ಭದ್ರಾವತಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸುವುದರೊಂದಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗೋದು ಸೂರ್ಯ ಚಂದ್ರರಷ್ಟೆ ಸತ್ಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ನೂತನ ಜನಶತಾಬ್ದಿ ರೈಲಿಗೆ ಚಾಲನೆ ನೀಡಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸದ ಬಿ.ವೈ. ರಾಘವೇಂದ್ರ ಅವರ ತೀವ್ರ ಪ್ರಯತ್ನದಿಂದಾಗಿ ಜಿಲ್ಲೆಯ ಜನರಿಗೆ ಅಗತ್ಯವಾಗಿ ಬೇಕಾಗಿದ್ದ ಜನಶತಾಬ್ದಿ ರೈಲು ತನ್ನ ಚಾಲನೆ ಆರಂಭಿಸಿದೆ. ಇದೇರೀತಿ ಚಿತ್ರದುರ್ಗ-ತಿರುಪತಿ, ಶಿವಮೊಗ್ಗ-ಚನ್ನೈ ಮಾರ್ಗಕ್ಕೆ ರೈಲು ಸಂಚರಿಸುವಂತೆ ಆಗಬೇಕೆಂಬ ಕಾರ್ಯದಲ್ಲಿ ಸಂಸದರು ಗಮನಹರಿಸಿ ಪ್ರಯತ್ನ ನಡೆಸಿದ್ದಾರೆ ಎಂದರು.
ವಿಐಎಸ್‌ಎಲ್ ಉಳಿವಿಗೆ ಯತ್ನ: ಕೇಂದ್ರ ಸರಕಾರ ಉತ್ತಮ ಬಜೆಟ್ ಮಂಡಿಸಿದ್ದು, ನಗರದ ವಿಐಎಸ್‌ಎಲ್ ಕಾರ್ಖಾನೆ ಉಳಿಸಲು ಎಲ್ಲ ಪ್ರಯತ್ನವು ಸಾಗಿದೆ. ನೂರು ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಇಎಸ್‌ಐ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಜನ ಶತಾಬ್ದಿ ರೈಲು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಕೆಲವೇ ವಾರದಲ್ಲಿ ಶತಾಬ್ದಿ ರೈಲನ್ನು 4 ದಿನಗಳ ಬದಲು 7 ದಿನಗಳು ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಈ ರೈಲಿನಿಂದ ಪ್ರಯಾಣಿಕರಿಗೆ ತುಂಬ ಅನುಕೂಲವಾಗಲಿದೆ ಎಂದರು.
ಶಾಸಕ ಕೆ.ಬಿ. ಅಶೋಕ್ ನಾಯ್ಕ, ನಗರ ಬಿಜೆಪಿ ಅಧ್ಯಕ್ಷ ಜಿ. ಆನಂದಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್, ಪ್ರವೀಣ್ ಪಾಟೀಲ್, ಶಿವಮೊಗ್ಗ ಜಿಪಂ ಸದಸ್ಯ ನಾಗರಾಜ್ ಇದ್ದರು.