Advertisement

7ರಂದು ಕಲಬುರಗಿಯಲ್ಲಿ ಮೋದಿ ರ್ಯಾಲಿ

05:25 AM Feb 25, 2019 | Team Udayavani |

ಕಲಬುರಗಿ: ರಾಷ್ಟ್ರದ ಗಮನ ಸೆಳೆದಿರುವ ಕಲಬುರಗಿ ಲೋಕಸಭೆ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಒಂದೊಂದಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಲಬುರಗಿಗೆ ಕರೆ ತಂದು ಸಮಾವೇಶ-ರ್ಯಾಲಿ ನಡೆಸಲು ಮುಂದಾಗಿದೆ.

Advertisement

ಫೆ.19ರಂದು ಪ್ರಧಾನಿ ಕಲಬುರಗಿಗೆ ಬಂದು ಚುನಾವಣೆ ಕಹಳೆ ಮೊಳಗಿಸುತ್ತಾರೆ ಎನ್ನಲಾಗಿತ್ತು. ಆದರೆ, ಅದು ಮುಂದಕ್ಕೆ ಹೋಯಿತು. ತದನಂತರ ಮಾ.1ರಂದು ಮಧ್ಯಾಹ್ನ 4ಕ್ಕೆ ಬರುವರು ಎಂದು ಪ್ರಕಟಿಸಲಾಯಿತಲ್ಲದೇ ಸಮಾವೇಶದ ಉಸ್ತುವಾರಿ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಆರ್‌.
ಅಶೋಕ ಪೂರ್ವಭಾವಿ ಸಭೆ ನಡೆಸಿ ಸಿದ್ಧತೆಗಳ ಕುರಿತು ಸಮಾಲೋಚನೆ ಸಹ ನಡೆಸಿದರು. ಈಗ ಮಾ.1ರ ದಿನಾಂಕವೂ ಮುಂದೂಡಿಕೆಯಾಗಿದೆ.

ಮತ್ತೆ ಮಾ.5 ಇಲ್ಲವೇ 6ರಂದು ಬರುತ್ತಾರೆ ಎನ್ನಲಾಗಿತ್ತು. ಆದರೆ ಅಂದು ಶಿವರಾತ್ರಿ ಅಮಾವಾಸ್ಯೆ ಇರುವುದರಿಂದ ಮತ್ತೆ ಮುಂದೂಡಿಕೆಯಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸುತ್ತಿವೆ. ಈಗ ಮಾ.7ರಂದು ಮಧ್ಯಾಹ್ನ 12ಕ್ಕೆ ಕಲಬುರಗಿಗೆ ಪ್ರಧಾನಿ ಬರುತ್ತಾರೆ ಎನ್ನಲಾಗಿದೆ. ಮರುದಿನ
ಮಾ.8ರಂದು ಲೋಕಸಭೆ ಚುನಾವಣೆಗೆ ಮೂಹುರ್ತ ನಿಗದಿಯಾಗಿ ನೀತಿ ಸಂಹಿತೆ ಜಾರಿಯಾಗುವುದರಿಂದ ಮಾ.7ರಂದೇ ಬರುವುದು ನಿಶ್ಚಿತ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಥಳವನ್ನು ಒಂದೆರಡು ದಿನಗಳಲ್ಲಿ ಅಂತಿಮಗೊಳಿಸಲಾಗುತ್ತಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಮಾ.7ರಂದು ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಕಲಬುರಗಿಗೆ ಇಲ್ಲವೇ ಬೀದರ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಲಬುರಗಿ, ಬೀದರ್‌, ಯಾದಗಿರಿ ಮೂರು ಜಿಲ್ಲೆಗಳ ಬಿಜೆಪಿ ರ್ಯಾಲಿ-ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ಸಮಾವೇಶಕ್ಕೆ 1.50 ಲಕ್ಷದಿಂದ ಎರಡು ಲಕ್ಷವರೆಗೆ ಜನರನ್ನು ಸೇರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಮೋದಿ ಭಾಷಣ: ಮೋದಿ ಅವರು 2014ರ ಫೆ.28ರಂದು ಪ್ರಧಾನಿ ಅಭ್ಯರ್ಥಿ ಘೋಷಣೆಯಾದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಪಕ್ಷದ ವಿಭಾಗೀಯ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ತದನಂತರ ಸೊಲ್ಲಾಪುರದಲ್ಲೂ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಸೊಲ್ಲಾಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ ಕಲಬುರಗಿಯಲ್ಲಿ ಸೋತಿತು. ಆದರೆ ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರ ವೇಳೆ 2018ರ ಮೇ 3ರಂದು ಕಲಬುರಗಿಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಪ್ರಧಾನಿ ಮೋದಿ, ದಲಿತರ ಮತಗಳನ್ನು ಪಡೆದ ಕಾಂಗ್ರೆಸ್‌ ಪಕ್ಷವು
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯನ್ನಾಗಿ ಮಾಡದೇ ಕೈ ಕೊಟ್ಟಿದೆ ಎಂದು ಅನುಕಂಪದ ಮಾತುಗಳನ್ನಾಡಿದ್ದರು. ಆದರೆ ಈ ಸಲ ಪ್ರಚಾರಕ್ಕೆ ಬಂದು ಏನು ಹೇಳ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Advertisement

ಕಲಬುರಗಿ ಪ್ರತಿಷ್ಠೆ ಏಕೆ?: ಸಂಸತ್ತಿನೊಳಗೆ ಮತ್ತು ಹೊರಗೆ ಪ್ರಧಾನಿ ವಿರುದ್ಧ ಪ್ರಖರ ವಾಗ್ಧಾಳಿ ನಡೆಸುವ ಮೂಲಕ ತಮ್ಮದೇಯಾದ ಛಾಪು ಮೂಡಿಸಿರುವ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಈ ಸಲ ಹೇಗಾದರೂ ಮಾಡಿ ಗೆಲುವು ಸಾಧಿಸಲೇಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ.  

 ಬಿಜೆಪಿ ಸೇರಲು ಸಿದತೆ ನಡೆಸಿದ ಜಾಧ್ದವ
ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕೆಂಬ ನಿಟ್ಟಿನಲ್ಲಿ ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್‌ ಅವರನ್ನು ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಾ.7ರಂದು ಪ್ರಧಾನಿ ಬರುವ ಮುಂಚೆ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಟಿ ಎನ್ನುವಂತೆ ಶನಿವಾರ ಜಿಲ್ಲೆಯ ಬಿಜೆಪಿ ಶಾಸಕರೆಲ್ಲರೂ ಶಾಸಕ ಡಾ| ಉಮೇಶ ಜಾಧವ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಶಾಸಕ ಡಾ| ಜಾಧವ್‌ ಅವರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾಜಿ ಸಚಿವ ಎಸ್‌. ಕೆ.ಕಾಂತಾ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜತೆಗೆ ಗುಲ್ಬರ್ಗ ವಿವಿಯಲ್ಲಿ ಕಳೆದ ಆರು ವರ್ಷಗಳಿಂದ ಪಿಎಚ್‌ಡಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧದ ಕಾರ್ಯ ಆರಂಭಿಸಿ ಚುನಾವಣಾ ಸ್ಪರ್ಧೆಗೆ ಸಿದ್ಧ ಎಂಬುದಾಗಿ ಪರೋಕ್ಷವಾಗಿ ಘೋಷಣೆ ಮಾಡಿದ್ದಾರೆ.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next