ಮಾಸ್ಕೊ : ಎರಡು ದಿನ ರಷ್ಯಾ ಹಾಗೂ ನಂತರ ಆಸ್ಟ್ರಿಯಾಕ್ಕೆ ಎರಡು ದಿನ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾಸ್ಕೊ ತಲುಪಿದ್ದು, ಮಾಸ್ಕೊದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರ ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಂಟುರೋವ್ ಮಾಸ್ಕೋಗೆ ಬರಮಾಡಿಕೊಂಡರು.
ರಷ್ಯಾದವರು ಭಾರತೀಯ ನೃತ್ಯಗಳನ್ನು ಪ್ರದರ್ಶಿಸಿ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಮೊದಲ ಉಪ ಪ್ರಧಾನಿ ಮಂಟುರೊವ್ ಕೂಡ ಇದೇ ಕಾರಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ತೆರಳಲಿದ್ದಾರೆ. ಮಾಸ್ಕೋದ ಕಾರ್ಲ್ಟನ್ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ರಷ್ಯಾದಲ್ಲಿ ನೆಲೆಸಿರುವ ಭಾರತೀಯ ಯುವಕರು ಸ್ವಾಗತಿಸಿದ್ದಾರೆ.
ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮೊದಲ ರಷ್ಯಾ ಭೇಟಿ ಇದಾಗಿದೆ. ಅವರು 2019 ರಲ್ಲಿ ರಷ್ಯಾದ ನಗರವಾದ ವ್ಲಾಡಿವೋಸ್ಟಾಕ್‌ನಲ್ಲಿ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. 2022 ರಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಇದು ಮೋದಿಯವರ ಮೊದಲ ರಷ್ಯಾ ಭೇಟಿಯಾಗಿದೆ.
ಮಾಸ್ಕೊ ಆಗಮಿಸಿದ ವೇಳೆ ಮೋದಿ ಟ್ವೀಟ್
ಮಾಸ್ಕೊದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ “ಮಾಸ್ಕೊದಲ್ಲಿ ಬಂದಿಳಿದೆ. ನಮ್ಮ ರಾಷ್ಟ್ರಗಳ ನಡುವಿನ ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಶೇಷವಾಗಿ ಸಹಕಾರದ ಭವಿಷ್ಯದ ಕ್ಷೇತ್ರಗಳಲ್ಲಿ ಇನ್ನಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇವೆ. ನಮ್ಮ ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯವು ನಮ್ಮ ಜನರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
ಮಂಗಳವಾರ ನಡೆಯಲಿರುವ 22ನೇ ಭಾರತ- ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವ್ಯಾಪಾರ, ಇಂಧನ ಮತ್ತು ರಕ್ಷಣೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಭಾರತೀಯ ಸಮುದಾಯದೊಂದಿಗೆ ಸಂವಾದ:
ರಷ್ಯಾ ಕಾಲಮಾನದ ಪ್ರಕಾರ ಸೋಮವಾರ ರಾತ್ರಿ ಮೋದಿಗೆ ಪುಟಿನ್ ಅವರು ಖಾಸಗಿ ಔತಣಕೂಟ ಏರ್ಪಡಿಸಿದ್ದಾರೆ. ಮಂಗಳವಾರ (ನಾಳೆ) ಪುಟಿನ್ ಜತಗೆ ಮಾತುಕತೆ ನಡೆಸಲಿರುವ ಮೋದಿ ರಷ್ಯಾದ ಭಾರತೀಯ ಸಮುದಾಯದ ಜತೆಗೂ ಸಂವಾದ ನಡೆಸಲಿದ್ದಾರೆಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ. ರಷ್ಯಾದ ಭೇಟಿಯ ಬಳಿಕ ಪ್ರಧಾನಿ ಮೋದಿ ಅವರು 2 ದಿನಗಳ ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.
ಎಕೆ-203 ಅಸಾಲ್ಟ್ ರೈಫಲ್ಸ್ ಒಪ್ಪಂದದ ಬಳಿಕ, “ಎಸ್‌ಯು 57′ 5ನೇ ತಲೆಮಾರಿನ ಯುದ್ಧವಿಮಾನ, ಅಣು ಶಕ್ತಿ ಸಂಬಂಧ ಜಂಟಿ ಸಹಭಾಗಿತ್ವ ಸೇರಿ ಪ್ರಮುಖ ರಕ್ಷಣಾ ಒಪ್ಪಂದಗಳು ಮೋದಿ ಮತ್ತು ಪುಟಿನ್ ಮಾತುಕತೆ ವೇಳೆ ಏರ್ಪಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇದೇ ವೇಳೆ, ಮೋದಿ ಅವರೊಂದಿಗೆ ಸಂವಾದಕ್ಕೆ ರಷ್ಯಾದಲ್ಲಿನ ಭಾರತೀಯ ಸಮುದಾಯ ಉತ್ಸುಕವಾಗಿದೆ. ರಷ್ಯಾದಲ್ಲಿ ದೇವಾಲಯ ನಿರ್ಮಾಣ, ಹೊಸ ಭಾರತೀಯ ಶಾಲೆ ಕಟ್ಟಡ ನಿರ್ಮಾಣ ಮತ್ತು ಭಾರತಕ್ಕೆ ಮಾಸ್ಕೊದಿಂದ ನೇರ ವಿಮಾನಗಳ ಸಂಖ್ಯೆ ಹೆಚ್ಚಳಕ್ಕೆ ಮೋದಿಯವರ ನೆರವು ಕೋರುವುದಾಗಿ ಭಾರತೀಯ ಸಮುದಾಯ ಹೇಳಿದೆ.
ಇಲ್ಲಿಯವರೆಗೆ, ಭಾರತ ಮತ್ತು ರಷ್ಯಾದಲ್ಲಿ ಪರ್ಯಾಯವಾಗಿ 21 ವಾರ್ಷಿಕ ಶೃಂಗಸಭೆಗಳು ನಡೆದಿವೆ. ಕೊನೆಯ ಶೃಂಗಸಭೆಯು ಡಿಸೆಂಬರ್ 6, 2021 ರಂದು ನವದೆಹಲಿಯಲ್ಲಿ ನಡೆಯಿತು. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು. ಅಂದಹಾಗೆ ಪುಟಿನ್ ರಷ್ಯಾದ ಮುಖ್ಯಸ್ಥರಾಗಿ ಭಾರತಕ್ಕೆ ಒಂಬತ್ತು ಬಾರಿ ಭೇಟಿ ನೀಡಿದ್ದಾರೆ. ಸೆಪ್ಟೆಂಬರ್ 16, 2022 ರಂದು ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಕೊನೆಯದಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.