ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮನೆಯಲ್ಲಿ ನಡೆದ ಗಣಪತಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಹಾಜರಾಗಿದ್ದು ರಾಜಕೀಯವಾಗಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ಮೋದಿ ಭೇಟಿ ಬಗ್ಗೆ ವಿಪಕ್ಷಗಳ ನಾಯಕರು, ಸುಪ್ರೀಂ ಕೋರ್ಟ್‌ನ ಕೆಲವು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಬಿಜೆಪಿ ಇದನ್ನು ಸಮರ್ಥಿಸಿಕೊಂಡಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರಕ್ಕೆ ಸಂಬಂಧಿ ಸಿದ ಹಲವು ಕೇಸ್‌ಗಳಿವೆ. ಅವು ಪದೇ ಪದೆ ಮುಂದೂ ಡಲ್ಪಡುತ್ತಲೇ ಇವೆ. ಈ ಹೊತ್ತಿನಲ್ಲಿ ಇಬ್ಬರ ಭೇಟಿ ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸುತ್ತದೆ. ಆದ್ದರಿಂದ ಸಿಜೆಐ ಡಿ.ವೈ.ಚಂದ್ರಚೂಡ್ ಪ್ರಕರಣದ ವಿಚಾರಣೆಯಿಂದಲೇ ಹಿಂದೆ ಸರಿಯಬೇಕು ಎಂದು ಶಿವಸೇನೆ ಉದ್ಧವ್ ಬಣದ ಸಂಸದ ಸಂಜಯ್ ರಾವತ್ ಒತ್ತಾಯಿಸಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಪ್ರತಿಕ್ರಿಯಿಸಿ, “ಈ ಬೆಳವಣಿಗೆಯಿಂದ ಕಾರ್ಯಾಂಗ- ನ್ಯಾಯಾಂಗ ನಡುವೆ ಇರಬೇಕಾದ ಅಧಿಕಾರಗಳ ಪ್ರತ್ಯೇಕತೆಯೊಂದಿಗೆ ರಾಜಿ ಮಾಡಿಕೊಂಡಂತಾಗಿದೆ’ ಎಂದಿದ್ದಾರೆ. ಆರ್‌ಜೆಡಿ ನಾಯಕ, ರಾಜ್ಯಸಭಾ ಸದಸ್ಯ ಮನೋಜ್ ಝಾ ಪ್ರತಿಕ್ರಿಯಿಸಿ, ದೊಡ್ಡ ಸ್ಥಾನದಲ್ಲಿರುವ ಇಬ್ಬರು ಗಣಪತಿ ಪೂಜೆಯಲ್ಲಿ ಒಟ್ಟಾಗಿ ಪಾಲ್ಗೊಂಡಿರುವ ಚಿತ್ರ ಪ್ರಕಟಿಸುತ್ತಾರೆಂದರೆ, ಅದು ಸೂಕ್ತ ಸಂದೇಶ ನೀಡುವುದಿಲ್ಲ ಎಂದಿದ್ದಾರೆ.
ಪ್ರಧಾನಿ ಯಾವತ್ತೂ ಸಿಜೆಐ ಮನೆಗೆ ತೆರಳಿದ್ದನ್ನು ನಾನು ಕೇಳಿರಲಿಲ್ಲ. ಆಶ್ಚರ್ಯವಾಗಿದೆ. ಆದರೂ ನನಗೆ ಕಾನೂನು ಹಾಗೂ ಸಿಜೆಐ ಮೇಲೆ ಸಂಪೂರ್ಣ ನಂಬಿಕೆ ಇದೆ. ಪ್ರಧಾನಿಯನ್ನು ಆಹ್ವಾನಿಸುವುದಕ್ಕೂ ಮುನ್ನ ಅವರು ಯೋಚಿಸಿ ನಿರ್ಧರಿಸಿರುತ್ತಾರೆ ಎಂದು ಭಾವಿಸುತ್ತೇನೆ.- ಸುಪ್ರಿಯಾ ಸುಳೆ, ಎನ್‌ಸಿಪಿ ಸಂಸದೆ
ಸಿಜೆಐ ಮನೆಗೆ ಪ್ರಧಾನಿ ಖಾಸಗಿ ಭೇಟಿಗೆ ಅವಕಾಶ ನೀಡಿರುವುದು ನಿಜಕ್ಕೂ ಆಘಾತಕಾರಿ. ನಾಗರಿಕರ ಮೂಲಭೂತ ಹಕ್ಕು ರಕ್ಷಣೆಯ ಜವಾಬ್ದಾರಿ ಹೊತ್ತಿರುವ ನ್ಯಾಯಾಂಗದ ಬಗ್ಗೆ ಇದು ಕೆಟ್ಟ ಸಂದೇಶ ರವಾನಿಸುತ್ತದೆ. ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ಕೊಂಚ ಅಂತರ ಕಾಯ್ದುಕೊಳ್ಳಬೇಕು.-ಪ್ರಶಾಂತ್ ಭೂಷಣ್, ವಕೀಲ
ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ: ಬಿಜೆಪಿ ಸಮರ್ಥನೆ
ವಿಪಕ್ಷಗಳ ಆರೋಪಗಳಿಗೆ ಬಿಜೆಪಿ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ನಾಯಕ ಶೆಹಜಾದ್ ಪೂನವಾಲ ಟ್ವೀಟ್ ಮಾಡಿ, ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ. ಮದುವೆ ಸೇರಿದಂತೆ ಹಲವು ಶುಭಕಾರ್ಯಗಳಲ್ಲಿ ಪ್ರಧಾನಿ, ಸಿಜೆಐ ಪಾಲ್ಗೊಂಡ ಕೂಡಲೇ ಸರ್ವೋಚ್ಚ ನ್ಯಾಯಾಲಯದ ಬದ್ಧತೆಯನ್ನೇ ಪ್ರಶ್ನಿಸುತ್ತಾರೆಂದರೆ, ಇದು ನಾಚಿಕೆಗೇಡಿನ ನ್ಯಾಯಾಂಗ ನಿಂದನೆ ಎಂದು ಹೇಳಿದ್ದಾರೆ.
2009ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಆಗಿನ ಸಿಜೆಐ ಕೆ.ಜಿ.ಬಾಲಕೃಷ್ಣನ್ ಅದರಲ್ಲಿ ಪಾಲ್ಗೊಂಡಿದ್ದರು. ಆಗ ಜಾತ್ಯತೀತತೆ, ನ್ಯಾಯಾಂಗ ಸುರಕ್ಷಿತ. ಮೋದಿ ಸಿಜೆಐ ಮನೆಯಲ್ಲಿ ಗಣಪತಿ ಪೂಜೆಯಲ್ಲಿ ಪಾಲ್ಗೊಂಡರೆ ನ್ಯಾಯಾಂಗ ರಾಜಿ ಮಾಡಿಕೊಂಡಿದೆ ಎನ್ನಲಾಗುತ್ತದೆ ಎಂದೂ ಶೆಹಜಾದ್ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ಸಚಿವ ಭೂಪೇಂದ್ರ ಯಾದವ್, ಆಂಧ್ರ ಬಿಜೆಪಿ ಅಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ, ಮುಖ್ಯಮಂತ್ರಿ ನ್ಯಾಯಮೂರ್ತಿ ಮನೆಯಲ್ಲಿನ ಗಣಪತಿ ಪೂಜೆಯಲ್ಲಿ ಮೋದಿ ಅವರು ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್‌ಗೆ ತಮ್ಮ ನಾಯಕ ರಾಹುಲ್ ಅಮೆರಿಕದಲ್ಲಿ ಭಾರತ ವಿರೋಧಿ ಇಲ್ಹಾನ್ ಒಮರ್‌ರನ್ನು ಭೇಟಿಯಾಗುವುದು ಸರಿ. ದೇಶದ ಸಿಜೆಐ ಮನೆಗೆ ಪ್ರಧಾನಿ ಭೇಟಿ ನೀಡುವುದು ತಪ್ಪು. -ಸಂಬೀತ್ ಪಾತ್ರಾ, ಬಿಜೆಪಿ ಸಂಸದ