’

11:34 PM Aug 19, 2019 | Lakshmi GovindaRaj |

ಬಾಗಲಕೋಟೆ: ರಾಜ್ಯದಲ್ಲಿ ಪ್ರವಾಹದಿಂದ ಜನರು ತೀವ್ರ ಸಂಕಷ್ಟದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಕಣ್ಣು-ಬಾಯಿ ಎರಡೂ ಇಲ್ಲದಂತೆ ಸುಮ್ಮನಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.

Advertisement

ಬಾದಾಮಿ ತಾಲೂಕಿನ ಕರ್ಲಕೊಪ್ಪ, ಹಾಗನೂರ, ಆಲೂರ, ಬೀರನೂರ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಆಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದ ಪ್ರವಾಹ ಪರಿಸ್ಥಿತಿ ಪ್ರಧಾನಿಗೆ ಕಣ್ಣಿಗೆ ಕಾಣುತ್ತಿಲ್ಲ ಅನಿಸುತ್ತದೆ. ಅವರು ಇಲ್ಲಿನ ಪರಿಸ್ಥಿತಿಯನ್ನು ಸ್ವತಃ ಬಂದು ನೋಡಬೇಕಿತ್ತು. ಬರಲಿಲ್ಲ. ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆಗಾಗಿ ತಕ್ಷಣ ಐದು ಸಾವಿರ ಕೋಟಿ ಕೊಡಬೇಕು ಎಂದು ಆಗ್ರಹಿಸಿದರು.

ಪರಿಹಾರಕ್ಕೆ ಸಿಎಂಗೆ ಪತ್ರ: ಪ್ರವಾಹದಿಂದ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಮನೆ ಸಂಪೂರ್ಣ ನಾಶವಾದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ತಕ್ಷಣ ಪರಿಹಾರಕ್ಕೆ 10 ಸಾವಿರ ನೀಡಲು ಸರ್ಕಾರ ತೀರ್ಮಾನಿಸಿದೆ. ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಹಣ ಬರುತ್ತದೆ. ಯಾರೂ ಆತಂಕ ಪಡಬೇಡಿ ಎಂದರು. ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ. 105 ಶಾಸಕರೂ ಇದ್ದಾರೆ. ಆದರೆ, ಅವರೆಲ್ಲ ಕೇಂದ್ರ ಸರ್ಕಾರದ ಎದುರು ಬಾಯಿ ಬಿಡುತ್ತಿಲ್ಲ ಎಂದು ಟೀಕಿಸಿದರು.

ಕಷ್ಟ ನೋಡಿ ಬಂದೆ: ನನಗೆ ಆ.4ರಂದು ಕಣ್ಣಿನ ಆಪರೇಶನ್‌ ಆಗಿದೆ. ಆ. 6ರಂದು ಪ್ರವಾಹ ಬಂದಿದೆ. ಇಂತಹ ಪರಿಸ್ಥಿತಿ ಕುರಿತು ಮೊದಲೇ ಗೊತ್ತಿದ್ದರೆ ಆಪರೇಷನ್‌ ಮಾಡಿಸಿಕೊಳ್ಳುತ್ತಿರಲಿಲ್ಲ. ಈಗಲೂ ಗಾಳಿಗೆ ಹೋಗಬೇಡಿ ಎಂದು ವೈದ್ಯರು ಹೇಳಿದ್ದಾರೆ. ಆದರೂ ಜನರ ಕಷ್ಟ ನೋಡಿ ಬಂದಿದ್ದೇನೆ. ಸಂತ್ರಸ್ತರಿಗೆ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆಂದು ಸಿದ್ದರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next