Advertisement

World Cup ಫೈನಲ್‌ಗೆ ಮೋದಿ, ಆಸ್ಟ್ರೇಲಿಯ ಪ್ರಧಾನಿ ಸೇರಿ ಗಣ್ಯರು

11:57 PM Nov 17, 2023 | Team Udayavani |

ಅಹ್ಮದಾಬಾದ್‌ : ರವಿವಾರ ಭಾರತ-ಆಸ್ಟ್ರೇಲಿಯ ನಡುವಿನ ಫೈನಲ್‌ ಪಂದ್ಯದ ವೀಕ್ಷಣೆ ಗಣ್ಯರ ದಂಡೇ ಆಗಮಿಸಲಿದೆ. ಇವರಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತದ ಹಿಂದಿನೆರಡು ವಿಶ್ವಕಪ್‌ ವಿಜೇತ ತಂಡಗಳ ನಾಯಕರಾದ ಕಪಿಲ್‌ದೇವ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ ಪ್ರಮುಖರು.

Advertisement

ಆಸ್ಟ್ರೇಲಿಯದ ಪ್ರಧಾನಿ ಆ್ಯಂಥೋನಿ ಅಲ್ಬನಿಸ್‌ ಅವರನ್ನೂ ಆಹ್ವಾನಿಸಲಾಗಿದೆ. ಫೈನಲ್‌ ಪಂದ್ಯದ ದಿನವೇ ಅವರು ಅಹ್ಮದಾಬಾದ್‌ಗೆ ಆಗಮಿಸುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ರವಿವಾರ ಅಪರಾಹ್ನವೇ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಮೋದಿ ಅವರ ಭೇಟಿಯ ಪ್ರತೀ ನಿಮಿಷದ ವಿವರವನ್ನು ಪರಿಶೀಲಿಸಲಾಗಿದೆ. ಅವರು ಸಂಚರಿಸುವ ಸ್ಥಳ ಹಾಗೂ ಮಾರ್ಗವನ್ನೂ ತಪಾಸಣೆ ಮಾಡಲಾಗಿದೆ.

ಈವರೆಗಿನ ವಿಶ್ವಕಪ್‌ ವಿಜೇತ ತಂಡಗಳ ನಾಯಕರೆಲ್ಲರಿಗೂ ಆಹ್ವಾನ ನೀಡಲಾಗಿದೆ. ಈ ನಾಯಕರೆಂದರೆ ಕ್ಲೈವ್‌ ಲಾಯ್ಡ, ಕಪಿಲ್‌ದೇವ್‌, ಅಲನ್‌ ಬೋರ್ಡರ್‌, ಅರ್ಜುನ ರಣತುಂಗ, ಸ್ಟೀವ್‌ ವೋ, ರಿಕಿ ಪಾಂಟಿಂಗ್‌, ಧೋನಿಮೈಕಲ್‌ ಕ್ಲಾರ್ಕ್‌, ಇಯಾನ್‌ ಮಾರ್ಗನ್‌. ಆದರೆ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಜೈಲು ಪಾಲಾಗಿರುವ 1992ರ ವಿಶ್ವಕಪ್‌ ವಿಜೇತ ಪಾಕಿಸ್ಥಾನ ತಂಡದ ನಾಯಕ ಇಮ್ರಾನ್‌ ಖಾನ್‌ ಪಾಲ್ಗೊಳ್ಳುತ್ತಿಲ್ಲ.

ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಸಿಂಗ್‌, ವೀರೇಂದ್ರ ಸೆಹವಾಗ್‌, ಅನಿಲ್‌ ಕುಂಬ್ಳೆ, ಸೌರವ್‌ ಗಂಗೂಲಿ ಮೊದಲಾದವರು ಫೈನಲ್‌ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

Advertisement

ಖ್ಯಾತ ತಾರೆಗಳಾದ ಅಮಿತಾಭ್‌ ಬಚ್ಚನ್‌, ರಜನೀಕಾಂತ್‌, ಕಮಲಹಾಸನ್‌, ಮೋಹನ್‌ಲಾಲ್‌, ವಿಕ್ಟರಿ ವೆಂಕಟೇಶ್‌, ನಾಗಾರ್ಜುನ, ರಾಮ್‌ಚರಣ್‌ ಕೂಡ ಸ್ಟೇಡಿಯಂಗೆ ಆಗಮಿಸಿ ಪ್ರಶಸ್ತಿ ಸಮರವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.

ಏರ್‌ ಶೋ ರಿಹರ್ಸಲ್‌
ವಿಶ್ವಕಪ್‌ ಫೈನಲ್‌ ಪಂದ್ಯದ ಪ್ರಮುಖ ಆಕರ್ಷಣೆ ಎಂದರೆ ಅಹ್ಮದಾಬಾದ್‌ ಸ್ಟೇಡಿಯಂ ಮೇಲೆ ಲೋಹದ ಹಕ್ಕಿಗಳ ಹಾರಾಟ, ಏರ್‌ ಶೋ. ಇದನ್ನು ಭಾರತೀಯ ವಾಯುಪಡೆಯ ಸೂರ್ಯ ಕಿರಣ್‌ ತಂಡ ನಡೆಸಿ ಕೊಡಲಿದೆ. ಇದರ ರಿಹರ್ಸಲ್‌ ಶುಕ್ರವಾರ ನಡೆಯಿತು. ಇದು ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ.
ಫೈನಲ್‌ ಪಂದ್ಯದ ಆರಂಭಕ್ಕೂ 10 ನಿಮಿಷ ಮೊದಲು ಈ ಏರ್‌ಶೋ ನಡೆಯಲಿದೆ ಎಂದು ಗುಜರಾತ್‌ ಕ್ರಿಕೆಟ್‌ ಮಂಡಳಿಯ ವಕ್ತಾರ ಜಗತ್‌ ಪಟೇಲ್‌ ಮಾಧ್ಯಮಗಳಿಗೆ ತಿಳಿಸಿದರು.

ಸಂಗೀತ ಮನೋರಂಜನೆ ಫೈನಲ್‌ ಪಂದ್ಯದ ಇನ್ನೊಂದು ಆಕರ್ಷಣೆ. “ಖಲಾಸಿ’ ಖ್ಯಾತಿಯ ಗಾಯಕರಾದ ದುವಾ ಲಿಪಾ, ಆದಿತ್ಯ ಗಢವಿ, ಗಾಯಕಿ ಜೊನಿಟಾ ಗಾಂಧಿ, ಸಂಗೀತ ನಿರ್ದೇಶಕ ಪ್ರೀತಮ್‌ ಚಕ್ರವರ್ತಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next