ಕನೌಜ್/ಕಾನ್ಪುರ: ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟದ ಬಿರುಗಾಳಿ ಶೀಘ್ರವೇ ಬೀಸಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಉತ್ತರ ಪ್ರದೇಶದ ಕನೌಜ್ ಮತ್ತು ಕಾನ್ಪುರಗಳಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಚುನಾವಣ ಫಲಿತಾಂಶ ಪ್ರಕಟವಾದ ಬಳಿಕ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಕಳೆದ ವರ್ಷದಿಂದ ಈಚೆಗೆ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಾ ಬಂದಿದೆ. ಭಾರತ್ ಜೋಡೋ ಯಾತ್ರೆ, ನ್ಯಾಯ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಜನರ ಅಹವಾಲುಗಳನ್ನು ಕೇಳಿಕೊಂಡಿದ್ದೆವು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದ್ವೇಷದ ವಿರುದ್ಧ ನಾವು ಪ್ರೀತಿಯ ಅಂಗಡಿಯನ್ನೂ ತೆರೆದಿದ್ದೇವೆ ಎಂದರು.
ಉತ್ತರ ಪ್ರದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಬಿರುಗಾಳಿ ಬೀಸಲಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ರಾಜ್ಯದಲ್ಲಿ 50 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸವಿದೆ. ಇಲ್ಲಿನ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎನ್ನುವುದು ನಿಶ್ಚಿತ. ಫಲಿತಾಂಶ ಪ್ರಕಟವಾದ ಬಳಿಕ ಪ್ರಧಾನಿ ಹುದ್ದೆಯಲ್ಲಿ ಮೋದಿ ಇರುವುದಿಲ್ಲ ಎಂದರು. ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವಲ್ಲಿ ಪ್ರಯತ್ನ ಮಾಡಲಿದ್ದಾರೆ ಎಂದು ರಾಹುಲ್ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಈ ಬಾರಿ ಬಿಜೆಪಿ ಗೆದ್ದರೆ ಸಂವಿಧಾನ ಬದಲಾಯಿಸುವುದು ಖಂಡಿತ. ಬಡವರ, ದಲಿತರ, ತುಳಿತಕ್ಕೆ ಒಳಗಾದವರ ಆತ್ಮ, ಭವಿಷ್ಯ, ಅಭಿವೃದ್ಧಿ ಸಂವಿಧಾನದಲ್ಲಿ ಇದೆ ಎಂಬುದುನ್ನು ನೆನಪಿನಲ್ಲಿಡಿ ಎಂದು ಮತದಾರರನ್ನು ರಾಹುಲ್ ಎಚ್ಚರಿಸಿದ್ದಾರೆ.