Advertisement

ಲಂಕಾಗೆ ಅಭಯ

01:42 AM Jun 10, 2019 | Team Udayavani |

ಕೊಲಂಬೊ: ದಶಕಗಳ ನಂತರ ಮತ್ತೆ ಚಿಗುರೊಡೆದಿರುವ ಭಯೋತ್ಪಾದನೆಯಿಂದಾಗಿ ತತ್ತರಿಸಿರುವ ಶ್ರೀಲಂಕಾದ ಐಕ್ಯಮತವನ್ನು ಕಾಪಾಡುವಲ್ಲಿ ಭಾರತ ಎಂದೆಂದಿಗೂ ಆ ದೇಶದ ಬೆನ್ನಿಗೆ ನಿಂತಿರುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ನಿವಾಸಿಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

ತಮ್ಮ ಎರಡು ದಿನಗಳ ವಿದೇಶ ಪ್ರವಾಸದಲ್ಲಿ ಮಾಲ್ಡೀವ್ಸ್‌ ಭೇಟಿ ಮುಗಿಸಿ, ಭಾರತದ ಕಡೆಗೆ ಭಾನುವಾರ ಮರಳುವಾಗ, ಮಾರ್ಗ ಮಧ್ಯೆ ಶ್ರೀಲಂಕಾಕ್ಕೆ ಭೇಟಿ ನೀಡಿದರು. ಇತ್ತೀಚೆಗೆ ನಡೆದಿದ್ದ ಈಸ್ಟರ್‌ ಸರಣಿ ಸ್ಫೋಟಕ್ಕೆ ತುತ್ತಾದ ಚರ್ಚ್‌ಗಳಲ್ಲೊಂದಾದ ಸೇಂಟ್ ಅಂಥೋನಿಯವರ ಚರ್ಚ್‌ಗೆ ಭೇಟಿ ನೀಡಿ, ಅಲ್ಲಿನ ಘಟನಾವಳಿಗಳನ್ನು ನೆನೆದು ಮಮ್ಮಲ ಮರುಗಿದರು.

ಭಯೋತ್ಪಾದಕರ ದಾಳಿಯು ಹೇಡಿತನದ ಕೃತ್ಯವೆಂದು ಬಣ್ಣಿಸಿದ ಅವರು, ಇಂಥ ಘಟನೆಗಳ ಹೊರತಾಗಿಯೂ ಶ್ರೀಲಂಕಾ ಮತ್ತೆ ಖಂಡಿತವಾಗಿಯೂ ಪುಟಿದೇಳುತ್ತದೆ. ಸ್ಫೋಟದಲ್ಲಿ ತಮ್ಮ ಸಂಬಂಧಿಗಳನ್ನು ಕಳೆದುಕೊಂಡ ಮನೆಯವರಿಗೆ ನನ್ನ ಸಾಂತ್ವನಗಳು ಎಂದರು. ಅಂದಹಾಗೆ, ಸರಣಿ ಸ್ಫೋಟದ ನಂತರ ಲಂಕಾಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ಗಣ್ಯರೆಂದು ಮೋದಿ ಪರಿಗಣಿಸಲ್ಪಟ್ಟಿದ್ದಾರೆ. ಅಲ್ಲದೆ, ವಿಶ್ವನಾಯಕರೊಬ್ಬರ ಭೇಟಿಯು ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಶ್ರೀಲಂಕಾಗೆ ಭರವಸೆಯನ್ನು ಮೂಡಿಸಿದೆ.

ಅಶೋಕ ಸಸಿ, ಬುದ್ಧನ ವಿಗ್ರಹ: ಮೋದಿಯವರು ಅಧ್ಯಕ್ಷರ ನಿವಾಸದ ಆವರಣದಲ್ಲಿ ಉಭಯ ದೇಶಗಳ ಸ್ನೇಹದ ಸಂಕೇತವಾಗಿ ಅಶೋಕ ಮರದ ಸಸಿಯೊಂದನ್ನು ನೆಟ್ಟರು. ಆನಂತರ, ಲಂಕಾ ಅಧ್ಯಕ್ಷ ಸಿರಿಸೇನಾ ಅವರು ಮೋದಿಯವರಿಗೆ ಸಮಾಧಿ ಸ್ಥಿತಿಯಲ್ಲಿರುವ ಬುದ್ಧನ ಪುತ್ಥಳಿಯನ್ನು ನೀಡಿ ಗೌರವಿಸಿದರು. 4ನೇ ಶತಮಾನದಿಂದ 7ನೇ ಶತಮಾನದ ಅವಧಿಯಲ್ಲಿ ಪುರಾತನ ಶ್ರೀಲಂಕಾದಲ್ಲಿ ಅನುರಾಧಾಪುರ ಎಂಬ ರಾಜ್ಯವು ಅಸ್ತಿತ್ವದಲ್ಲಿದ್ದಾಗ ಕೆತ್ತಲಾಗಿದೆ ಎಂಬ ಐತಿಹ್ಯ ಹಾಗೂ ವಿಶೇಷಣಗಳು ಈ ಪುತ್ಥಳಿಗೆ ಇದೆ.

ದ್ವಿಪಕ್ಷೀಯ ಮಾತುಕತೆ: ಮಧ್ಯಾಹ್ನದ ಹೊತ್ತಿಗೆ ಅಧ್ಯಕ್ಷರ ನಿವಾಸದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಮೋದಿ ಮತ್ತು ಮೈತಿಪಾಲ ಸಿರಿಸೇನಾ ಭಾಗವಹಿಸಿದ್ದರು. ಭದ್ರತೆಯ ವಿಚಾರದಲ್ಲಿ ಪರಸ್ಪರ ಸಹಕಾರ, ವಾಣಿಜ್ಯ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಮಾತುಕತೆ ಕೇಂದ್ರೀಕೃತವಾಗಿತ್ತು. ಮಾತುಕತೆಯ ನಂತರ ಸಂಜೆಯ ಹೊತ್ತಿಗೆ ಪ್ರಧಾನಿ ಲಂಕಾದಿಂದ ಸ್ವದೇಶಕ್ಕೆ ಮರಳಿದರು.

Advertisement

ಭಾರತೀಯರ ಜತೆ ಸಂವಾದ: ಲಂಕಾದಲ್ಲಿರುವ ಭಾರತೀಯರೊಂದಿಗೆ ಸಂವಾದ ನಡೆಸುವ ಮೂಲಕ ಅಲ್ಲಿನ ಭಾರತೀಯರಲ್ಲಿ ಮೋದಿ ವಿದ್ಯುತ್‌ ಸಂಚಲನ ಉಂಟು ಮಾಡಿದರು. ಕೊಲಂಬೋದಲ್ಲಿ ಆಯೋಜಿಸಲಾಗಿದ್ದ ಈ ಸಂವಾದದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನಗಳೆದಂತೆ ವೃದ್ಧಿಸುತ್ತಿದೆ. ಇದಕ್ಕೆ ಭಾರತದಿಂದ ವಿದೇಶಗಳಿಗೆ ವಲಸೆ ಹೋಗಿರುವ ಅನಿವಾಸಿ ಭಾರತೀಯರ ಪಾಲೂ ಗಣನೀಯವಾಗಿದೆ ಎಂದರು.

ಪ್ರಜಾಪ್ರಭುತ್ವ, ಭಾರತದ ಅಂತಃಸತ್ವವಾಗಿದ್ದು, ಅದರ ಆಧಾರದ ಮೇಲೆ ಕಳೆದೈದು ವರ್ಷಗಳಲ್ಲಿ ತಮ್ಮ ಸರ್ಕಾರ ಗಣನೀಯವಾದದ್ದನ್ನು ಸಾಧಿಸಿದೆ. ಇನ್ನೂ ಅನೇಕವನ್ನು ಸಾಧಿಸಬೇಕಿದೆ. ಜನರ ಆಶಯಗಳನ್ನು ಪೂರೈಸುವಲ್ಲಿ ಯಾವುದೇ ಅಪಸ್ವರ ಕಾಣಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದರು.

ಛತ್ರಿ ಹಿಡಿದು ಸ್ವಾಗತಿಸಿದ ಮೈತಿಪಾಲ

ಚರ್ಚ್‌ ಭೇಟಿಯ ನಂತರ, ಶ್ರೀಲಂಕಾದ ಅಧ್ಯಕ್ಷ ಮೈತಿಪಾಲ ಸಿರಿಸೇನಾ ಅವರ ನಿವಾಸಕ್ಕೆ ತೆರಳಿದ ಮೋದಿಯವರಿಗೆ ಅಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಸಣ್ಣಗೆ ಸುರಿಯುತ್ತಿದ್ದ ಮಳೆಯಲ್ಲೇ ಬಿಗಿ ಭದ್ರತೆಯೊಂದಿಗೆ ಬಂದ ಮೋದಿ ಯವರ ಕಾರು ನಿವಾಸದ ಮುಂದೆ ನಿಲ್ಲುತ್ತಲೇ ಸಿರಿಸೇನಾ ಅವರೇ ಖುದ್ದಾಗಿ ಛತ್ರಿ ಹಿಡಿದು ಕಾರಿನತ್ತ ತೆರಳಿ ಮೋದಿಯವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ನನ್ನ ಹೃದಯದಲ್ಲಿ ಲಂಕಾಕ್ಕೆ ವಿಶೇಷ ಸ್ಥಾನವಿದೆ. ಶ್ರೀಲಂಕಾದ ನನ್ನ ಸಹೋದರ, ಸಹೋದರಿಯರ ನೋವು, ನಲಿವುಗಳೊಂದಿಗೆ ಜತೆಗಿರುತ್ತೇವೆ. ಅವರ ಬೆಂಬಲಕ್ಕೆ ಭಾರತ ಸದಾ ಸಿದ್ಧವಿರುತ್ತದೆ.
-ನರೇಂದ್ರ ಮೋದಿ, ಪ್ರಧಾನಿ
Advertisement

Udayavani is now on Telegram. Click here to join our channel and stay updated with the latest news.

Next