ಮಂಗಳೂರು: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಪ್ರಮುಖ ನಾಯಕರು ಜಿಲ್ಲೆಯಲ್ಲಿ ರೋಡ್ ಶೋ, ಸಮಾವೇಶ, ರ್ಯಾಲಿಗಳ ಮೂಲಕ ಗಮನ ಸೆಳೆದರೂ ಅತ್ಯಧಿಕ ಪರಿಣಾಮ ಬೀರಿದ್ದು ಬಿಜೆಪಿಯ ಅತಿರಥ ಮಹಾರಥರ ಭೇಟಿ ಮಾತ್ರ.
ದ.ಕ. ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಮೋಡಿಯ ಲೆಕ್ಕಾಚಾರ ಆರಂಭದಲ್ಲಿತ್ತು. ಜ. 22ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶ ನಡೆಸುವುದರೊಂದಿಗೆ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ದರಾಮಯ್ಯ- ಡಿಕೆಶಿ ಜೋಡಿ ಬಿಡುಗಡೆಗೊಳಿಸಿತ್ತು. ಇದು ಆರಂಭದಲ್ಲಿ ಬಿಜೆಪಿ ಪಾಳಯದಲ್ಲೂ ಒಂದಷ್ಟು ತಳಮಳಕ್ಕೆ ಕಾರಣವಾಗಿತ್ತು.
ಇದರೊಂದಿಗೆ ಜಿಲ್ಲೆಯಲ್ಲಿ ಉಭಯ ಪಕ್ಷಗಳಿಂದ ಅಘೋಷಿತ ಪ್ರಚಾರ ಕಾರ್ಯ ಆರಂಭಗೊಂಡಿತ್ತು. ಜಿಲ್ಲೆಯಲ್ಲಿ ಬಿಜೆಪಿಯ ಹಾಲಿ ಶಾಸಕರು ತಮ್ಮ ಅಭಿವೃದ್ಧಿ ಜತೆಗೆ ಹಿಂದುತ್ವದ ನೆಲೆಯಲ್ಲಿ ಮತದಾರರನ್ನು ತಲುಪುವ ಪ್ರಯತ್ನ ಮಾಡಿದ್ದರು. ಆದರೆ ಟಿಕೆಟ್ ಹಂಚುವ ಸಂದರ್ಭ ಹೊಸ ಮುಖಗಳಿಗೆ ಅವಕಾಶ ಪಕ್ಷದಲ್ಲಿ ತಲ್ಲಣ ಸೃಷ್ಟಿಸಿತು. ಈ ಆತಂಕ ನಿವಾರಣೆಗಾಗಿ ಜಿಲ್ಲೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರಿಂದ ಪುತ್ತೂರು ಬಂಟ್ವಾಳದಲ್ಲಿ ರೋಡ್ ಶೋ ನಡೆಸಲಾಯಿತು. ಪ್ರಧಾನಿ ಮೋದಿ ಅವರು ಮೂಲ್ಕಿಯಲ್ಲಿ ಬೃಹತ್ ಸಮಾವೇಶ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳೂರು ವಿಮಾನ ನಿಲ್ದಾಣ ಹಾಗೂ ಮಂಗಳೂರು ದಕ್ಷಿಣದಲ್ಲಿ ರೋಡ್ ಶೋ ಮೂಲಕ ಸಂಚಲನ ಮೂಡಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ರಾಷ್ಟ್ರೀಯ, ರಾಜ್ಯ ನಾಯಕರು ಜಿಲ್ಲೆಗೆ ಭೇಟಿ ನೀಡಿದರು. ಇವೆಲ್ಲವೂ ಬಿಜೆಪಿಗೆ ಪೂರಕವಾದರೂ ಪುತ್ತೂರಿನಲ್ಲಿ ಭುಗಿಲೆದ್ದ ಬಂಡಾಯದಿಂದ ಅಲ್ಲಿ ಪಕ್ಷ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಜೆಡಿಎಸ್‌ಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ, ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧೆಗಿಳಿದ ಮೊದಿನ್ ಬಾವಾ ಅವರನ್ನು ಗೆಲ್ಲಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿ ಪ್ರಚಾರ ಕೈಗೊಂಡರೂ ಫಲಿತಾಂಶ ಮಾತ್ರ ಶೂನ್ಯ.
ಫಲ ನೀಡದ ಕಾಂಗ್ರೆಸ್ ಗ್ಯಾರಂಟಿ
ಇನ್ನು ಕಾಂಗ್ರೆಸ್ ಗ್ಯಾರಂಟಿಯೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಮಾಜಿ ಸಚಿವ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಅಲ್ಲಲ್ಲಿ ಪ್ರಚಾರ ನಡೆಸಿ ಕಳೆದ ಬಾರಿಗಿಂತ ಒಂದು ಹೆಚ್ಚುವರಿ ಸ್ಥಾನವನ್ನು ಗಳಿಸಿದೆ.