Advertisement

ಮಂಕಾದ ಮೋದಿ ಜನಪ್ರಿಯತೆ: ಸಿದ್ದರಾಮಯ್ಯ

10:46 PM Jul 14, 2023 | Team Udayavani |

ಬೆಂಗಳೂರು: ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ನಾಯಕ. ಇದರಲ್ಲಿ ಎರಡು ಮಾತಿಲ್ಲ. ಆದರೆ ಆ ಜನಪ್ರಿಯತೆ ಈಗ ಮಂಕಾಗಿದ್ದು, ರಾಜ್ಯದ ವಿಧಾನಸಭಾ ಚುನಾವಣೆ ಫ‌ಲಿತಾಂಶವೇ ಇದಕ್ಕೆ ಸಾಕ್ಷಿ. ಇಲ್ಲಿಂದಲೇ ಬಿಜೆಪಿ ಅವನತಿ ಶುರುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

Advertisement

ಶುಕ್ರವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಅವರು, ತಮ್ಮ ಸುದೀರ್ಘ‌ ಭಾಷಣದ ಬಹುತೇಕ ಸಮಯವನ್ನು ಕೇಂದ್ರ ಸರಕಾರ ಮತ್ತು ವಿಪಕ್ಷಗಳ ವಿರುದ್ಧದ ವಾಗ್ಧಾಳಿಗೆ ಮೀಸಲಿಟ್ಟರು. ಇದನ್ನು ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಈ ಮಧ್ಯೆಯೇ ಮುಖ್ಯಮಂತ್ರಿ, ವಂದನಾ ನಿರ್ಣಯಕ್ಕೆ ಉತ್ತರಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಸುಮಾರು 28 ಬಾರಿ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಪರ ಮತ ಯಾಚಿಸಿದ್ದರು. ಒಬ್ಬ ಪ್ರಧಾನಿ ಇಷ್ಟೊಂದು ಬಾರಿ ಒಂದು ರಾಜ್ಯದ ಚುನಾವಣ ಪ್ರಚಾರಕ್ಕೆ ಬಂದ ನಿದರ್ಶನವೇ ಇಲ್ಲ. ವಿಚಿತ್ರವೆಂದರೆ ಅವರು ಪ್ರಚಾರ ಮಾಡಿದಲ್ಲೆಲ್ಲ ನಾವು ಹೆಚ್ಚು ಅಂತರದಿಂದ ಗೆದ್ದಿದ್ದೇವೆ. ಇದು ಅವರ ಜನಪ್ರಿಯತೆ ಮಂಕಾಗುತ್ತಿರುವುದರ ಸುಳಿವು. ಕರ್ನಾಟಕದಿಂದಲೇ ನಿಮ್ಮ (ಬಿಜೆಪಿಗೆ) ಅವನತಿ ಆರಂಭವಾಗಿದೆ. ಹಾಗಾಗಿ ಇನ್ಮುಂದೆ ನೀವು ಅವರನ್ನು ಅವಲಂಬಿಸದಿರುವುದು ಸೂಕ್ತ ಎಂದು ತೀಕ್ಷ್ಣವಾಗಿ ಹೇಳಿದರು.

ಮೇಲಿದ್ದವರು ಕೆಳಗೆ; ಕೆಳಗಿದ್ದವರು ಮೇಲೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಜನಪ್ರಿಯತೆಯ ಉಚ್ಛಾ†ಯ ಸ್ಥಿತಿಯಲ್ಲಿದ್ದರು. ಅವರ ಫೋಟೋ ಹಿಡಿದುಕೊಂಡು ಹೋದರೆ ಸಾಕು, ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದ ಎಂದು ಮೆಲುಕುಹಾಕಿದ ಮುಖ್ಯಮಂತ್ರಿ, 80ರ ದಶಕದಲ್ಲಿ ಬಿಜೆಪಿ ಲೋಕಸಭೆಯಲ್ಲಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳು. ಈಗ 303 ಸ್ಥಾನಗಳು. ಜನಪ್ರಿಯತೆ ಮಂಕಾಗುತ್ತಿರುವ ಇನ್ಮುಂದೆ ಮತ್ತೆ ಹಿಂದಿನ ಸ್ಥಿತಿಗೆ ಇಳಿಯಲಿದೆ. ಯಾಕೆಂದರೆ, ಮೇಲಿದ್ದವರು ಕೆಳಗೆ ಬರಲೇಬೇಕು. ಕೆಳಗಿದ್ದವರು ಮೇಲೆ ಏರಬೇಕಲ್ಲವೇ ಎಂದರು.

ಮನುಷ್ಯರು, ಧರ್ಮಗಳ ನಡುವೆ ಗೋಡೆ ಕಟ್ಟುವುದು ಅಮಾನವೀಯ ಮತ್ತು ಅದು ನಮ್ಮ ಪರಂಪರೆಯೂ ಅಲ್ಲ. ಬದುಕಿನಲ್ಲೂ ವೈರುಧ್ಯಗಳಿವೆ. ಆದರೂ ಏಕತೆಯಿಂದ ಬಾಳುವುದಿಲ್ಲವೇ? ಅದೇ ರೀತಿ ಹಿಂದೂಗಳೇ ಶ್ರೇಷ್ಠ ಎನ್ನುವುದನ್ನು ಬಿಡಬೇಕು. ಜರ್ಮನರೇ ಶ್ರೇಷ್ಠ ಎಂದು ಹೇಳಲು ಹೋದ ಹಿಟ್ಲರ್‌ ಹಾಳಾಗಲಿಲ್ಲವೇ ಎಂದು ಸೂಚ್ಯವಾಗಿ ಕೇಳಿದರು.

Advertisement

ಇದು ವಿಪಕ್ಷ ಬಿಜೆಪಿ ಸದಸ್ಯರನ್ನು ಕೆಣಕಿತು. ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾನತೆ ಪ್ರತಿಪಾದಿಸುವ ನೀವು (ಸಿಎಂ) ಕೇಸರಿ ಪೇಟ ಹಾಕುವಾಗ ಬೇಡ ಎನ್ನುವುದು ಆ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದಂತೆ ಆಗಲಿಲ್ಲವೇ ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯ, ಹಿಟ್ಲರ್‌ ಬಗ್ಗೆ ಮಾತನಾಡಿದರೆ ನಿಮಗ್ಯಾಕೆ ಸಿಟ್ಟು? ಹಿಟ್ಲರ್‌ ನಿಮ್ಮ ವಂಶಸ್ಥನಾ ಎಂದು ಖಾರವಾಗಿ ಪ್ರಶ್ನಿಸಿದರು. ಭಾರತಿ ಶೆಟ್ಟಿ, ಹಿಟ್ಲರ್‌ ಬಗ್ಗೆ ಮಾತಾಡಿ. ಆದರೆ ಹಿಟ್ಲರ್‌ ರೀತಿ ಮಾತನಾಡಬೇಡಿ ಎಂದು ಹೇಳಿದರು.

ನಾವು ಕೊಟ್ಟೆವು; ನೀವು ಕಿತ್ಕೊಂಡಿರಿ
ಗ್ಯಾರಂಟಿಗಳ ಮೂಲಕ ರಾಜ್ಯದ ಸುಮಾರು 1.30 ಕೋಟಿ ಕುಟುಂಬಗಳಿಗೆ ಮಾಸಿಕ 4ರಿಂದ 5 ಸಾವಿರ ರೂ.ಗಳನ್ನು ಸರಕಾರ ನೀಡುತ್ತಿದೆ. ನಾವು (ಕಾಂಗ್ರೆಸ್‌) ಜನರ ಜೇಬಿಗೆ ದುಡ್ಡು ಹಾಕುತ್ತೇವೆ. ಆದರೆ, ನೀವು (ಬಿಜೆಪಿ) ಅದೇ ಜನರ ಜೇಬಿನಿಂದ ದುಡ್ಡು ಕಿತ್ತುಕೊಳ್ಳುತ್ತೀರಿ. ಇದೇ ನಿಮ್ಮ ಸೋಲಿಗೆ ಕಾರಣವಾಯಿತು.ಜನರಿಗೆ ಹಣ ನೀಡುವುದರಿಂದ ಅದರ ಹರಿವು ಆಗುತ್ತದೆ. ಆ ಮೂಲಕ ರಾಜ್ಯದ ಬೊಕ್ಕಸ ತುಂಬುತ್ತದೆ ಎಂದು ಸಿಎಂ ಪ್ರತಿಪಾದಿಸಿದರು.

ಅವಿವೇಕದ ತರ್ಕ; ಸಭಾತ್ಯಾಗ
ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿ ಆಗುತ್ತದೆ ಎಂದವರು ಇಂದು ಅವುಗಳ ಅನುಷ್ಠಾನದಲ್ಲಿ ತಡವಾಗುತ್ತಿದೆ. ಅವುಗಳಿಗೆ ಹಾಕುತ್ತಿರುವ ಷರತ್ತು ತೆಗೆದುಹಾಕಿ ಎಂದು ವಾದಿಸುತ್ತಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ತತ್‌ಕ್ಷಣ ನೇರವಾಗಿ ವಿಧಾನಸೌಧಕ್ಕೆ ಬಂದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಮೂರು ಯೋಜನೆಗಳು ಅನುಷ್ಠಾನಗೊಂಡಿವೆ. ಎಥೆನಾಲ್‌ ಉತ್ಪಾದನೆಗೆ ಲಕ್ಷಾಂತರ ಟನ್‌ ಅಕ್ಕಿ ಕೊಡಲಾಗುತ್ತಿದೆ. ಬಡವರ ಯೋಜನೆಗೆ ನಿರಾಕರಿಸುತ್ತಿದೆ. ಇಂಥವರು ಯೋಜನೆ ಅನುಷ್ಠಾನಗೊಳಿಸದಿದ್ದರೆ ಹೋರಾಟ ಮಾಡುವುದಾಗಿ ಹೇಳುತ್ತಾರೆ. ಇವೆಲ್ಲ ಅವಿವೇಕದ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನ ಆರಂಭವಾಗಿ 15 ದಿನಗಳಾದವು. ಎರಡೂ ಸದನಗಳಲ್ಲಿ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿಲ್ಲ. ಇದು ನಿಮ್ಮ ಪಕ್ಷದ ರಾಜಕೀಯ ದಿವಾಳಿಯ ಸೂಚನೆ ಎಂದೂ ಟೀಕಿಸಿದರು.

ಬಿಜೆಪಿ ಸದಸ್ಯರು ಪ್ರತಿಕ್ರಿಯಿಸಿ ಜನರಿಗೆ ಯೋಜನೆ ಗಳನ್ನು ಸಮರ್ಪಕವಾಗಿ ತಲುಪಿಸು ವಂತೆ ಒತ್ತಾಯಿಸುವುದು ಅವಿವೇಕದ ತರ್ಕ ಎನ್ನುವುದು ಎಷ್ಟು ಸರಿ? ಕೇಂದ್ರ ಅಕ್ಕಿ ಕೊಡಲಿಲ್ಲ ಎನ್ನುತ್ತೀರಿ. ಕೇಂದ್ರವನ್ನು ಕೇಳಿ ಆಶ್ವಾಸನೆ ಕೊಟ್ಟಿ ದ್ದೀರಾ ಎಂದು ಪ್ರಶ್ನಿಸಿದರು. ಈ ಸಂದರ್ಭ ತೀವ್ರ ವಾಗ್ವಾದ ನಡೆದು ಗೊಂದಲ ಸೃಷ್ಟಿಯಾಗಿ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಬಿಜೆಪಿ ಮುಕ್ತ ಭಾರತ ಆಗಬೇಕು ಅಂತ ಹೇಳಲ್ಲ
ಬಿಜೆಪಿ ಮುಕ್ತ ಭಾರತ ಆಗಬೇಕೆಂದು ನಾವು ಹೇಳುವುದಿಲ್ಲ. ನೀವು ಇರಬೇಕು. ಆದರೆ ಅಧಿಕಾರದಲ್ಲಿ ಇರಬಾರದು ಎಂಬುದು ನಮ್ಮ ಬಯಕೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ಇರಬೇಕು. ಆ ಸ್ಥಾನದಲ್ಲೇ ನೀವು ಯಾವಾಗಲೂ ಮುಂದುವರಿಯಬೇಕು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದು ಅಗತ್ಯ ಎಂದರು.

ಕಾಂಗ್ರೆಸ್‌ಗೆ ನಾನು ಚಿರಋಣಿ
ಜನತಾದಳದಿಂದ ನನ್ನನ್ನು ಹೊರಗೆ ಹಾಕಿ, ಕಾಂಗ್ರೆಸ್‌ ಸೇರುವ ಅನಿವಾರ್ಯತೆ ಸೃಷ್ಟಿಸಿದರು. ಈಗ ಅದೇ ಕಾಂಗ್ರೆಸ್‌ ನನ್ನನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿತು ಎಂದು ಸಿದ್ದರಾಮಯ್ಯ ಸ್ಮರಿಸಿದರು. ಜನತಾದಳದಲ್ಲಿ ನಾನೂ ಇದ್ದೆ. ಆದರೆ 2005ರಲ್ಲಿ ಹೊರಗೆ ಹಾಕಿದರು ಪುಣ್ಯಾತ್ಮರು. ಅನಂತರ ಒಲ್ಲದ ಮನಸ್ಸಿನಿಂದ ಕಾಂಗ್ರೆಸ್‌ ಸೇರಿದೆ. ಆ ಪಕ್ಷ ಎರಡು ಬಾರಿ ಸಿಎಂ ಮಾಡಿತು. ಕಾಂಗ್ರೆಸ್‌ಗೆ ನಾನು ಚಿರಋಣಿ ಎಂದರು.

ಡಾ| ವೀರೇಂದ್ರ ಹೆಗ್ಗಡೆಯವರಿಗೆ ಸಿಎಂ ಅಭಿನಂದನೆ
ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಿದ ಕಾಂಗ್ರೆಸ್‌ ಸರಕಾರದ ಶಕ್ತಿ ಯೋಜನೆ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಶುಕ್ರವಾರ ಮೇಲ್ಮನೆಯಲ್ಲಿ ಸರಕಾರದ ಉತ್ತರ ನೀಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಧರ್ಮಸ್ಥಳದ ಧರ್ಮಾಧಿಕಾರಿ ಪತ್ರ ಮೂಲಕ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಅಲ್ಲಿಗೆ ಬಂದು ಮುಖ್ಯಮಂತ್ರಿಗಳ ಹೆಸರಿನಲ್ಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸಿದರಲ್ಲದೆ, ತಮ್ಮ ಹೆಸರಲ್ಲಿ ಅರ್ಚನೆ ಮಾಡಿದ ಮಹಿಳೆಯರಿಗೆ ಮುಖ್ಯಮಂತ್ರಿ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next