Advertisement
ಹೀಗೆಂದು ಹೇಳಿರುವುದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ದಿನ ಸಮೀಪಿಸುತ್ತಿರು ವಂತೆಯೇ “ರಾಷ್ಟ್ರಧರ್ಮ’ ನಿಯತ ಕಾಲಿಕದ ವಿಶೇಷ ಆವೃತ್ತಿಗೆ ಬರೆದಿರುವ ಲೇಖನದಲ್ಲಿ ಆಡ್ವಾಣಿ ಅವರು, ರಾಮ ಮಂದಿರಕ್ಕಾಗಿ ತಾವು 33 ವರ್ಷಗಳ ಹಿಂದೆ ಕೈಗೊಂಡ ರಥಯಾತ್ರೆ, ಮಂದಿರ ನಿರ್ಮಾಣ ಸಹಿತ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅಯೋಧ್ಯೆ ಚಳವಳಿಯು ನನ್ನ ರಾಜಕೀಯ ಪಯಣದ ಅತ್ಯಂತ ನಿರ್ಣಾಯಕ ಮತ್ತು ಪರಿವರ್ತ ನೀಯ ಘಟನೆಯಾಗಿದೆ. ಇದರಿಂದ ಭಾರತದ ಮರು ಆವಿಷ್ಕಾರದ ಜತೆ ಜತೆಗೇ ನನ್ನನ್ನು ನಾನು ಮತ್ತೂಮ್ಮೆ ಅರ್ಥ ಮಾಡಿಕೊಳ್ಳಲು ಸಾಧ್ಯವಾ ಯಿತು ಎಂದು ಆಡ್ವಾಣಿ ಲೇಖನದಲ್ಲಿ ಹೇಳಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿರುವಂಥ ಈ ಹೊತ್ತಿನಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರ ಅನುಪಸ್ಥಿತಿ ನನಗೆ ಕಾಡುತ್ತಿದೆ ಎಂದೂ ಅವರು ಲೇಖನದಲ್ಲಿ ಬೇಸರ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
Related Articles
ರಥಯಾತ್ರೆ ನಡೆದು 33 ವರ್ಷಗಳು ಪೂರ್ಣಗೊಂಡಿವೆ. 1990ರ ಸೆ. 25ರಂದು ನಾವು ರಥಯಾತ್ರೆ ಆರಂಭಿಸಿದಾಗ, ಶ್ರೀರಾಮನ ಮೇಲಿನ ನಂಬಿಕೆಯಿಂದ ನಾವು ಆರಂಭಿಸಿದ ಈ ರಥಯಾತ್ರೆಯು ದೇಶಾದ್ಯಂತ ದೊಡ್ಡ ಚಳವಳಿಯಾಗಿ ರೂಪುಗೊಳ್ಳಲಿದೆ ಎಂದು ನಾವು ಊಹಿಸಿಯೇ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಂದಿನ ಚಳವಳಿಯುದ್ದಕ್ಕೂ ನಮಗೆ ಸಾಥ್ ನೀಡಿದ್ದರು. ಆಗ ಅವರು ಅಷ್ಟೊಂದು ಜನಪ್ರಿಯರಾಗಿರಲಿಲ್ಲ. ಆದರೆ ಆ ಕ್ಷಣದಲ್ಲೇ ಭಗವಾನ್ ಶ್ರೀರಾಮನು ತನ್ನ ಮಂದಿರವನ್ನು ಮರುನಿರ್ಮಾಣ ಮಾಡಲು ತನ್ನ ಭಕ್ತನನ್ನು ಆಯ್ಕೆ ಮಾಡಿ ಆಗಿತ್ತು. ಆ ಸಮಯದಲ್ಲಿ ನನ್ನ ಮನಸ್ಸಿನಲ್ಲೂ ಒಂದಲ್ಲ ಒಂದು ದಿನ ಅಯೋಧ್ಯೆಯಲ್ಲಿ ಖಂಡಿತ ಭವ್ಯ ರಾಮಮಂದಿರ ತಲೆ ಎತ್ತಬೇಕೆಂದು ಭಗವಂತ ನಿರ್ಧರಿಸಿದ್ದಾನೆ ಎಂಬ ಯೋಚನೆ ಮೂಡಿತ್ತು. ವಿಳಂಬವಾದರೂ ಆ ಕ್ಷಣ ಈಗ ಸಾಕಾರಗೊಳ್ಳುತ್ತಿರುವುದು ಹರ್ಷದ ಸಂಗತಿ ಎಂದು ಆಡ್ವಾಣಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.
Advertisement
ಎಷ್ಟೋ ಜನರ ಆಸೆ ಸಾಕಾರರಥಯಾತ್ರೆಯ ಸಮಯದಲ್ಲಿ ನಡೆದ ಅನೇಕ ಘಟನೆಗಳು ನನ್ನ ಬದುಕಿನ ಮೇಲೆ ಪ್ರಭಾವ ಬೀರಿದವು. ರಥವನ್ನು ನೋಡುತ್ತಲೇ ದೂರ ದೂರದ ಗ್ರಾಮಗಳಿಂದ ಪರಿಚಯವೇ ಇಲ್ಲದ ವ್ಯಕ್ತಿಗಳು ನನ್ನ ಬಳಿ ಬಂದು ಹರ್ಷೋದ್ಗಾರ ಮಾಡುತ್ತಿದ್ದರು, ಭಾವುಕರಾಗುತ್ತಿದ್ದರು. ಪ್ರಣಾಮ ಮಾಡಿ, ಶ್ರೀ ರಾಮನ ಜಪ ಮಾಡಿ, ಹಿಂದಿರುಗುತ್ತಿದ್ದರು. ಕೋಟ್ಯಂತರ ಜನರು ರಾಮ ಮಂದಿರದ ಕನಸು ಕಾಣುತ್ತಿದ್ದಾರೆ ಎನ್ನುವುದಕ್ಕೆ ಈ ಘಟನೆಗಳೇ ಸಾಕ್ಷಿಯಾದವು. ಈಗ ಇದೇ 22ರಂದು ಮಂದಿರದ ಉದ್ಘಾಟನೆಯ ಮೂಲಕ ಈ ಹಳ್ಳಿಗಳ ಜನರ ಬಯಕೆಯು ಈಡೇರುತ್ತಿದೆ ಎಂದೂ ಆಡ್ವಾಣಿ ಬರೆದುಕೊಂಡಿದ್ದಾರೆ.