Advertisement

ಮೋದಿ ಇಚ್ಛಾಶಕ್ತಿ, ಶಾ ರಣನೀತಿಯಿಂದ 370ನೇ ವಿಧಿ ರದ್ದು: ನಡ್ಡಾ

09:38 AM Sep 23, 2019 | Team Udayavani |

ಬೆಂಗಳೂರು: ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂಬುದಾಗಿ ಐತಿಹಾಸಿಕ ಸುಳ್ಳು ಹೇಳಿ ದೇಶದ ಜನರಲ್ಲಿ ತಪ್ಪು ಭಾವನೆ ತುಂಬಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿ, ಕೇಂದ್ರ ಗೃಹ ಸಚಿವರಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರಣನೀತಿಯ ಪರಿಣಾಮ 370ನೇ ವಿಧಿ ರದ್ದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

Advertisement

“ಒಂದು ದೇಶ- ಒಂದು ಸಂವಿಧಾನ’ ರಾಷ್ಟ್ರೀಯ ಏಕತಾ ಅಭಿಯಾನದಡಿ ಬಿಜೆಪಿ ನಗರದ ಅರಮನೆ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ 370ನೇ ವಿಧಿ ರದ್ಧತಿ ಬಗ್ಗೆ ಜನ ಜಾಗರಣ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಧಿ 370 ತಾತ್ಕಾಲಿಕ ಮತ್ತು ಬದಲಾಯಿಸಬಹುದಾದದ್ದು ಎಂದು ದಾಖಲಾಗಿದೆ ಎಂದು ತಿಳಿಸಿದರು.

ಕಾಶ್ಮೀರಕ್ಕೆ 370ನೇ ವಿಧಿಯನ್ವಯ ವಿಶೇಷ ಸ್ಥಾನಮಾನ ನೀಡುವ ನೆಹರೂ ಅವರ ನಿರ್ಧಾರವನ್ನು ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಕೂಡ ವಿರೋಧಿಸಿದ್ದರು. ಕಾಶ್ಮೀರಕ್ಕೆ ಗಡಿ ಸುರಕ್ಷತೆ, ಆಹಾರ ಭದ್ರತೆ, ರಸ್ತೆ ಸಂಪರ್ಕ, ರಕ್ಷಣಾ ವ್ಯವಸ್ಥೆ ಬಲವರ್ಧನೆಗೆ ಸಹಕಾರ ನೀಡಬಹುದು. ಆದರೆ ಭಾರತೀಯ ನಾಗರಿಕರಿಗೆ ಕಾಶ್ಮೀರದ ಅಧಿಕಾರ ನಿರಾಕರಿಸುವುದನ್ನು ಒಬ್ಬ ಕಾನೂನು ಸಚಿವನಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್‌ ಸ್ಪಷ್ಟವಾಗಿ ಹೇಳಿದ್ದರು. ಕಾಶ್ಮೀರದಲ್ಲಿ 1954ರಲ್ಲೇ ದೇಶದ ಸಂವಿಧಾನ ಪಾಲಿಸುವುದನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ ಎರಡು ಸಂವಿಧಾನ, ಎರಡು ಪ್ರಧಾನ, ಎರಡು ವಿಧಾನ ವ್ಯವಸ್ಥೆ ವಿರುದ್ಧ ಹೋರಾಟ ಆರಂಭವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಬುಡಕಟ್ಟು ಜನಾಂಗದವರಿಗೆ ರಾಜಕೀಯ ಮೀಸಲಾತಿ ಇಲ್ಲ.

ಪಂಜಾಬ್‌ ಮೂಲದ ದಲಿತರಿಗೆ ಸಫಾಯಿ ಕರ್ಮಚಾರಿಗಳಿಗೆ ಆ ಕಾರ್ಯ ಹೊರತುಪಡಿಸಿ ಬೇರೆ ಉದ್ಯೋಗ ಮಾಡುವಂತಿರಲಿಲ್ಲ. ಹೀಗೆ ಕಾಶ್ಮೀರದಲ್ಲಿ ಸಾಕಷ್ಟು ತಾರತಮ್ಯಗಳಿದ್ದವು ಎಂದು ಹೇಳಿದರು.

ಪ್ರಧಾನಿ ತೋರಿದ ಇಚ್ಛಾಶಕ್ತಿ ಹಿಂದೆ ದೇಶದ ಜನ ನೀಡಿರುವ ಶಕ್ತಿ ಇದೆ. ಹಾಗಾಗಿ ಕಾಶ್ಮೀರಕ್ಕೆ 370ನೇ ವಿಧಿ ರದ್ದಾಗಿದೆ. ಇನ್ನು ಮುಂದೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಅಲ್ಲಿನ ವಿಧಾನಸಭೆ, ಲೋಕಸಭೆಯಲ್ಲಿ ಮೀಸಲಾತಿ ಸಿಗಲಿದೆ. ಸಫಾಯಿ ಕರ್ಮಚಾರಿಗಳ ಮಕ್ಕಳು ಆಡಳಿತ ಸೇವೆಗೆ ಸೇರುವ ಅವಕಾಶ ಸಿಗಲಿದೆ, ಕೇಂದ್ರದ ಐತಿಹಾಸಿಕ ನಿರ್ಧಾರದಿಂದ ದೇಶದ ಜನ ಸಂತಸದಿಂದಿದ್ದಾರೆ. ಕಾಶ್ಮೀರದ ಜನರು ಅದಕ್ಕಿಂತಲೂ ಅತಿ ಹೆಚ್ಚು ಸಂಭ್ರಮದಲ್ಲಿದ್ದಾರೆ. ಏಕೆಂದರೆ ಹಲವು ದಶಕಗಳಿಂದ ಎರಡನೇ ದರ್ಜೆ ನಾಗರಿಕರಂತೆ ಕಾಣುತ್ತಿದ್ದರಿಂದ ನೊಂದಿದ್ದವರು ಈಗ ಖುಷಿಯಲ್ಲಿದ್ದಾರೆ. ಈ ಎಲ್ಲ ವಿಚಾರಗಳನ್ನು ಜನರಿಗೆ ತಿಳಿಸಬೇಕು ಎಂದು ಜೆ.ಪಿ. ನಡ್ಡಾ ಹೇಳಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವ ವಿ.ಸೋಮಣ್ಣ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಉಪಸ್ಥಿತರಿದ್ದರು.

Advertisement

ದೇಶ ಇಂದು ಬದಲಾಗಿದ್ದು, ಪ್ರಗತಿ ಕಾಣುತ್ತಿದೆ. ಆರ್ಥಿಕತೆ ಪ್ರಗತಿಗೆ ಪೂರಕವಾಗಿ ತೆರಿಗೆ ವಿನಾಯಿತಿ ಘೋಷಿಸುವ ದೃಢ ರಾಜಕೀಯ ಇಚ್ಛಾಶಕ್ತಿಯನ್ನು ಪ್ರಧಾನಿ ಮೋದಿ ಹೊರತುಪಡಿಸಿದರೆ ಬೇರೆ ಯಾರೂ ತೋರಲು ಸಾಧ್ಯವಿಲ್ಲ.
-ಜೆ.ಪಿ. ನಡ್ಡಾ, ಬಿಜೆಪಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next