Advertisement
ರಾಜ್ಯದಲ್ಲಿ ಮೈತ್ರಿಗೆ ಬರೀ ಎರಡೇ ಕ್ಷೇತ್ರಗಳು ಒಲಿದಿದ್ದು, ಮಗುಚಿ ಬಿದ್ದಿರುವ ಮೈತ್ರಿ ಸರ್ಕಾರದ ದೋಣಿಯನ್ನು ಕಾಂಗ್ರೆಸ್-ಜೆಡಿಎಸ್ ಮತ್ತೆ ತಹಬದಿಗೆ ತರುತ್ತದೆಯೇ? ಸದ್ಯಕ್ಕಂತೂ ಮೋದಿ ಅಬ್ಬರದಲ್ಲಿ ರಾಜ್ಯದ ಮೈತ್ರಿ ಸರ್ಕಾರ ಜೀವಂತ ಇರುವ ಲಕ್ಷಣ ಕಾಣುತ್ತಿಲ್ಲ.
Related Articles
Advertisement
ವರ್ಷದ ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಜತೆ ಒಲ್ಲದ ಮದುವೆ ಮಾಡಿಕೊಂಡಿತು. ಬಿಜೆಪಿಯಿಂದ ಸತತ “ಅಪವಿತ್ರ ಮೈತ್ರಿ’ ಎಂಬ ಹೀಗಳಿಕೆ ಎದುರಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ವರ್ತನೆ ಆ ಆರೋಪಕ್ಕೆ ಅಪವಾದವಾಗಲಿಲ್ಲ. ಬದಲಿಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಿಎಂ ಎಚ್‌ಡಿಕೆ ನಡುವಿನ ನೇರ ಮತ್ತು ಪರೋಕ್ಷ ಮಾತಿನ ಸಮರ, ಡಿ.ಕೆ. ಶಿವಕುಮಾರ್ ಅವರಿಂದ ಉಂಟಾದ “ಬೆಳಗಾವಿ ಸಮರ’ ಹಾಗೂ ಅದರಿಂದ ವಿಚಲಿತರಾದ ರಮೇಶ್ ಜಾರಕಿಹೊಳಿ ಬಂಡಾಯ, ಮೈತ್ರಿ ಶಾಸಕರ ಎಚ್‌ಡಿಕೆ-ಸಿದ್ದು ಪರ-ವಿರುದ್ಧ ಹೇಳಿಕೆಗಳು ಹೀಗೆ, ಒಂದೇ ಎರಡೇ? ಎಲ್ಲವೂ ರಾಜ್ಯದ ಮೈತ್ರಿ ಅಪವಿತ್ರ ಎನ್ನುವುದಕ್ಕೆ ಪುರಾವೆ ನೀಡಿದವು.
ಜೆಡಿಎಸ್‌ನ ಸಾ.ರಾ. ಮಹೇಶ್, ಡಿ.ಸಿ. ತಮ್ಮಣ್ಣ, ಎಚ್.ಡಿ.ರೇವಣ್ಣ, ಕಾಂಗ್ರೆಸ್‌ನ ಎಸ್.ಟಿ. ಸೋಮ ಶೇಖರ್, ಚೆಲುವರಾಯಸ್ವಾಮಿ, ರಮೇಶ್ ಜಾರಕಿಹೊಳಿ ಮತ್ತಿತರರ ವೈಯಕ್ತಿಕ ಹಿತಾಸಕ್ತಿ ಹೇಳಿಕೆಗಳು, ಆ ಹೇಳಿಕೆಗಳ ಆಧಾರದಲ್ಲಿ ಉನ್ನತ ನಾಯಕರ ಒಣಪ್ರತಿಷ್ಠೆ ನಡವಳಿಕೆ ಮೈತ್ರಿಗೆ ಗಂಡಾಂತರ ತಂದೊಡ್ಡಿತು. ಅದೂ ಅಲ್ಲದೆ ಇಬ್ಬಣ ಗಳ ನಾಯಕರ “ಟೇಕನ್ ಫಾರ್ ಗ್ರಾಂಟೆಡ್’ ಮನ ಸ್ಥಿತಿ ಪ್ರಮುಖ ನಾಯಕರ ಸೋಲಿಗೆ ಕಾರಣವಾಗಿದೆ.
ಕೋಲಾರ, ತುಮಕೂರುಗಳಲ್ಲಿ ಉಭಯ ಪಕ್ಷಗಳ ನಾಯಕರು ನೀಡಿದ ಒಳ ಏಟುಗಳೂ ಕೆ.ಎಚ್. ಮುನಿಯಪ್ಪ, ಎಚ್.ಡಿ. ದೇವೇಗೌಡರ ಸೋಲಿನ ಹಿಂದಿವೆ ಎಂರು ವಿಶ್ಲೇಷಿಸಲಾಗುತ್ತಿದೆ. ಕೋಲಾರ ದಲ್ಲಿ ಕಾಂಗ್ರೆಸ್ ಶಾಸಕರೇ ಮುನಿಯಪ್ಪ ಬದಲಿಗೆ ಖರ್ಗೆ ಅವರನ್ನು ಅಭ್ಯರ್ಥಿ ಮಾಡಬೇಕೆಂದು ಹಠ ಹಿಡಿದಿದ್ದೇ ಅಲ್ಲದೆ, ಮುನಿಯಪ್ಪ ಅವರಿಗೆ ಕಾಂಗ್ರೆಸ್ ಶಾಸಕರೇ ಚುನಾವಣಾ ಅಸಹಕಾರ ನೀಡಿದ್ದು, ಸೋಲಿನ ಕಾರಣಗಳಲ್ಲಿ ಒಂದಾಗಿದೆ.
ಇನ್ನೊಂದೆಡೆ ಬಿಜೆಪಿ ಎಸೆದ “ಆಪರೇಷನ್’ ಗಾಳದ ಗಾಯಕ್ಕೆ ಮುಲಾಮು ಹಚ್ಚಿಕೊಳ್ಳುವುದರ ಜತೆಗೆ ಸ್ವಯಂಕೃತ ಹೆಚ್ಚುವರಿ ಗಾಯಗಳಿಂದ ಕಂಗೆಟ್ಟ ದೋಸ್ತಿ ಬೆಸುಗೆ ಸಡಿಲಗೊಂಡು ದಿನಗಳೇ ಆಗಿವೆ. ಈಗ ಮೋದಿ ಅಬ್ಬರದಲ್ಲಿ ಈ ಬೆಸುಗೆಗೆ ತಾರ್ಕಿಕ ಅಂತ್ಯ ಯಾವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಎಲ್ಲಕ್ಕಿಂತಲೂ ಪ್ರಮುಖವಾಗಿ ಕುಟುಂಬ ರಾಜಕೀಯವನ್ನು ರಾಜ್ಯದ ಜನ ಧಿಕ್ಕರಿಸಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖೀಸಬೇಕಾಗಿದೆ. ದೇವೇಗೌಡರು ತಮ್ಮ ಕುಟುಂಬ ಪ್ರೀತಿಯನ್ನು ಅತಿಯಾಗಿ ಮೆರೆದರು ಎಂಬುದು ಅವರ ಜತೆಗೆ ಮೊಮ್ಮಕ್ಕಳೂ ಸ್ಪರ್ಧಿಸಿದಾಗ ಚರ್ಚೆಗೆ ಬಂತು. ಮಾಜಿ ಪ್ರಧಾನಿಯ ಮಗ ಮುಖ್ಯಮಂತ್ರಿ, ಇನ್ನೊಬ್ಬ ಮಂತ್ರಿ, ಸೊಸೆ ಶಾಸಕಿ, ಇನ್ನೊಬ್ಬ ಸೊಸೆ ಹಾಸನ ರಾಜಕೀಯದಲ್ಲಿ ಸಕ್ರಿಯರಾಗಿರುವ ಜತೆಗೆ ಮೊಮ್ಮಕ್ಕಳನ್ನೂ ಸ್ಪರ್ಧೆಗೆ ಇಳಿಸಿರುವುದು ದೇವೇಗೌಡರು ನಂಬಿಕೊಂಡಿದ್ದ ಒಕ್ಕಲಿಗ ಮತದಾರರಲ್ಲಿ ಮಾತ್ರವಲ್ಲ, ಎಲ್ಲರಲ್ಲೂ “ಅಸಹ್ಯ’ ಮನೋಭಾವ ಸೃಷ್ಟಿಸಿದ್ದು ಸುಳ್ಳಲ್ಲ.
ದೇವೇಗೌಡರು ಈ ಎಲ್ಲಾ ಅಂಶಗಳನ್ನು ಪರಿಗಣಿ ಸದೇ ಹೋದುದು ಈಗ ದುಬಾರಿಯಾಗಿದೆ. ಹಾಗೇ ಗೆಲುವು ಖಚಿತ ಎಂದೇ ಭಾವಿಸಿದ್ದ ಖರ್ಗೆ ಸೋಲಿಗೂ ಕುಟುಂಬ ರಾಜಕೀಯ ಕಾರಣವಾಗಿದೆ. (ಆದರೆ, ಕಲಬುರಗಿಯಲ್ಲಿ ಗೆದ್ದ ಉಮೇಶ್ ಜಾಧವ್ ಮತ್ತು ಉಪಚುನಾವಣೆಯಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಅವಿನಾಶ್ ಜಾಧವ್ ಕುಟುಂಬವನ್ನು ಮತದಾರ ಒಪ್ಪಿಕೊಂಡಿರುವುದೂ ಸತ್ಯ.)
ಖರ್ಗೆ ಮತ್ತು ದೇವೇಗೌಡರ ಸೋಲು ಬಹುತೇಕ ಅವರ ರಾಜಕೀಯ ಭವಿಷ್ಯವನ್ನು ಕ್ಷೀಣ ಗೊಳಿಸಿದೆ. ರಾಜ್ಯದ ಮಟ್ಟಿಗೆ ಅದು ನಷ್ಟ ಆಗಿದ್ದರು ಕೂಡ, ಆ ಇಬ್ಬರೂ ಬದಲಾದ ರಾಜಕೀಯ ಸ್ಥಿತ್ಯಂತ ರಗಳು, ಯುವ ವಿದ್ಯಾವಂತ ಮತದಾರರ ಮನಸ್ಥಿತಿ ಗಳನ್ನು ಸರಿಯಾಗಿ ಅರ್ಥೈಸದೇ ಹೋದುದು ಖರ್ಗೆ-ಗೌಡರ ಸೋಲಿನಲ್ಲಿ ಪ್ರಮುಖವಾಗಿವೆ.
ಒಂದು ಕಾಲದಲ್ಲಿ ಕರಾವಳಿ ಮಾತ್ರ ಬಿಜೆಪಿ ಮುಷ್ಠಿಯಲ್ಲಿತ್ತು ಎಂಬ ಮಾತಿತ್ತು. ಈಗ, ಉತ್ತರ ಕರ್ನಾಟಕ ಜಿಲ್ಲೆಗಳು ಬಿಜೆಪಿಗೆ ಪ್ರಧಾನ ನೆಲೆಗಟ್ಟನ್ನು ಕಟ್ಟಿಸಿಕೊಟ್ಟಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವಿವಾದದ ಅಲೆ ಎಬ್ಬಿಸಿದ್ದ ಲಿಂಗಾಯತ ಧರ್ಮ ವಿಚಾರ, ಪರಿಶಿಷ್ಟ ಜಾತಿ- ವರ್ಗಗಳ ಮತದಾರರಿಗೆ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ಎದ್ದ ಅವಿಶ್ವಾಸ ಇವೆಲ್ಲವೂ ಮೋದಿ ಅಲೆಗೆ ರಹದಾರಿ ಕಲ್ಪಿಸಿಕೊಟ್ಟಿತು.
* ನವೀನ್ ಅಮ್ಮೆಂಬಳ