ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ ಅವರು ನೀಲಿ ಬಣ್ಣದ ವಿಶೇಷ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ. ಇವರು ಧರಿಸಿದ ಈ ಸ್ಪೆಷಲ್ ಜಾಕೆಟ್ ಪ್ಲಾಸ್ಟಿಕ್ ಬಾಟಲ್‌ಗಳ ಮರುಬಳಕೆಯಿಂದ ತಯಾರಿಸಿದ್ದು ಎಂದು ಹೇಳಲಾಗಿದೆ.
ಇನ್ನೊಂದು ವಿಶೇಷ ಸಂಗತಿಯೆಂದರೆ ಈ ಜಾಕೆಟನ್ನು ಇತ್ತೀಚೆಗೆ ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿತ್ತು.
ಈ ಜಾಕೆಟನ್ನು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಬಾಟಲ್‌ಗಳನ್ನು ಉಪಯೋಗಿಸಿ ತಯಾರಿಸಲಾಗಿದೆ. ಭಾರತದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಪಿಇಟಿ ಬಾಟಲ್‌ಗಳ ಮರುಬಳಕೆಯಿಂದ ಇಂಡಿಯನ್ ಆಯಿಲ್ ಉದ್ಯೋಗಿಗಳಿಗೆ ಮತ್ತು ಭದ್ರತಾ ಪಡೆಗಳಿಗೆ ಬಟ್ಟೆಯನ್ನೂ ತಯಾರಿಸಲಾಗುತ್ತಿದೆ.ಇತ್ತೀಚೆಗೆ ಭಾರತ ಸರ್ಕಾರ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಕಾರ್ಯಕ್ರಮವನ್ನು ಸುಮಾರು 19,700 ಕೋಟಿ ರೂ ವೆಚ್ಚದಲ್ಲಿ ಹೊರತಂದಿದ್ದು ಪರಿಸರ ಸಂರಕ್ಷಣೆಯ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವಹಿಸುತ್ತಿರುವುದು ಕಂಡು ಬರುತ್ತಿದೆ.