Advertisement
ಸರ್ಕಾರದ ಮೂಲಗಳೇ ಇದನ್ನು ಸ್ಪಷ್ಟಪಡಿಸಿದ್ದು, ಇನ್ನೊಂದು ತಿಂಗಳಲ್ಲಿ ನದಿ ಜೋಡಣೆ ಕಾಮಗಾರಿ ಆರಂಭವಾಗುವುದು ಖಚಿತ ಎನ್ನುತ್ತಿವೆ. ಅಂದಾಜು 5.55 ಲಕ್ಷ ಕೋಟಿ ರೂ.ಗಳ ಯೋಜನೆ ಇದಾಗಿದೆ. ಆಗಾಗ ಸಂಭವಿಸುತ್ತಲೇ ಇರುವ ಪ್ರವಾಹ ಹಾಗೂ ಬರಗಾಲ ಪರಿಸ್ಥಿತಿಗೆ ಅಂತ್ಯ ಹಾಡಬೇಕೆನ್ನುವ ಉದ್ದೇಶ ಈ ಯೋಜನೆಯ ಹಿಂದಿದೆ. ಒಂದೆರಡು ವಾರಗಳಲ್ಲೇ ಈ ಯೋಜನೆ ಕಾಮಗಾರಿ ಆರಂಭಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಲಿದೆ ಎಂದು ಹೇಳಲಾಗಿದೆ.
Related Articles
ನದಿ ಜೋಡಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಈ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. ಅಲ್ಲದೇ, ಈ ಯೋಜನೆಯಿಂದ ಸಾವಿರಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯ ಎನ್ನುವುದೂ ಪ್ರಧಾನಿ ಒಪ್ಪಿಗೆ ನೀಡಲು ಇನ್ನೊಂದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
Advertisement
ಪ್ರತಿಪಕ್ಷ, ಪರಿಸರ ತಜ್ಞರ ವಿರೋಧ:ಸರ್ಕಾರ ನದಿ ಜೋಡಣೆ ಕಾಮಗಾರಿಗೆ ಶೀಘ್ರ ಚಾಲನೆ ನೀಡುವ ಉತ್ಸಾಹದಲ್ಲಿದ್ದರೆ, ಪ್ರತಿಪಕ್ಷಗಳು ಹಾಗೂ ದೇಶದ ಕೆಲ ಪರಿಸರ ತಜ್ಞರು, ಹುಲಿ ಪ್ರಿಯರು ಹಾಗೂ ಕೆಲವು ಶ್ರೀಮಂತ ರೈತಾಪಿ ಕುಟುಂಬಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ನೈಸರ್ಗಿಕ ವಿಕೋಪಕ್ಕೆ ನದಿ ಜೋಡಣೆ ನೇರ ಕಾರಣವಾಗಲಿದೆ ಎನ್ನುವುದು ಅವರ ಆಕ್ಷೇಪವಾಗಿದೆ. ನೀರಿನ ಸಂರಕ್ಷಣೆ ಹಾಗೂ ಉಪಯೋಗ ಅಧ್ಯಯನ ನಡೆಸಿರುವ ಕೆಲ ತಜ್ಞರು ಈ ಯೋಜನೆ ಬಗ್ಗೆ ಧನಾತ್ಮಕ ಮಾತುಗಳನ್ನೇ ಆಡಿದ್ದಾರೆ ಎನ್ನಲಾಗಿದೆ. ಯೋಜನೆ, ಸವಾಲು, ಹಿತಾಸಕ್ತಿ
ಕರ್ಣವಟಿ ಎಂದೂ ಕರೆಯಲಾಗುವ ಕೆನ್ ನದಿಗೆ ಅಡ್ಡದಾಗಿ ನಿರ್ಮಾಣಕ್ಕೆ ಉದ್ದೇಶಿಸಿದ ಅಣೆಕಟ್ಟೆಯೇ ಯೋಜನೆಯ ಪ್ರಮುಖ ಸವಾಲು. ಉತ್ತರ ಮತ್ತು ಮಧ್ಯ ಭಾರತವನ್ನು ಬೇರ್ಪಡಿಸುವಂತೆ ಬರೋಬ್ಬರಿ 22 ಕಿಲೋ ಮೀಟರ್ (14 ಮೈಲು) ದೂರದ ಕಾಲುವೆಗೆ ಈ ಅಣೆಕಟ್ಟೆ ನಿರ್ಮಾಣಗೊಳ್ಳಲಿದೆ. ಕೆನ್ ಹಾಗೂ ಬೆಟ್ವಾ ಸಂಪರ್ಕಿಸುವ ಕಾಲುವೆ ಇದಾಗಿದ್ದು, ಸ್ವತಃ ಪ್ರಧಾನಿ ಮೋದಿ ಅವರು ಕೆನ್ -ಬೆಟ್ವಾ ಸಂಗಮ ಯೋಜನೆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವನ್ನೇ ಹೊಂದಿರುವ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಹಾದು ಹೋಗುವ ಪ್ರಮುಖ ನದಿ ಇದಾಗಿದೆ. ಮೂಲಗಳ ಪ್ರಕಾರ ಕೆನ್-ಬೆಟ್ವಾ ಸಂಪರ್ಕ ಯೋಜನೆ ನದಿ ಜೋಡಣೆ ಹಿಂದಿನ ಪ್ರಮುಖ ಅಂಶವಾಗಿದೆ ಎಂದು ಹೇಳಲಾಗುತ್ತಿದೆ. ಯೋಜನೆಯಲ್ಲಿ ಸೈದ್ಧಾಂತಿಕವಾಗಿ ಯಾವುದೇ ತಪ್ಪು ಕಂಡು ಹಿಡಿಯಲು ಸಾಧ್ಯವಿಲ್ಲ. ಆದರೆ ಕೋಟಿ ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿರುವ ಕಾರಣ ನೀರಿನ ಸದ್ಬಳಕೆಗೆ ಹೆಚ್ಚಿನ ಒತ್ತು ನೀಡಿ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ.
– ಅಶೋಕ್ ಗುಲಾಟಿ, ಕೃಷಿ ಅರ್ಥಶಾಸ್ತ್ರಜ್ಞ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಡ್ಯಾಮ್ ನಿರ್ಮಾಣವೇ ಪ್ರಕೃತಿ ವಿಕೋಪವನ್ನು ಆಹ್ವಾನಿಸಿದಂತೆ. ಅರಣ್ಯ ಪ್ರದೇಶಕ್ಕೆ ನೀರು ಪ್ರವೇಶಿಸುವುದರಿಂದ ಒಟ್ಟಾರೆ ವನ್ಯಜೀವಿಗಳ ವಿನಾಶಕ್ಕೆ ಕಾರಣವಾಗಲಿದೆ.
– ಶ್ಯಾಮೇಂದ್ರ ಸಿಂಗ್, ಪನ್ನಾ ರಾಜಮನೆತನದ ಕುಡಿ ಹುಲಿ ಪ್ರಿಯರ ವಿರೋಧ ಏಕೆ?
ಕೆನ್ ನದಿಗೆ ಅಡ್ಡದಾಗಿ ನಿರ್ಮಾಣಗೊಳ್ಳಲಿರುವ ಅಣೆಕಟ್ಟೆ ಹೆಚ್ಚುಕಡಿಮೆ 77 ಮೀಟರ್(250 ಅಡಿ)ನಷ್ಟು ಎತ್ತರದಿಂದ ಕೂಡಿರಲಿದೆ. 2 ಕಿಲೋ ಮೀಟರ್ ದೂರದ್ದಾಗಿರಲಿದೆ. ಹೀಗಾಗಿ ಹೆಚ್ಚಿನ ಹಿನ್ನೀರು ಪ್ರದೇಶ ಪನ್ನಾ ಹುಲಿ ಸಂರಕ್ಷಿತಾರಣ್ಯವನ್ನು ಆವರಿಸಿಕೊಳ್ಳಲಿದೆ. ಹೀಗಿರುವಾಗ, ಹುಲಿಗಳ ರಕ್ಷಣೆಯೇ ದೊಡ್ಡ ಸವಾಲಾಗಲಿದೆ ಎನ್ನುವುದು ವಿರೋಧಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕೆ ಹತ್ತಿರದಲ್ಲೇ ವಿಶ್ವಪ್ರಸಿದ್ಧ ಖಜುರಾಹೋ ದೇವಾಲಯ ಕೂಡ ಇರಲಿದೆ ಎನ್ನುವುದು ಇನ್ನೊಂದು ಕಾರಣ. ಆದರೆ ಸರ್ಕಾರ ಹುಲಿಗಳಿಗೆ ಯಾವುದೇ ತೊಂದರೆ ಆಗದೇ ಇರುವ ರೀತಿಯಲ್ಲಿಯೇ ಡ್ಯಾಮ್ ನಿರ್ಮಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಮುಖ್ಯಾಂಶಗಳು
– ಸರ್ಕಾರದ ಸದ್ಯದ ಲೆಕ್ಕಾಚಾರ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮೊದಲು ಕಾಮಗಾರಿ ಆರಂಭಿಸುವುದು.
– ಶೇ.6.5ರಷ್ಟು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಡ್ಯಾಮ್ ನಿರ್ಮಾಣ
– 10 ಹಳ್ಳಿಗಳಿಂದ 2000ಕ್ಕೂ ಹೆಚ್ಚು ಕುಟುಂಬಗಳನ್ನು ಯೋಜನೆಗಾಗಿ ಸ್ಥಳಾಂತರ
– ಪಾರ್-ತಾಪಿ ನದಿಗಳನ್ನು ನರ್ಮದಾ ಹಾಗೂ ದಮನ್ ಗಂಗಾವನ್ನು ಪಿಂಜಲ್ ಜತೆ ಜೋಡಿಸುವ ಯೋಜನೆ ನೀಲನಕ್ಷೆ ಈಗಾಗಲೇ ಸಿದ್ಧ.
– 2002ರಲ್ಲಿ ಮೊಟ್ಟ ಮೊದಲ ಬಾರಿಗೆ ಎನ್‌ಡಿಎ ಸರ್ಕಾರದಿಂದಲೇ ನದಿ ಜೋಡಣೆ ಯೋಜನೆ ಪ್ರಸ್ತಾವನೆ. ಗಂಗಾ-ಕಾವೇರಿ ಜೋಡಣೆ?
ಕೇಂದ್ರ ಸರ್ಕಾರ ಒಟ್ಟು 60 ನದಿಗಳ ಜೋಡಣೆಗೆ ಮುಂದಾಗಿದೆ. ಇದರಲ್ಲಿ ಕರ್ನಾಟಕದ ನದಿಗಳೂ ಸೇರಿವೆ. ಕಾವೇರಿ, ಕೃಷ್ಣ, ಹೇಮಾವತಿ, ನೇತ್ರಾವತಿ, ವರದಾ ನದಿಗಳಿಗೆ ಬೇರೆ ರಾಜ್ಯಗಳ ನದಿಗಳನ್ನು ಜೋಡಣೆ ಮಾಡಲಾಗುತ್ತದೆ. ಅಂದರೆ ಇವುಗಳ ಭೌಗೋಳಿಕ ಸನ್ನಿವೇಶ ನೋಡಿಕೊಂಡು ಮಹಾನಂದಿ, ಗೋದಾವರಿಯನ್ನು ಜೋಡಣೆ ಮಾಡಬಹುದಾಗಿದೆ. 2014ರಲ್ಲೇ ಕರ್ನಾಟಕ ಸರ್ಕಾರ ನದಿಗಳ ಜೋಡಣೆಗೆ ಒಪ್ಪಿ, ತುಂಗಭದ್ರಾದಿಂದ ಸಮುದ್ರ ಸೇರುವ ನೀರನ್ನು ಕೋಲಾರ, ತುಮಕೂರು ಜಿಲ್ಲೆಗಳಿಗೆ ತಲುಪಿಸಬಹುದು ಎಂದಿತ್ತು. ಉದ್ದೇಶಿತ ನದಿ ಜೋಡಣೆಗಳು
ಗಂಗಾ-ದಾಮೋದರ್-ಸುಪರ್ಣರೇಖಾ
ಸುಪರ್ಣರೇಖಾ-ಮಹಾನಂದಿ
ಮಹಾನಂದಿ-ಗೋದಾವರಿ
ಗೋದಾವರಿ-ಕೃಷ್ಣಾ
ಕೃಷ್ಣಾ – ಪೆನ್ನಾರ್
ಪೆನ್ನಾರ್ -ಕಾವೇರಿ
ಭೇಡ್ತಿ-ವರದಾ
ನೇತ್ರಾವತಿ-ಹೇಮಾವತಿ