ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನವೆಂಬರ್ 2 ರಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಅಭಿವೃದ್ಧಿ ಭೂಮಿ ಪೂಜೆಗೆ ತೆರಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಮ್‌ನಲ್ಲಿ ಅಲೆಗ್ಸಾಂಡರ್ ಗೆ ಅರಿಸ್ಟಾಟಲ್ ಪಾಠ ಹೇಳಿದ ಜಾಗವೆಂದು ಒಂದು ಕಲ್ಲಿಟ್ಟು ಇತಿಹಾಸ ಹೇಳುತ್ತಾರೆ. ಆದರೆ ನಮ್ಮಲ್ಲಿ ಅದಕ್ಕಿಂದ ದೊಡ್ಡ ಇತಿಹಾಸವಿದೆ. ಆ ಇತಿಹಾಸವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಇನ್ನು ಸ್ವಲ್ಪ ವರ್ಷ ಕಳೆದರೆ ಬೆಂಗಳೂರಿನ ಜನ ಕೆಂಪೇಗೌಡರನ್ನು ಮರೆಯುತ್ತಾರೆ. ಬೆಂಗಳೂರಿನ ಇತಿಹಾಸವನ್ನು ಮರೆಯುತ್ತಾರೆ. ಆಗಾಗಿ ಇಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಕೇವಲ ಇಲ್ಲಿ ಮಾತ್ರವಲ್ಲದೆ ಕೆಂಪೇಗೌಡರ ಕುರುಹುಗಳು ಇರುವಲ್ಲೆಲ್ಲಾ ಅಭಿವೃದ್ಧಿ ಮಾಡುವ ಕೆಲಸವನ್ನು ಪ್ರಾಧಿಕಾರ ಮಾಡುತ್ತದೆ. ಬೆಂಗಳೂರಿನ ಸುತ್ತ ನಾಲ್ಕು ಸ್ಯಾಟಲೈಟ್ ಟೌನ್ ಗಳನ್ನು ನಿರ್ಮಾಣ ಮಾಡಲಿದ್ದೇವೆ ಎಂದರು.
ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವೆಂದರೆ ವಿಜಯನಗರ ಸಾಮ್ರಾಜ್ಯ. ಆ ಯುಗದಲ್ಲಿ ಅಗಣ್ಯರತ್ನ ಅಂದರೆ ಅದು ಕೆಂಪೇಗೌಡರು. ಬೆಂಗಳೂರು ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಂಪೇಗೌಡರ ಹೆಸರಿನ ವಿಮಾನ ನಿಲ್ದಾಣದಲ್ಲಿ ಬೃಹತ್ ಕೆಂಪೇಗೌಡರ ಪ್ರತಿಮೆಯನ್ನು ಮಾಜಿ ಸಿಎಂ ಬಿಎಸ್‌ವೈ ಅಡಿಗಲ್ಲು ಹಾಕಿದರು. ಕೆಂಪೇಗೌಡರ ಜೀವನ ಸ್ಪೂರ್ತಿಯಾಗಬೇಕೆಂದು ಪ್ರತಿ ಗ್ರಾಮದಿಂದಲೂ ಮಣ್ಣನ್ನು ತೆಗೆದುಕೊಂಡು ಬಂದು ಇಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.
ಇದನ್ನೂ ಓದಿ:ಭೂಗತ ಪಾತಕಿ ದಾವೂದ್ ಬಗ್ಗೆ ಮಾಹಿತಿ ನೀಡಿದ್ರೆ…25 ಲಕ್ಷ ಬಹುಮಾನ: ಎನ್ ಐಎ ಘೋಷಣೆ
ಯಾವ ದೇಶಕ್ಕೆ ಇತಿಹಾಸವಿದೆ ಆ ದೇಶಕ್ಕೆ ಭವಿಷ್ಯವಿದೆ. ನಮ್ಮ ದೇಶದಲ್ಲಿ ಸಾಕಷ್ಟು ಇತಿಹಾಸವಿದೆ. ಕದಂಬರು, ಹೊಯ್ಸಳರು, ಚಾಲುಕ್ಯರು ಅನೇಕ ಅಭಿವೃದ್ಧಿ ಕೆಲಸ ಮಾಡಿ ಹೋಗಿದ್ದಾರೆ. ಕೆಂಪೇಗೌಡರು ಒಬ್ಬ ಪಾಳೆಗಾರನಾಗಿ ಕೇವಲ ಕಂದಾಯ ವಸೂಲಿ ಮಾಡಿದ್ದಲ್ಲದೆ ಬೆಂಗಳೂರಿನ ಕೆರೆಕಟ್ಟೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಸಾಮಾನ್ಯವಾಗಿ ನದಿ ತಟದಲ್ಲಿ ನಗರ ನಿರ್ಮಾಣವಾಗುತ್ತಿತ್ತು. ಆದರೆ ಕೆಂಪೇಗೌಡರು ಎತ್ತರದ ಸ್ಥಳವನ್ನು ಆಯ್ದುಕೊಂಡು ಹೊಸ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದರು. ದೇವನಹಳ್ಳಿಯಿಂದ ಮಾಗಡಿಯವರೆಗೆ ಬೆಂಗಳೂರನ್ನು ಬೆಳೆಸಿದರು. ನಾಲ್ಕು ದಿಕ್ಕುಗಳಲ್ಲಿ ಗೋಪುರ ಕಟ್ಡಿ ಪೇಟೆಗಳ ನಿರ್ಮಾಣ ಮಾಡಿದರು. ಒಕ್ಕಲಿಗರು ಒಕ್ಕಲುತನ ಮಾಡಬೇಕು ಎಂದು ಕೆಂಪೇಗೌಡರು ಪ್ರೋತ್ಸಾಹ ನೀಡಿದರು. ಕೆಂಪೇಗೌಡರು ಬೆಂಗಳೂರು ನಿರ್ಮಾತೃವಲ್ಲ, ಕೆಂಪೇಗೌಡರು ಬೆಂಗಳೂರು ನಾಗರೀಕತೆಯ ನಿರ್ಮಾತೃ ಎಂದು ಸಿಎಂ ಬೊಮ್ಮಾಯಿ ಹೇಳಿದರು.