Advertisement

ದೇಶಾದ್ಯಂತ ಮೋದಿ ಅಲೆ

10:40 AM Feb 16, 2019 | Team Udayavani |

ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಿಗಿಂತ ಹೆಚ್ಚು ಸೀಟುಗಳನ್ನು ಗೆದ್ದು ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಲು ಕೊಡುಗೆ ನೀಡಲಾಗುವುದು ಎಂದು ರಾಜಸ್ಥಾನದ ಶಾಸಕಿ ಹಾಗೂ ಕರ್ನಾಟಕ ಲೋಕಸಭಾ ಚುನಾವಣೆಯ ಸಹ ಉಸ್ತುವಾರಿ ಕಿರಣ್‌ ಮಹೇಶ್ವರಿ ತಿಳಿಸಿದರು.

Advertisement

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ಸೇರಿದಂತೆ ದೇಶಾದ್ಯಂತ ಮೋದಿ ಪರ ಅಲೆ ಇದೆ. ಕಳೆದ ಐದು ವರ್ಷಗಳಿಂದ ದೇಶಕ್ಕಾಗಿ ಮೋದಿ ತ್ಯಾಗ ಮಾಡಿದ್ದಾರೆ. ಯಾವುದೇ ಸ್ವಾರ್ಥತೆ ಮೋದಿ ಅವರಲ್ಲಿ ಕಾಣಲು ಸಾಧ್ಯವಿಲ್ಲ. ದೇಶವನ್ನು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಗಳಿಂದಾಗಿ ಯಾವುದೇ ಸಾಧನೆ ಆಗಿರಲಿಲ್ಲ. ಆದರೆ ಮೋದಿ ಅವರು ಬಂದ ಮೇಲೆ ವಿಶ್ವ ಮಟ್ಟದಲ್ಲಿ ಭಾರತ ದೇಶವನ್ನು ಗುರುತು ಮಾಡಿದ್ದಾರೆ ಎಂದು ತಿಳಿಸಿದರು. ಆಯ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಶಕ್ತಿ ಕೇಂದ್ರದ ಪ್ರಮುಖರ ಸಮ್ಮೇಳನ, ಪ್ರಬುದ್ಧರ ಗೋಷ್ಠಿ, ಊರಿನ ಯಜಮಾನರ ಸಂಪರ್ಕ ಸಾಧನೆ, ಯುವ ಸಂಸತ್‌, ಮೇರಾ ಪರಿವಾರ ಬಿಜೆಪಿ ಅಭಿಯಾನ, ಫಲಾನುಭವಿಗಳ ಸಂಪರ್ಕ, ಕಮಲ ಜ್ಯೋತಿ ಸಂಕಲ್ಪ ಉತ್ಸವ, ಬೈಕ್‌ ಮಹಾ ರ್ಯಾಲಿ, ಹತ್ತು ದಿನಗಳ ವಿಸ್ತಾರಕ ಯೋಜನೆ, ಬೆಳಗ್ಗೆ 10 ಗಂಟೆಯೊಳಗೆ ಮತದಾನ ಕೇಂದ್ರಕ್ಕೆ ಮತದಾರರನ್ನು ಕಳುಹಿಸಿ ಮತದಾನ ಮಾಡಿಸುವ ಹೊಣೆಗಾರಿಕೆ, ಮೇರಾ ಬೂತ್‌, ಸಬ್‌ ಸೇ ಮಜಬೂತ್‌ ಇಷ್ಟು ಕಾರ್ಯಕ್ರಮಗಳನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಚಾಚೂತಪ್ಪದೆ ಮಾಡಿದರೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಬಡವರು, ರೈತ ಕುಟುಂಬಗಳು, ಕೂಲಿ ಕಾರ್ಮಿಕರು, ನೌಕರರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.

ಮಹಾಘಟ ಬಂಧನ್‌ ಸ್ವಾರ್ಥಕ್ಕಾಗಿ ಒಂದಾಗಿದ್ದಾರೆ. ದೇಶಕ್ಕೆ ಮೋಸ ಮಾಡಲು ಇವರೆಲ್ಲ ತುದಿಗಾಲ ಮೇಲೆ ನಿಂತಿದ್ದಾರೆ. ಇದರಿಂದ ದೇಶ ಲೂಟಿ ಆಗುತ್ತದೆ. ಮಹಾಘಟ ಬಂಧನ್‌ ನಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಮಹಾಘಟ ಬಂಧನ್‌ ಅಧಿಕಾರಕ್ಕೆ ಬಂದಲ್ಲಿ ವಾರಕ್ಕೊಮ್ಮೆ ಪ್ರಧಾನಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಬೇಕಾಗುತ್ತದೆ. ಏಕೆಂದರೆ ಅಲ್ಲಿರುವವರೆಲ್ಲರೂ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆಂದು ಟೀಕಿಸಿದರು.

ಪಕ್ಷದ ಕಾರ್ಯಕರ್ತರು ಮತದಾರರ ಮನೆಗೆ ಧೈರ್ಯವಾಗಿ ಹೋಗಿ ಮತ ಕೇಳಬಹುದು. ಏಕೆಂದರೆ ಮೋದಿ ಸ್ವತ್ಛ ಆಡಳಿತ ನೀಡಿದ್ದಾರೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ಕಾಂಗ್ರೆಸ್‌ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಇನ್ನಿಲ್ಲದ ಸರ್ಕಲ್‌ ಮಾಡಲಾಗುತ್ತಿದೆ. ಪ್ರಿಯಾಂಕಾ ಗಾಂಧಿ ಪತಿ ವಾದ್ರಾ ಪ್ರಕರಣ ಇದಕ್ಕೆ ಸಾಕ್ಷಿ ಎಂದು ವಾಗ್ಧಾಳಿ ಮಾಡಿದರು.

Advertisement

ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲಲೇ ಬೇಕು. ಇಂದಿನಿಂದಲೇ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು. 

ರೈತ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದ್ದು, ಪ್ರಧಾನ ಮಂತ್ರಿಗಳ ಫಸಲ್‌ ಬೀಮಾ ಯೋಜನೆ, ಜನ್‌ಧನ್‌, ವಾರ್ಷಿಕ ರೈತರಿಗೆ ಆರು ಸಾವಿರು ರೂ. ಕೊಡುಗೆ, ಉಜ್ವಲ ಯೋಜನೆ ಅಡಿ ಬಡವರಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿದ್ದು ಹೀಗೆ ಹತ್ತಾರು ಯೋಜನೆಗಳನ್ನು ಮೋದಿಜೀ ಜಾರಿಗೆ ತಂದಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಎಲ್ಲ ಯೋಜನೆಗಳನ್ನು ಮತದಾರರ ಮನೆಗಳಿಗೆ ತಲುಪಿಸುವ ಕಾರ್ಯ ಕಾರ್ಯಕರ್ತರದಾಗಿದೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಮೋದಿ ಅವರ ಸಾಧನೆಗಳನ್ನು ಹೇಳಬೇಕು. ಅಲ್ಲದೆ ಬಿಜೆಪಿಗೆ ಏತಕ್ಕಾಗಿ ಮತ ನೀಡಬೇಕು ಎನ್ನುವುದನ್ನು ಮತದಾರರಿಗೆ ತಿಳಿಸಬೇಕಾಗಿದೆ ಎಂದು
ಹೇಳಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ನವೀನ್‌, ವಕ್ತಾರರಾದ ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್‌, ರತ್ನಮ್ಮ, ಚಿತ್ರದುರ್ಗ ಲೋಕಸಭಾ ಉಸ್ತುವಾರಿ ಟಿ.ಜಿ.ನರೇಂದ್ರ ನಾಥ್‌, ಸಹ ಪ್ರಭಾರಿ ಜಿ.ಎಂ. ಸುರೇಶ್‌, ಮುರುಳಿ, ಮಲ್ಲಿಕಾರ್ಜುನ್‌, ವೆಂಕಟಸ್ವಾಮಿ, ಸಿದ್ದೇಶ್‌ ಯಾದವ್‌, ಶೈಲಾಜರೆಡ್ಡಿ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next