ಕಲಬುರಗಿ: ದೇಶದಲ್ಲಿ ಏಕಾಏಕಿಯಾಗಿ ನೋಟು ರದ್ದು ಮಾಡುವ ಮೂಲಕ ಯಾವ ಪುರುಷಾರ್ಥವನ್ನು ಮೋದಿ ಮೆರೆದರೋ ಗೊತ್ತಿಲ್ಲ, ಆದರೆ, 130 ಕೋಟಿ ಜನರಿಗೆ ಮಂಕು ಬೂದಿ ಎರಚಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಒಂದು ಆರ್ಥಿಕ ದುರಂತದಿಂದ ಜಾರಿತು. ಬಡ ಜನರು, ಹಣ ಸಿಗದೆ ಪರದಾಡುವಂತೆ ಮಾಡಿ, ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ದೊಡ್ಡ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ಏನನ್ನು ಸಾಧಿಸಿದರೋ ಗೊತ್ತಿಲ್ಲ.
ಆದರೆ, ಬಡ ಹಾಗೂ ಮಧ್ಯಮ ವರ್ಗವನ್ನು ಸಂಪೂರ್ಣವಾಗಿ ಹೈರಾಣ ಮಾಡಿದ್ದಾರೆ ಎಂದರು. ನೋಟು ರದ್ದತಿಯಿಂದ ದೇಶದ ಬಡಜನರು ಮತ್ತು ಸಣ್ಣ ವ್ಯಾಪಾರ ವಹಿವಾಟು ನಡೆಸುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತಾಪಿ ವರ್ಗಕ್ಕೆ ಇದರಿಂದ ಬಹುದೊಡ್ಡ ಪೆಟ್ಟುಬಿದ್ದಿದೆ.
ಭಯೋತ್ಪಾಧನೆ ನಿಗ್ರಹ, ಕಪ್ಪು ಹಣಕ್ಕೆ ಕಡಿವಾಣ ಮತ್ತು ನಕಲಿ ನೋಟು ಹಾವಳಿ ತಡೆ ಸಂಬಂಧ ದೊಡ್ಡ ಮುಖ ಬೆಲೆಯ ನೋಟು ರದ್ದು ಮಾಡಿದ್ದಾಗಿ ಪ್ರಧಾನಿ ಹೇಳಿದ್ದರು. ಆದರೆ, ಇಂದು ಇದಕ್ಕೆಲ್ಲ ಕಡಿವಾಣ ಬಿದ್ದಿದೆಯೇ ಎಂದು ಪ್ರಶ್ನಿಸಿದರು.
ಸಮರ್ಪಕ ಅನುಷ್ಠಾನ: ಸಂವಿಧಾನದ 371(ಜೆ) ಕಲಂ ಸಮರ್ಪಕವಾಗಿ ಜಾರಿಗೆ ಬಂದಿದೆ. ಇನ್ನು ಇಲ್ಲಿನ ಅಭಿವೃದ್ಧಿಗಾಗಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ವಿಳಂಬ ಆಗಿರಬಹುದು. ಎಲ್ಲದಕ್ಕೂ ಸಮಯ ಬೇಕು. ಮೊದಲು 300, 500, 750 ಕೋಟಿ ರೂ. ಅನುದಾನವನ್ನು ಎಚ್‌ಕೆಆರ್ ಡಿಬಿಗೆ ನೀಡಲಾಗಿತ್ತು. ಈ ಬಾರಿ 1000 ಕೋಟಿ ರೂ. ಬರುತ್ತದೆ. ಗುರುವಾರ ದಿನ 750 ಕೋಟಿ ರೂ. ಬಂದಿದೆ. ಸರ್ಕಾರ ಎಲ್ಲವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.