Advertisement

ಪಿಎಂ ವಿರುದ್ಧ ಸಿಎಂ ವಾಗ್ಧಾಳಿ

06:00 AM Feb 06, 2018 | Team Udayavani |

ಬೆಂಗಳೂರು : ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನು 10 ಪರ್ಸೆಂಟ್‌ ಕಮಿಷನ್‌ ಸರ್ಕಾರವೆಂದು ಆರೋಪಿಸಿರುವ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಪಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿಗೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಕೌಂಟ್‌ಡೌನ್‌ ಆರಂಭವಾಗಿದೆ ಎಂದು ನೀಡಿರುವ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರದ ಕೌಂಟ್‌ ಡೌನ್‌ ಶುರುವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸೋಮವಾರ ರಾಜ್ಯಪಾಲರ ಭಾಷಣದ ನಂತರ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಪ್ರಧಾನಿ ಮೋದಿಯವರು ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದ ಭಾಷಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಡಿದ ಹಲವು ಆರೋಪಗಳ ಬಗ್ಗೆ ಪ್ರತಿಯೊಂದಕ್ಕೂ ಉತ್ತರ ನೀಡಿದ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರ ಆರೋಪಗಳೆಲ್ಲವೂ ಸುಳ್ಳಿನ ಕಂತೆ, ಆಧಾರ ರಹಿತ ಆರೋಪ, ಬೇಜವಾಬ್ದಾರಿತನದಿಂದ ಕೂಡಿದ ಹೇಳಿಕೆಗಳು, ರಾಜಕೀಯ ಪ್ರೇರಿತ ಭಾಷಣ ಎಂದು ಟೀಕಿಸಿದರು. ಅಷ್ಟೇ ಅಲ್ಲ, ದೇಶದ ಪ್ರಧಾನಿಯಾಗಿ ಅವರು ಮಾತನಾಡಲೇ ಇಲ್ಲ ಎಂದು ಜರಿದರು.

10 ಪರ್ಸೆಂಟ್‌ ಕಮಿಷನ್‌ ಸರ್ಕಾರವೆನ್ನುವ ಆರೋಪದ ಬಗ್ಗೆ ಗರಂ ಆದ ಸಿದ್ದರಾಮಯ್ಯ,ಯಾವ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ದಾಖಲೆಗಳ ಸಮೇತ ಮೋದಿಯವರು ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ಅದು ಬೇಜವಾಬ್ದಾರಿತನದ ಹೇಳಿಕೆಯಾಗುತ್ತದೆ. ವೇದಿಕೆಯಲ್ಲಿ ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮೋದಿಯವರು ಮಾತನಾಡಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಿದಾಗ ಅದು ಲೂಟಿಕೋರರ ಸರ್ಕಾರವಾಗಿತ್ತು. ಅಕ್ರಮ ಗಣಿಗಾರಿಕೆಯಲ್ಲಿ ರಾಜ್ಯದ ಸಂಪತ್ತನ್ನು ಬಿಜೆಪಿ ಆಡಳಿತಾವಧಿಯಲ್ಲಿ ಲೂಟಿಮಾಡಲಾಯಿತು ಎಂದು ಲೋಕಾಯುಕ್ತ ವರದಿ ಪ್ರಸ್ಥಾಪಿಸಿ ಮಾತನಾಡಿದರು. ಬಿಜೆಪಿ ಪಕ್ಷದಲ್ಲೇ ಭ್ರಷ್ಟಾಚಾರಿಗಳು, ಜೈಲಿಗೆ ಹೋಗಿ ಬಂದಿರುವವರು ಇರುವಾಗ ಪ್ರಧಾನಿ ಮೋದಿಯವರು ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ಕುರಿತು ಮಾತನಾಡುವುದು ನಾಚಿಕೆಗೇಡಿನ ಸಂಗತಿಯೆಂದು ಲೇವಡಿ ಮಾಡಿದರು.

ಯೋಜನೆಯನ್ನೇ ಕೈಬಿಟ್ಟಿದ್ದೇವೆ:
ಉಕ್ಕಿನ ಮೇಲ್ಸೇತುವೆ(ಸ್ಟೀಲ್‌ ಬ್ರಿಡ್ಜ್) ಯೋಜನೆಯನ್ನು ಪ್ರಧಾನಿಯರು ಪ್ರಸ್ತಾಪಿಸಿದರು. ಆ ಯೋಜನೆಯನ್ನೇ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿಲ್ಲ. ಭ್ರಷ್ಟಾಚಾರ ಎಲ್ಲಿ ನಡೆಯಿತೆಂದು ಮೊದಿಯವರೇ ತೋರಿಸಲಿ ಎಂದು ಪ್ರಶ್ನಿಸಿದರು. ಸಾರ್ವಜನಿಕರ ಹಾಗೂ ಎನ್‌ಜಿಟಿ ಆಕ್ಷೇಪಣೆಯಿಂದಾಗಿ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ವಾಸ್ತವ ಹೀಗಿರುವಾಗ ಹಗರಣ ಎಲ್ಲಿ ನಡೆಯಬೇಕು ಎಂದು ವಾಗ್ಧಾಳಿ ನಡೆಸಿದರು.

ರಾಜ್ಯ ನಂ.1, ಸಿಎಂ ಸಮರ್ಥನೆ:
ರಾಜ್ಯವು ಹಲವು ವಿಷಯಗಳಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಐಟಿ-ಬಿಟಿ ರಫ್ತುವಿನಲ್ಲಿ ಕರ್ನಾಟಕ ನಂ.1 ರಾಜ್ಯ. ಆರಂಭದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಾಗ ಕೈಗಾರಿಕೆ ವಲಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿತ್ತು. ನಮ್ಮ ಸರ್ಕಾರ ಆಡಳಿತ ಆರಂಭಿಸಿದ ಎರಡೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಮಾಹಿತಿ ನಮ್ಮದಲ್ಲ. ಕೇಂದ್ರ ಸರ್ಕಾರವೇ ಹೇಳಿದ್ದು ಎಂದರು.

Advertisement

ಸ್ಟಾರ್ಟ್‌ ಅಪ್‌ ಪಾಲಿಸಿಯಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆ ಜಾರಿ, ಎಲೆಕ್ಟ್ರಿಕಲ್‌ ವಾಹನ ನೀತಿ, ಸಾರ್ವಜನಿಕ ಆರೋಗ್ಯ ಪಾಲಿಸಿ, ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳ ಆರಂಭ, ಕೃಷಿ ಭಾಗ್ಯ ಯೋಜನೆ, ಏಷಿಯಾ ಖಂಡದಲ್ಲಿಯೇ ಅತಿದೊಡ್ಡದಾದ ಸೌರ ಶಕ್ತಿ ಪಾರ್ಕ್‌ ನಿರ್ಮಾಣದಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ. ಕೇಂದ್ರ ಸರ್ಕಾರವೇ ಇದನ್ನು ಘೋಷಿಸಿರುವುದು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಸಾರಿಗೆ ಸಂಸ್ಥೆಗೆ 207 ಪ್ರಶಸ್ತಿಗಳು ಬಂದಿವೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಮೋದಿ ಅವರನ್ನು ಮಾತಿನುದ್ದಕ್ಕೂ ಟೀಕಿಸಿದರು.

ಕರ್ನಾಟಕದ ಹೆಸರೆಲ್ಲಿದೆ ಹೇಳಿ:
ರಾಜ್ಯದಲ್ಲಿನ ಅಪರಾಧ ಪ್ರಕರಣಗಳ ಕುರಿತು ಮೋದಿಯವರು ಮಾತನಾಡಿದ್ದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಎಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿದೆ ಎನ್ನುವುದನ್ನ ಬಿಜೆಪಿ ಪಕ್ಷ ಆಡಳಿತದಲ್ಲಿರುವ ರಾಜ್ಯಗಳ ಹೆಸರುಗಳನ್ನೇ ಉದಾಹರಿಸಿ ಉತ್ತರಿಸಿದರು. ರಾಷ್ಟ್ರೀಯ ಕ್ರೈಂ ರೆಕಾರ್ಡ್‌ ಬ್ಯೂರೊ ಮಾಹಿತಿಯಂತೆ ಉತ್ತರ ಪ್ರದೇಶದಲ್ಲಿ ಶೇ. 11.5ರಷ್ಟು ಅಪರಾಧ ಪ್ರಕರಣಗಳು ದಾಖಲಾಗಿ ದೇಶದಲ್ಲೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್‌, ಹರ್ಯಾಣ ರಾಜ್ಯಗಳಿವೆ. ಇವೆಲ್ಲ ಬಿಜೆಪಿ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಾಗಿವೆ. ಕರ್ನಾಟಕದ ಹೆಸರೆಲ್ಲಿದೆ? ಎಂದು ಕಿಡಿಕಾರಿದರು.

ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ಮೋದಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ, ಬಂಡವಾಳ ಹರಿದುಬರುತ್ತಿರುವುದನ್ನು ಗಮನಿಸಿದರೆ ಕಾನೂನು ಸುವ್ಯವಸ್ಥೆ ಸರಿ ಇದೆಯೋ? ಇಲ್ಲವೋ? ಎನ್ನುವುದು ಗೊತ್ತಾಗುತ್ತದೆ. ಕರ್ನಾಟಕ ಬಂಡವಾಳ ಆಕರ್ಷಿಸುವುದರಲ್ಲಿ ದೇಶದಲ್ಲಿಯೇ ಮೊದಲ ರಾಜ್ಯ ಎಂದರು.

ಪ್ರಶ್ನೆಗಳ ಸುರಿಮಳೆ:
ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿದ ಇನ್ನೂ ಕೆಲ ಅಂಶಗಳಿಗೆ ಪರೋಕ್ಷವಾಗಿ ಹರಿಹಾಯ್ದ ಸಿದ್ದರಾಮಯ್ಯರಿಂದ ಪ್ರಶ್ನೆಗಳ ಸುರಿಮಳೆ ಹರಿದುಬಂದವು.

ಗೋದ್ರಾದಲ್ಲಿ ಎಷ್ಟು ಜನ ಸತ್ತರು? ದೆಹಲಿಗೆ ಸಮೀಪದ ಹರ್ಯಾಣದಲ್ಲಿ ಕಾನೂನು ಇದೆಯೆ? ಬಿಜೆಪಿ ಆಡಳಿತದ ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಅಲ್ಪಸಂಖ್ಯಾತರಿಗೆ ರಕ್ಷಣೆ ಇದೆಯಾ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್‌ ಶಾ ಅವರು ಎನ್‌ಕೌಂಟರ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು, ಏಕೆ ಗಡಿಪಾರಾದರು? ಶಾ ಜೈಲಿಗೆ ಹೋಗಿಬಂದಿದ್ದೇಕೆ? ಎಂದು ಕೇಳುವ ಮೂಲಕ ದಾಳಿ ನಡೆಸಿದರು.

ಅಲ್ಲದೆ, ಜೈಲಿಗೆ ಹೋಗಿ ಬಂದವರನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ, ಈಗ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಸುಳ್ಳು ಆರೋಪಗಳನ್ನು ಮೋದಿ ಮಾಡುತ್ತಿದ್ದಾರೆಂದು ಹೇಳಿದರು.

ಕನ್ನಡಿಗರ ನಿರೀಕ್ಷೆ ಹುಸಿಯಾಗಿಸಿ ಹೋದರು
ಮಹದಾಯಿ ವಿವಾದವನ್ನು ಮೋದಿಯವರು ಬಗೆಹರಿಸುವ ಕುರಿತು ಹಾಗೂ ಬರಗಾಲದಿಂದ ತತ್ತರಿಸಿರುವ ರೈತರಿಗೆ ವಾಣಿಜ್ಯ ಬ್ಯಾಂಕುಗಳಲ್ಲಿನ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಮಾತನಾಡುತ್ತಾರೆನ್ನು ನಿರೀಕ್ಷೆ ನಾಡಿನ ಜನರಲ್ಲಿತ್ತು. ಆದರೆ ಪ್ರಧಾನಿ ಅವರು ಚಕಾರವೆತ್ತಲಿಲ್ಲ. ಮಹದಾಯಿ ವಿಚಾರದಲ್ಲಿ ಹೋರಾಟಗಾರರು ಪ್ರತಿಭಟನೆ, ಬಂದ್‌, ಚಳುವಳಿಗಳನ್ನು ನಡೆಸಿ ಪ್ರಧಾನಿಯವರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದರು. ಕುಡಿಯಲಿಕ್ಕೆ ಕೇವಲ 7.56 ಟಿಎಂಸಿ ನೀರಿಗಾಗಿ ಆಗ್ರಹಿಸಿದ್ದರು. ಇಂಥ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸದೇ ನಿರಾಸೆ ಮೂಡಿಸಿದ್ದಾರೆ. ಕನ್ನಡಿಗರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿದರು.

ಕೇವಲ 10% ಅಲ್ಲ, 30% ಕಮಿಷನ್‌ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎಂದು ಟೀಕಿಸಿದ್ದನ್ನೇ ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯಲು ಅಸ್ತ್ರವಾಗಿಸಿಕೊಂಡಿದೆ. ಪ್ರಧಾನಿ ಹೇಳಿರುವಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರ 10 ಪರ್ಸೆಂಟ್‌ ಸರ್ಕಾರವಲ್ಲ. 30 ಪರ್ಸೆಂಟ್‌ ಸರ್ಕಾರ ಎಂದು ವಾಗ್ಧಾಳಿ ನಡೆಸಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಪಕ್ಷದ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲದರಲ್ಲೂ ಶೇ.30ರಷ್ಟು  ಪರ್ಸೆಂಟ್‌ ಕಮಿಷನ್‌ ಹೊಡೆಯುವ ದಂಧೆಯಲ್ಲಿ ನಿರತವಾಗಿದೆ. ಇಂಥ ಕಮಿಷನ್‌ ಪಡೆಯುವ ಸರ್ಕಾರದಿಂದ ನಾವು ನೈತಿಕತೆ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.

ಪ್ರಧಾನಿಯವರು ಕಾಂಗ್ರೆಸ್‌ ಸರ್ಕಾರವನ್ನು 10 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಹೇಳಿದ್ದಾರೆ. ಅವರು ಹೇಳಿರುವುದು ಅತ್ಯಂತ ಕಡಿಮೆ ಪ್ರಮಾಣ. ನಿಜವಾಗಿಯೂ ಇಲ್ಲಿ ನಡೆಯುತ್ತಿರುವುದು 30 ಪರ್ಸೆಂಟ್‌ ಕಮಿಷನ್‌ ದಂಧೆ. 10 ಪರ್ಸೆಂಟ್‌ ಮುಂಗಡ ಹಾಗೂ 20 ಪರ್ಸೆಂಟ್‌ ಬಿಲ್‌ ಮಾಡುವ ವೇಳೆ ತೆಗೆದುಕೊಳ್ಳುವ ಪರಿಪಾಠ ಬೆಳೆಸಿಕೊಂಡಿದೆ ಎಂದು ದೂರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲಿಗೆ ಹೋಗಿ ಬಂದವರು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಮುಖಂಡರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮುಖಂಡರು, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಾಲಿ ಮತ್ತು ಮಾಜಿ ರಾಷ್ಟ್ರೀಯ ಅಧ್ಯಕ್ಷರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿಲ್ಲವೇ? ಲೋಕೋಪಯೋಗಿ ಸಚಿವ ಮಹದೇವಪ್ಪ ಅವರ ಪುತ್ರ ಮರಳು ಮಾಫಿಯಾದಲ್ಲಿ ಜಾಮೀನು ಪಡೆದಿರುವುದು ಸುಳ್ಳೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ತನ್ನ ಬೆನ್ನು ತಾನು ನೋಡಿಕೊಳ್ಳಲಿ
ಮಹದಾಯಿ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿಲ್ಲ ಎಂದು ಆರೋಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರು ವಿವಾದಕ್ಕೆ ಮೂಲ ಕಾರಣವೇ ಆ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು.

ಮಹದಾಯಿ ಯೋಜನೆಗೆ ಅಡ್ಡಿಯಾಗಿರುವುದೇ ಕಾಂಗ್ರೆಸ್‌. 2012ರ ಗೋವಾ ವಿಧಾನಸಭೆ ಚುನಾವಣೆ ವೇಳೆ ಸೋನಿಯಾಗಾಂಧಿ ಅವರು ಮಹದಾಯಿ ನದಿಯಿಂದ ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದರು. ಇದೀಗ ಗೋವಾದ ಬಿಜೆಪಿ ಮುಖ್ಯಮಂತ್ರಿಗಳು ಈ ಕುರಿತು ಮಾತುಕತೆಗೆ ಸಿದ್ಧ ಎಂದು ಹೇಳಿದರೆ, ಅಲ್ಲಿನ ಕಾಂಗ್ರೆಸ್‌ ಸೋನಿಯಾ ಮಾತನ್ನು ಪುನರುತ್ಛರಿಸುತ್ತಾ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.

ಮಹದಾಯಿ ಮಾತುಕತೆಗೆ ಗೋವಾ ಸರ್ಕಾರ ಮಾತುಕತೆಗೆ ಸಿದ್ಧ ಎಂದು ಹೇಳಿದ ಮೇಲೆ ಪ್ರಧಾನಿ ಮಧ್ಯಸ್ಥಿಕೆ ಅವಶ್ಯಕತೆ ಏನು ಎಂದು ಪ್ರಶ್ನಿಸಿದ ಅವರು, ಮೊದಲು ರಾಜ್ಯ ಕಾಂಗ್ರೆಸ್‌ನವರು ಗೋವಾ ಕಾಂಗ್ರೆಸಿಗರನ್ನು ಮಾತುಕತೆಗೆ ಒಪ್ಪಿಸಲಿ. ನಂತರವೂ ಸಮಸ್ಯೆ ಬಗೆಹರಿಯದಿದ್ದರೆ ಬಿಜೆಪಿ ಮೇಲೆ ಆರೋಪಿಸಲಿ ಎಂದು ಹೇಳಿದರು.

ಲೋಕಪಾಲರನ್ನು ಇದುವರೆಗೆ ನೇಮಿಸದೇ ಇರುವ ಪ್ರಧಾನಿಗಳಿಗೆ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಪ್ರಸ್ಥಾಪಿಸಲು ಯಾವ ನೈತಿಕತೆಯಿದೆ..? ಪ್ರಧಾನಿಯಾಗಿ ಮೋದಿಯವರು ಭ್ರಷ್ಟಾಚಾರಿಗಳ ರಕ್ಷಣೆಗೆ ನಿಂತಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next