ಅಮರಾವತಿ : ಕಾಕಿನಾಡದಲ್ಲಿ ತನ್ನ ಬೆಂಗಾವಲು ವಾಹನ ಸಾಲನ್ನು ತಡೆದ ಬಿಜೆಪಿ ಕಾರ್ಯಕರ್ತರ ವಿರುದ್ಧ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಿಡಿ ಕಾರಿದ್ದಾರೆ.
ನನ್ನ ವಿರುದ್ಧ ನೀವು ಹೀಗೆ ಮಾಡಿದರೆ ಜನರನ್ನು ನಿಮ್ಮನ್ನು ಬಿಡುವುದಿಲ್ಲ; ಮುಗಿಸಿ ಬಿಡುತ್ತಾರೆ, ಜಾಗ್ರತೆ; ಆಂಧ್ರ ಪ್ರದೇಶದಲ್ಲಿ ಮೋದಿಯನ್ನು ಬೆಂಬಲಿಸುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾರಣಕ್ಕೆ ಸಿಎಂ ನಾಯ್ಡು ಅವರು ಕಾಕಿನಾಡದಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದಾಗ ಅವರ ಬೆಂಗಾವಲು ವಾಹನ ಸಾಲನ್ನು ಬಿಜೆಪಿ ಕಾರ್ಯಕರ್ತರು ತಡೆದು ಪ್ರತಿಭಟಿಸಿದ್ದರು. ಪರಿಣಾಮವಾಗಿ ಪೊಲೀಸರು ಬಿಜೆಪಿ ಜಿಲ್ಲಾ ಅಧ್ಯಕ್ಷ ಮಲಕೊಂಡಯ್ಯ ಅವರನ್ನು ಬಂಧಿಸಿದ್ದರು.
2018ರ ಮಾರ್ಚ್‌ನಲ್ಲಿ ನಾಯ್ಡು ಅವರ ಟಿಡಿಪಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ್ದ ಎನ್‌ಡಿಎ ಕೂಟದಿಂದ ಹೊರಬಂದಿತ್ತು. ಅನಂತರ ಸಂಸತ್ತಿನಲ್ಲಿ ಟಿಡಿಪಿ ಅವಿಶ್ವಾಸ ಗೊತ್ತುವಳಿಯನ್ನು ಕೂಡ ಮಂಡಿಸಿತ್ತು.
ಈ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ವಿರೋಧ ಪಕ್ಷಗಳ ಮಹಾ ಮೈತ್ರಿ ಕೂಟ ರಚನೆಗೆ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ.