Advertisement

ಗ್ರಾಮೀಣ ಅಂತರಂಗದಲ್ಲಿ ಮೋದಿ ವರ್ಸಸ್‌ ಕುಲಕರ್ಣಿ!

11:24 AM Apr 21, 2019 | Team Udayavani |

ಧಾರವಾಡ: ಯಾರ ಬಂದ್ರೇನು, ನಮ್ಮ ಪಾಡು ನಮಗ.. ಅಂತಾರ ಕಟ್ಟಿಗೆ ಕಡೀತಾ ನಿಂತ ದೇವಕ್ಕ. ಬಿಜೆಪಿಯವರು ಬಿಜೆಪಿಗ ವೋಟ್ ಹಾಕತಾರ, ಕಾಂಗ್ರೆಸ್‌ನವರ ಕಾಂಗ್ರೆಸ್‌ಗ ವೋಟ್ ಹಾಕತಾರ, ನಾವ್‌ ಅಂತೂ ನಮ್ಮ ಊರ ಕೆಲಸ ಯಾರ ಮಾಡ್ಯಾರೋ ಮುಂದ ಮಾಡತಾರ ಅಂತ ನಮಗ ಹೇಳ್ತಾರೋ ಅವರಿಗೆ ನಮ್ಮ ವೋಟ್ ಸಿಗತೈತಿ.. ಅಂತ ಹೇಳತಾರ ಧಾರವಾಡ ಗ್ರಾಮೀಣ ಮತಕ್ಷೇತ್ರ-71ರ ಮತದಾರ ಪ್ರಭುಗಳು.

Advertisement

ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದ್ದು, ಜೋಶಿ ವಿರುದ್ಧ ಕುಲಕರ್ಣಿ ಬದಲಿಗೆ ಮೋದಿ ವಿರುದ್ಧ ಕುಲಕರ್ಣಿ ಸ್ಪರ್ಧೆ ಇದೆ. ಅದರಲ್ಲೂ ಈಗ ವೀರಶೈವ-ಲಿಂಗಾಯತ ಹಾಗೂ ಬ್ರಾಹ್ಮಣ ಜಾತಿಯ ತಿಕ್ಕಾಟಕ್ಕೂ ವೇದಿಕೆ ಸಿಕ್ಕಂತಾಗಿದೆ. ಹೀಗಾಗಿ ಜಾತಿ ತಿಕ್ಕಾಟ, ಅದರ ಲೆಕ್ಕಾಚಾರಗಳ ಬಿಸಿ-ಬಿಸಿ ಚರ್ಚೆಗಳು ಮತದಾರರಲ್ಲಿ ಮೂಡುವಂತೆ ಮಾಡಿವೆ.

ಧಾರವಾಡ ನಗರದ ಎಂಟು ವಾರ್ಡ್‌ ಸೇರಿ ನಗರ ಹಾಗೂ ಗ್ರಾಮೀಣ ಸಮ್ಮಿಲನ ಇದ್ದು, ರೈತಾಪಿ, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರೇ ಜಾಸ್ತಿ. ರಸ್ತೆ, ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿದಿದೆ. ಆದರೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಯೋಜನೆ ಅನುಷ್ಠಾನ ಅಗತ್ಯವಿದ್ದು, ರೂಪುರೇಷೆ ಸಿದ್ಧವಾಗಿದ್ದರೂ ಅನುಷ್ಠಾನ ಮಾತ್ರ ಆಗಿಲ್ಲ.

ಜಾತ್ರೆಗಳಲ್ಲೂ ಚರ್ಚೆ: ಬಹುತೇಕ ಗ್ರಾಮಗಳ ಜಗಲಿಕಟ್ಟೆ, ದೇವಸ್ಥಾನ ಆವರಣಗಳಲ್ಲಿ ಚುನಾವಣೆಯೇ ಚರ್ಚಾ ವಸ್ತು. ಹೆಬ್ಬಳ್ಳಿ, ಕಲ್ಲೂರ, ಉಪ್ಪಿನಬೆಟಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾಲು-ಸಾಲು ಜಾತ್ರೆಗಳ ಸುಗ್ಗಿ ನಡೆಯುತ್ತಿದ್ದು, ಇಲ್ಲಿ ಕೂಡ ಚುನಾವಣೆಯ ಕಾವು ರಂಗೇರಿಸಿದೆ. ಇನ್ನೂ ಮೋದಿ ಅಲೆಯ ಗುಂಗಿನಲ್ಲಿರುವ ಮತದಾರರ ಕೈ ಹಿಡಿಯಲು ಕಸರತ್ತು ನಡೆದಿದ್ದು, ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿಗಳು ಹಾಗೂ ಅವರ ಪರ ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ಕೈ ಹಿಡಿತದ ಕ್ಷೇತ್ರ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಸ್ವಕ್ಷೇತ್ರ. ಈ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಎರಡು ಸಲ ಗೆಲುವು ಹಾಗೂ ಎರಡು ಸಲ ಸೋಲು ಕಂಡಿದ್ದು, ಇದು ಕುಲಕರ್ಣಿ ಅವರ ಶಕ್ತಿ ಕೇಂದ್ರವೆಂದರೂ ತಪ್ಪಾಗದು.

Advertisement

ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ಸಮಯದಲ್ಲಿ ವಿನಯ ಕುಲಕರ್ಣಿ ಈ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಹರಿಸಿದ್ದು, ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದಾರೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ವಿರುದ್ಧ ಸೋಲುಂಡರು. ಕ್ಷೇತ್ರದ ಮೇಲೆ ಹಿಡಿತ ಇರುವ ಕುಲಕರ್ಣಿ ಅವರ ಬಗ್ಗೆ ಜನರಲ್ಲಿ ಒಲವಿದ್ದರೂ ಸೋಲಿನ ರುಚಿ ತೋರಿಸಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅವರ ಕೈ ಹಿಡಿಯತ್ತಾ ಅಥವಾ ಮೋದಿ ಅಲೆಗೆ ಜೈ ಎನ್ನುತ್ತಾರೋ ಕಾದುನೋಡಬೇಕಿದೆ.

ನಮ್ಮ ಊರ ಕೆಲಸ ಯಾರು ಮಾಡಿದ್ದಾರೋ ಅವರಿಗೆ ನಮ್ಮ ವೋಟು ಹಾಕ್ತೇವೆ. ಊರ ಉದ್ದಾರ ಮಾಡತೇನಿ ಅಂತ ಹೇಳಿ ಮೋಸ ಮಾಡಿದವರಿಗೆ ಈ ಸಲ ವೋಟು ಕೊಡೋದಿಲ್ಲ.
• ಗಂಗಪ್ಪ ಸಂಗೊಳ್ಳಿ, ನರೇಂದ್ರ

ಕ್ಷೇತ್ರದಲ್ಲಿ ಮೋದಿ ಅಲೆ ಕೆಲಸ ಮಾಡುತ್ತಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವಿನಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಬಿಎಸ್‌ವೈ ಸೇರಿದಂತೆ ಘಟಾನುಘಟಿ ನಾಯಕರೇ ಪ್ರಚಾರ ಮಾಡಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಏ. 11ರಂದು ಅಮ್ಮಿನಬಾವಿಯಲ್ಲಿ ವಿಜಯ ಸಂಕಲ್ಪ ಸಮಾವೇಶ ಮೂಲಕ ಬಿಎಸ್‌ವೈ ಪ್ರಚಾರ ಮಾಡಿ ರಣಕಹಳೆ ಮೊಳಗಿಸಿದ್ದಾರೆ. ಆದರೆ ಕಾಂಗ್ರೆಸ್‌ ಪರ ಸಮಾವೇಶ ಈವರೆಗೂ ಆಗಿಲ್ಲ. ಕ್ಷೇತ್ರದಲ್ಲಿ 1,05,081 ಪುರುಷ ಹಾಗೂ 1,02,582 ಮಹಿಳೆಯರು ಸೇರಿ ಒಟ್ಟು 2,07,663 ಮತದಾರರು ಇದ್ದಾರೆ. ಈ ಪೈಕಿ 4082 ಹೊಸದಾಗಿ ಸೇರ್ಪಡೆ ಆಗಿರುವ ಯುವ ಮತದಾರರು.

Advertisement

Udayavani is now on Telegram. Click here to join our channel and stay updated with the latest news.

Next