Advertisement
ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಭಾರತೀಯ ಸಮುದಾಯದವರು ಹಮ್ಮಿಕೊಂಡಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಭಾಗವಹಿಸಲಿರುವುದು ಒಂದು ಐತಿಹಾಸಿಕ ಘಟನೆಯಾಗಲಿದೆ. ಉಭಯ ದೇಶಗಳ ನಡುವಿನ ಸ್ನೇಹ ಈ ಮೂಲಕ ಮತ್ತಷ್ಟು ಗಟ್ಟಿಗೊಳ್ಳಲಿರುವುದು ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳಿಗೆ ಸೆ. 22ರಂದು ನಡೆಯಲಿರುವ ಈ ಕಾರ್ಯಕ್ರಮ ಮುಖ್ಯವಾಗುತ್ತದೆ.
Related Articles
Advertisement
ಅಮೆರಿಕ ಮತ್ತು ಭಾರತದ ಜನರ ನಡುವಿನ ಬಾಂಧವ್ಯವನ್ನು ಮತ್ತು ಜಗತ್ತಿನ ಎರಡು ಅತಿ ಹಳೆಯ ಪ್ರಜಾಪ್ರಭುತ್ವ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಿಕ್ಕಿರುವ ಅಪೂರ್ವ ಅವಕಾಶ ಇದಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ರಾಜತಾಂತ್ರಿಕ ಜಾಣ್ಮೆಯನ್ನು ನಾವು ತೋರಿಸಬೇಕು.
ಚೀನಾ-ಅಮೆರಿಕ ದರ ಸಮರದಿಂದಾಗಿ ಉಂಟಾಗಿರುವ ವಾಣಿಜ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೂಡ ಇದು ಸುಸಂದರ್ಭ. ದರ ಸಮರದ ಪರಿಣಾಮವಾಗಿ ಭಾರತದ ಮೇಲೂ ಟ್ರಂಪ್ ಹಲವು ನಿರ್ಬಂಧಗಳನ್ನು ಹೇರಿದ್ದಾರೆ. ಈ ಬಗ್ಗೆ ಮೋದಿ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಅಂತೆಯೇ ಸೌದಿಯ ತೈಲ ಬಾವಿಯ ಮೇಲೆ ಡ್ರೋನ್ ದಾಳಿಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆಯೂ ಉಭಯ ನಾಯಕರು ಚರ್ಚಿಸುವ ಸಾಧ್ಯತೆಯಿದೆ. ಈ ಮಾತುಗಳಿಂದ ಹೊರಹೊಮ್ಮುವ ಸಕರಾತ್ಮಕ ಫಲಿತಾಂಶ ಎರಡೂ ದೇಶಗಳಿಗೆ ಪ್ರಯೋಜಕನಕಾರಿಯಾಗಬಹುದು.
ಇವೆಲ್ಲಗಳಿಗಿಂತ ಮಿಗಿಲಾಗಿ ಹೂಸ್ಟನ್ ಕಾರ್ಯಕ್ರಮ ನೆರೆ ರಾಷ್ಟ್ರ ಪಾಕಿಸ್ತಾನ ಹಾಗೂ ಅದರ ಸರ್ವಋತು ಮಿತ್ರ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ತಿಪ್ಪರಲಾಗ ಹಾಕಿದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ ಹಾಗೂ ಅಮೆರಿಕ ಮತ್ತು ಭಾರತ ನಡುವಿನ ಬಾಂಧವ್ಯ ಅಬಾಧಿತ ಎಂಬ ಸ್ಪಷ್ಟ ಸಂದೇಶ ಸದಾ ಭಾರತದ ವಿರುದ್ಧ ಮಸಲತ್ತು ನಡೆಸುತ್ತಿರುವ ಈ ಎರಡು ದೇಶಗಳಿಗೆ ಸಿಗಲಿದೆ.