ಶಿವಮೊಗ್ಗ: ನನಗೆ 91 ಬಾರಿ ಬೈದಿದ್ದಾರೆ. ಅಂಬೇಡ್ಕರ್ ಅವರನ್ನೂ ಬಿಟ್ಟಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಎಲ್ಲಿ ಪರಿಶಿಷ್ಟ ಜಾತಿ ಮತಗಳು ಬೇಕೋ ಅಲ್ಲಿ ಈ ರೀತಿ ಮಾತನಾಡುತ್ತಾರೆ. ಮೋದಿ ಅವರೇ, ಜನರನ್ನು ಹುಚ್ಚು ಮಾಡುವುದಕ್ಕೆ ಹೋಗಬೇಡಿ. ಜನರ ಬಳಿ ದಾಖಲೆಗಳು ಇರುತ್ತವೆ. ಅದನ್ನು ಓದುತ್ತಾರೆ. ಜನರು ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 91 ಬಾರಿ ಬೈಗುಳ ಬಗ್ಗೆ ಹೇಗೆ ಲೆಕ್ಕ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಇವರು ಎಷ್ಟು ಬಾರಿ ಸೋನಿಯಾ, ರಾಹುಲ್, ನಮ್ಮ ಪಕ್ಷದ ಹಿರಿಯ ನಾಯಕರಿಗೆ, ಸ್ವಾತಂತ್ರ್ಯ ತಂದು ಕೊಟ್ಟ ನೆಹರು, ಸಂವಿಧಾನ ರಚನೆ ಸಮಿತಿಯವರಿಗೆ, ಅಂಬೇಡ್ಕರ್ ಬಗ್ಗೆ ಮಾತನಾಡಿರುವ ಬಗ್ಗೆ ಸೂಕ್ತ ದಾಖಲೆ ಇದೆ. ಜನರ ಕನಿಕರ ಪಡೆಯಲು ಈ ರೀತಿ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು.
ನಮಗೆ ಬೈದಿದ್ದು ಲೆಕ್ಕಕ್ಕೆ ಇಟ್ಟಿಲ್ಲ: ನಮಗೆ ಎಷ್ಟು ಸಲ ನೀವು ಬೈದಿದ್ದೀರಿ ಎಂಬ ಅಂಕಿ-ಅಂಶ ನಿಮ್ಮ ಬಳಿಯೇ ಇರಬೇಕು. ನಾವು ಲೆಕ್ಕ ಇಡಲು ಹೋಗಿಲ್ಲ. ರಾಜ್ಯದಲ್ಲಿ ನೀವು ನಿಮ್ಮ ಸರ್ಕಾರದಲ್ಲಿ ಏನು ಮಾಡಿದ್ದೀರಾ ಲೆಕ್ಕ ಕೊಡಿ. 2 ಕೋಟಿ ಉದ್ಯೋಗದ ಲೆಕ್ಕ ಕೊಡಿ. 15 ಲಕ್ಷ ರೂಪಾಯಿ ಕೊಡುತ್ತೇನೆ ಎಂದಿರಿ. ಅದರ ಲೆಕ್ಕ ಕೊಡಿ, ಗ್ಯಾಸ್ ಸಿಲಿಂಡರ್ ಉಚಿತ ಕೊಡುತ್ತೇವೆ ಎಂದರು. ಮೊದಲು 410 ರೂ. ಇತ್ತು. ಈಗ 1150 ರೂ. ಆಗಿದೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಎಲ್ಲ ಅವಶ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಿದ್ದೀರಿ. ಸಣ್ಣಪುಟ್ಟ ವಸ್ತುಗಳ ಬೆಲೆ ದುಬಾರಿಯಾಗಿದೆ. ಹಾಲು, ಮೊಸರು, ಪೆನ್, ಪೆನ್ಸಿಲ್, ಪೇಪರ್ ಬೆಲೆ ಜಾಸ್ತಿಯಾಗಿದೆ. ಬೇಳೆ ಕಾಳುಗಳ ಬೆಲೆ ಗಗನಕ್ಕೇರಿದೆ. ಇದರ ಬಗ್ಗೆ ಉತ್ತರ ಕೊಡಿ ಎಂದರು.
ನಮ್ಮ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಕೊಡುವ ವಾಗ್ಧಾನ ಮಾಡಿದ್ದೇವೆ. ನಮ್ಮ ಸರ್ಕಾರ ಅ ಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ಅಂಶಗಳನ್ನು ಈಡೇರಿಸುತ್ತೇವೆ. ಈ ಚುನಾವಣೆ ಕರ್ನಾಟಕಕ್ಕೆ ಮಹತ್ವದ್ದು. ಹಿಂದೆ ಕೆಲಸ ಮಾಡಿರುವುದು ದೇಶ ಹಾಗೂ ರಾಜ್ಯದ ಜನರಿಗೆ ಗೊತ್ತಿದೆ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಅಂಬೇಡ್ಕರ್ ಹೇಳಿದ ಮಾತನ್ನು ನಾನು ಇಲ್ಲಿ ಹೇಳಲು ಇಷ್ಟಪಡುತ್ತೇನೆ. ನ.25, 1949ರಂದು ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿ ಕುರಿತು, ನಾನು ಗೆಲ್ಲದೆ ನನ್ನನ್ನು ಮೆಂಬರ್ ಮಾಡಿ, ಕರಡು ಸಮಿತಿಗೆ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಪಕ್ಷ ನೇಮಕ ಮಾಡಿ ಜನರ ಸೇವೆಗೆ ಅವಕಾಶ ಮಾಡಿದೆ’ ಎಂದು ಹೊಗಳಿದ್ದರು. ಆ ಭಾಷಣವನ್ನು ಮೋದಿ ಕೇಳಿಸಿಕೊಂಡಿಲ್ಲ. ಕರಡು ಸಮಿತಿ ಸದಸ್ಯರಾಗಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಟಿ.ಟಿ. ಕೃಷ್ಣಮಾಚಾರಿ ಕೂಡ ಸಂವಿಧಾನ ಸಮಿತಿಯಲ್ಲಿ ಅಂಬೇಡ್ಕರ್ ಪಾತ್ರ ಹೊಗಳಿದ್ದಾರೆ. ಏಳು ಸದಸ್ಯರಲ್ಲಿ 6 ಮಂದಿ ಅನುಪಸ್ಥಿತಿಯಲ್ಲಿ ಅಂಬೇಡ್ಕರ್ ಒಬ್ಬರೇ ಕರಡು ರಚನೆ ಮಾಡಿದ್ದರು. ಅವರ ಕಾರ್ಯ ಶ್ಲಾಘಿಸಿದ್ದಾರೆ ಎಂದರು.
ನ.30, 1949ರಲ್ಲಿ ಆರ್‌ಎಸ್‌ಎಸ್ ಮುಖವಾಣಿಯಲ್ಲಿ ಸಂವಿಧಾನ ರಚನೆ ಕುರಿತು ಅವಹೇಳನ ಮಾಡಲಾಗಿದೆ. ಇದನ್ನು ಮೋದಿ ಓದಿಲ್ಲವೇ? ಅಂಬೇಡ್ಕರ್, ಸಂವಿಧಾನಕ್ಕೆ ಅವಮಾನ ಮಾಡಿದ್ದು ಅವರು. ತಿರಂಗಾ ಕುರಿತು ಅವಹೇಳನ ಮಾಡಿದ್ದಾರೆ. ಸಂವಿಧಾನ ರಚನೆಯ ಕೊನೆಯ ಭಾಷಣದಲ್ಲಿ ಅಂಬೇಡ್ಕರ್ ಇದನ್ನೆಲ್ಲ ಉಲ್ಲೇಖೀಸಿದ್ದಾರೆ. ಇಂತಹ ಅವಮಾನ ಮಾಡುವ ಬಿಜೆಪಿ, ಆರ್‌ಎಸ್‌ಎಸ್, ಅದರ ಮಹಾನ್ ನಾಯಕರು ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ. ಇತಿಹಾಸ ತೆಗೆದು ನೋಡಿದರೆ ಗೊತ್ತಾಗುತ್ತದೆ. ಹಿಂದುಳಿದ ವರ್ಗಗಳ ಜನ ಎಲ್ಲಿ ಹೆಚ್ಚಾಗಿರುತ್ತಾರೆ ಅಲ್ಲಿ ಹೇಳಿಕೆಗಳನ್ನು ತಿರುಚಿ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವದ ಪ್ರಕಾರ ಈ ದೇಶ ನಡೆದಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಅಂತಹ ಪ್ರಜ್ಞಾವಂತ ಜನ ಬಡ, ಮಧ್ಯಮ, ಶ್ರೀಮಂತ ವರ್ಗದಲ್ಲೂ ಇದ್ದಾರೆ ಎಂದರು.
ಈಗಿನ ಬಿಜೆಪಿ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೆ ಗೊತ್ತಿದೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಿಎಸ್‌ಐ, ಎಂಜಿನಿಯರ್, ದಿನಗೂಲಿ ನೌಕರರ, ಶಿಕ್ಷಕ, ವಿಶ್ವವಿದ್ಯಾಲಯ ಸೇರಿ ಎಲ್ಲ ರೀತಿಯ ನೇಮಕಾತಿಗಳಲ್ಲಿ ಈ ಸರ್ಕಾರ ಮತ್ತು ಅ ಧಿಕಾರಿಗಳ ಮೇಲೆ ಲಂಚದ ಕಳಂಕ ಹತ್ತಿದೆ. ಇದು ಜನರ ನಿದ್ದೆಗೆಡಿಸಿದೆ. ಜನರು ಅಪೇಕ್ಷೆ ಮಾಡುವುದು ಒಳ್ಳೆಯ ಆಡಳಿತ. ಯಾವ ರೀತಿಯ ಸರ್ಕಾರ ಬಂದರೆ ಒಳ್ಳೆದಾಗುತ್ತದೆ. ಸ್ವತ್ಛ ಆಡಳಿತ ಸಿಗುತ್ತದೆ ಎಂಬ ನಂಬಿಕೆ ಇಟ್ಟಿರುತ್ತಾರೆ ಎಂದರು.