Advertisement

ಪಾಕ್‌ಗೆ ಮೋದಿ ಟ್ರಂಪ್‌ “ಉಗ್ರ’ಎಚ್ಚರಿಕೆ; ಉಗ್ರರಿಗೆ ಆಶ್ರಯ ಬೇಡ

03:45 AM Jun 28, 2017 | Team Udayavani |

ವಾಷಿಂಗ್ಟನ್‌: ಅಂತೂ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಪಾಕಿಸ್ತಾನವನ್ನು ಒಬ್ಬಂಟಿ ಮಾಡುವ ಯತ್ನದಲ್ಲಿ ಸ್ವಲ್ಪ ಮಟ್ಟಿನ ಯಶ ಕಂಡಿದೆ.

Advertisement

ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಾತುಕತೆ ವೇಳೆ ಆರ್ಥಿಕತೆ, ದ್ವಿಪಕ್ಷೀಯ ಸಂಬಂಧಗಳಿಗಿಂತ ಹೆಚ್ಚಾಗಿ, ಪಾಕಿಸ್ತಾನದ ಭಯೋತ್ಪಾದನೆ ಕುರಿತಂತೆಯೇ ಹೆಚ್ಚು ಚರ್ಚೆಯಾಗಿದೆ. ಆದರೆ, ಇಬ್ಬರೂ ಎಲ್ಲೂ ತಮ್ಮ ಹೇಳಿಕೆಗಳಲ್ಲಿ ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೇ ಹೋದರೂ, ಭಾರತವನ್ನು ಕಾಡುತ್ತಿರುವ ಭಯೋತ್ಪಾದನೆಗೆ ಪಾಕ್‌ ನೆಲವೇ ಕಾರಣ ಎಂದು ಟ್ರಂಪ್‌ ಅವರ ಕಡೆಯಿಂದ ಹೇಳಿಸುವಲ್ಲಿ ಮೋದಿ ಯಶಸ್ಸು ಕಂಡಿದ್ದಾರೆ.

ಈ ಇಬ್ಬರು ನಾಯಕರು ನೀಡಿದ ಜಂಟಿ ಹೇಳಿಕೆಯಲ್ಲಿ ಉಗ್ರವಾದದ ಬಗ್ಗೆ ಹೆಚ್ಚು ಪ್ರಸ್ತಾಪ ಮತ್ತು ಒಟ್ಟಾಗಿ ಹೋರಾಟ ನಡೆಸುವ ಬಗ್ಗೆ ತೀರ್ಮಾನಿಸಿದ್ದೇವೆ ಎಂದರು. ಅಲ್ಲದೆ ನೇರವಾಗಿ ಮುಸ್ಲಿಂ ಭಯೋತ್ಪಾದನೆ ವಿರುದ್ಧ ಮೃಧು ಧೋರಣೆ ಬೇಡವೆಂದು ಟ್ರಂಪ್‌ ಪ್ರತಿಪಾದಿಸಿದರು. ಪಾಕ್‌ ನೆಲದಿಂದ ಕಾರ್ಯಾಚರಣೆ ಮಾಡುತ್ತಿರುವ ಉಗ್ರ ಸಂಘಟನೆಗಳಾದ ಜೈಶ್‌-ಎ-ಮೊಹಮ್ಮದ್‌, ಲಷ್ಕರ್‌-ಎ-ತೋಯ್ಬಾ, ಡಿ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಐಸಿಸ್‌ ಮತ್ತು ಅಲ್‌ ಖೈದಾ ವಿರುದ್ಧ ಎರಡೂ ದೇಶಗಳು ಒಟ್ಟಾಗಿ ಹೋರಾಟ ನಡೆಸಲಿವೆ ಎಂದು ಟ್ರಂಪ್‌ ಹೇಳಿದರು.

ಇನ್ನು ನರೇಂದ್ರ ಮೋದಿ ಅವರು ಮಾತನಾಡಿ, ಭಯೋತ್ಪಾದನೆ, ತೀವ್ರವಾದ ಮತ್ತು ಮೂಲಭೂತವಾದದ ವಿರುದ್ಧ ಹೋರಾಟ ನಡೆಸುವಲ್ಲಿ ಇಬ್ಬರು ನಾಯಕರು ಒಪ್ಪಿಕೊಂಡಿದ್ದೇವೆ. ಉಗ್ರರ ಸ್ವರ್ಗವಾಗಿರುವ ಸ್ಥಳಗಳ ವಿರುದ್ಧ ಮತ್ತು ಅವುಗಳಿಗೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕ್ರಮವೇ ನಮ್ಮ ಪ್ರಮುಖ ಆದ್ಯತೆ ಎಂದರು.  ಭಯೋತ್ಪಾದನೆ ಎನ್ನುವುದೇ ಎರಡೂ ರಾಷ್ಟ್ರಗಳಿಗೆ ಪ್ರಧಾನ ಸವಾಲು. ಅದಕ್ಕಾಗಿ ಗುಪ್ತಚರ ಮಾಹಿತಿ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದೇವೆ ಎಂದು ಮೋದಿ ಹೇಳಿದರು.

ಇದರ ಜತೆಗೆ ರಕ್ಷಣೆ, ವಾಣಿಜ್ಯ ವಹಿವಾಟು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನ ಬಗ್ಗೆಯೂ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಆದರೆ, ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸವಾಲಾಗಿರುವ ಎಚ್‌-1ಬಿ ವೀಸಾ ವಿಚಾರವಾಗಲೀ, ಹವಾಮಾನ ಬದಲಾವಣೆ ಕುರಿತಾಗಲೀ ಉಭಯ ನಾಯಕರ ನಡುವೆ ಚರ್ಚೆ ನಡೆಯಲಿಲ್ಲ.

Advertisement

ಈ ಮಧ್ಯೆ, ಮೋದಿ-ಟ್ರಂಪ್‌ ಅವರ ಜಂಟಿ ಹೇಳಿಕೆಗೆ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿವೆ. ಹೇಳಿಕೆಯಲ್ಲಿ ಮುಸ್ಲಿಂ ಭಯೋತ್ಪಾದನೆ ಎಂಬ ಪದ ಬಳಕೆಯಾಗಬಾರದಿತ್ತು ಎಂದು ಈ ಪಕ್ಷಗಳು ಅಭಿಪ್ರಾಯಪಟ್ಟಿವೆ. ಇದು ಅಮೆರಿಕದ ಅಭಿಪ್ರಾಯವಾಗಿದ್ದು, ಭಾರತ ಒಪ್ಪಿಕೊಳ್ಳಬಾರದಿತ್ತು ಎಂದಿವೆ. ಜತೆಗೆ, “ಭಾರತದ ಆಡಳಿತದಲ್ಲಿರುವ ಜಮ್ಮು -ಕಾಶ್ಮೀರ’ ಎಂಬ ಟ್ರಂಪ್‌ ಹೇಳಿಕೆ ಬಗ್ಗೆ ಮೋದಿ ಪ್ರತಿಭಟಿಸದೇ ಹೋದದ್ದು ಸರಿಯಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮೋದಿಯೇ ಮೊದಲ ವಿದೇಶಿ ಅತಿಥಿ
ಪ್ರವಾಸದ ಪ್ರಧಾನ ಅಂಶವೆಂದರೆ ಅಧ್ಯಕ್ಷರ ನಿವಾಸ ಶ್ವೇತ ಭವನದಲ್ಲಿ ಮೊದಲ ವಿದೇಶಿ ಗಣ್ಯ ಅತಿಥಿಗೆ ಅಂದರೆ  ಪ್ರಧಾನಿ ನರೇಂದ್ರ ಮೋದಿಗೆ ಔತಣಕೂಟ ಏರ್ಪಡಿಸಿದ್ದು. ಒಟ್ಟು 26 ಮಂದಿ ಅದರಲ್ಲಿ ಭಾಗವಹಿಸಿದ್ದರು. ಹಳದಿ ಬಣ್ಣದ ದಿರಿಸು ಧರಿಸಿದ್ದ ಟ್ರಂಪ್‌ ಪತ್ನಿ ಮಿಲಾನಿಯಾ ಟ್ರಂಪ್‌ ಔತಣ ಕೂಟದ ಮೇಲುಸ್ತುವಾರಿ ವಹಿಸಿದ್ದರು. “ಅಮೆರಿಕದ ಮೊದಲ ಮಹಿಳೆ ನನಗಾಗಿ ಈ ಔತಣ ಕೂಟ ಆಯೋಜಿಸಿದ್ದಾರೆ. ಇದು 125 ಕೋಟಿ ಭಾರತೀಯರಿಗೆ ಸಂದ ಗೌರವ’ ಎಂದರು ಪ್ರಧಾನಿ ಮೋದಿ. ಬಳಿಕ  ಪ್ರಧಾನಿ ಮೋದಿಯವರಿಗೆ ಅಧ್ಯಕ್ಷ ಟ್ರಂಪ್‌, ಶ್ವೇತಭವನದಲ್ಲಿ ಅಬ್ರಾಹಾಂ ಲಿಂಕನ್‌ ಇದ್ದ ಕೊಠಡಿ, ಅವರು ಬರೆಯುತ್ತಿದ್ದ ಮೇಜು, ಗೆಟ್ಸ್‌ಬರ್ಗ್‌ನಲ್ಲಿ ಅವರು ಮಾಡಿದ್ದ ಜನಪ್ರಿಯ ಭಾಷಣದ ಪ್ರತಿಯನ್ನು ತೋರಿಸಿದರು.

ಎರಡೂ ರಾಷ್ಟ್ರಗಳು ಭದ್ರತೆಯ ನಿಟ್ಟಿನಲ್ಲಿ ಹೋರಾಟ ಕೈಗೊಂಡಿವೆ. ಇಸ್ಲಾಮಿಕ್‌ ಭಯೋತ್ಪಾದನೆ ಮತ್ತು ಉಗ್ರ ಸಂಘಟನೆಗಳನ್ನು ನಾಶ ಮಾಡಲು ಭಾರತ ಮತ್ತು ಅಮೆರಿಕ ಪಣತೊಟ್ಟಿವೆ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧ ಹೋರಾಟ ನಡೆಸಲು ಒಪ್ಪಿದ್ದೇವೆ. ಉಗ್ರರ ಸ್ವರ್ಗವಾಗಿರುವ ಸ್ಥಳಗಳ ವಿರುದ್ಧ ಮತ್ತು ಅವುಗಳಿಗೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕ್ರಮವೇ ನಮ್ಮ ಆದ್ಯತೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next