ಧಾರವಾಡ: ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇ.90ರಷ್ಟನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಒಂದೇ ಒಂದೂ ಭರವಸೆ ಈಡೇರಿಸಿಲ್ಲ ಎಂದು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಆಪಾದಿಸಿದರು.
ಸೋಮವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಅದೇ ರೀತಿ ಕೇಂದ್ರದಲ್ಲಿ 2014ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ ಯಾವುದೇ ಒಂದು ಯೋಜನೆ ಜಾರಿಗೆ ತಂದಿಲ್ಲ.
ಪ್ರತಿ ರಾಜ್ಯದ ಚುನಾವಣೆ ಎದುರಾದಾಗ ಹೊಸದೊಂದು ಯೋಜನೆ ಜಾರಿ ತರುವುದಾಗಿ ಹೇಳಿ ಘೋಷಣೆ ಮಾಡುವ ಚಾಳಿ ಮುಂದುವರಿಸಿಕೊಂಡು ಹೋಗುತ್ತಿದೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಮತ ಪಡೆಯುವ ತಂತ್ರವನ್ನು ಅಮಿತ್ ಷಾ ಹಾಗೂ ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಅಪಾದಿಸಿದರು.
ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂಬ ಭರವಸೆ ಈದುವರೆಗೂ ಈಡೇರಿಲ್ಲ. ಈ ಕುರಿತು ಸ್ವಿಸ್ ಬ್ಯಾಂಕ್‌ನಲ್ಲಿ ಹಣವಿಟ್ಟಿರುವವರ ಪಟ್ಟಿ ತರಿಸಿದ್ದರೂ ಅದರಲ್ಲಿ ಬಿಜೆಪಿ ಬೆಂಬಲಿತರ ಹೆಸರುಗಳೆ ಇದ್ದುದ್ದರಿಂದ ಅದನ್ನು ಬಿಟ್ಟಿದ್ದಾರೆ.
ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ ಮರಣ ಹೊಂದಿದ ಸಂದರ್ಭದಲ್ಲಿ ಅಣ್ಣಾ ಡಿಎಂಕೆ ಪಕ್ಷದಲ್ಲಿ ಒಡಕು ಮೂಡಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ತರಲು ಮುಂದಾಗಿದ್ದು ದೊಡ್ಡ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿನ ಬಿಜೆಪಿ ಮುಖಂಡರಿಗೆ ರಾಜ್ಯ ಸರ್ಕಾರ ಮಾಡಿದ ಸಾಧನೆ ಕಾಣುತ್ತಲೇ ಇಲ್ಲ. ಬದಲಿಗೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಸರ್ಕಾರವೇ ಮಾಡಿದೆ ಎಂದು ಹೇಳಿಕೊಂಡು ತಿರುತ್ತಿದ್ದಾರೆ.
ಯಡಿಯೂರಪ್ಪನವರು ಬಿಜೆಪಿಯ ಒಬ್ಬ ಹಿರಿಯ ನಾಯಕರಾಗಿ ಬೇರೆ ಪಕ್ಷದ ಮುಖಂಡರ ಬಗ್ಗೆ ಲಘುವಾಗಿ ಮಾತನಾಡುವುದು ಅವರಿಗೆ ಶೋಭೆ ತಂದು ಕೊಡುವುದಿಲ್ಲ. ನಿಜವಾಗಿ ಕಾಂಗ್ರೆಸ್‌ನ ಪ್ರಯತ್ನದಿಂದ ಇಂದು ಐಐಟಿ ಧಾರವಾಡಕ್ಕೆ ಬಂದಿದೆ. ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುತ್ತೇವೆಂದು ಭ್ರಮ ನಿರಸದಲ್ಲಿದ್ದಾರೆ ಎಂದು ಆಪಾದಿಸಿದರು.