Advertisement

ಉದ್ಯಮ ಬಲವರ್ಧನೆಗೆ ಬದ್ಧ

12:08 AM Feb 27, 2021 | Team Udayavani |

ಹೊಸದಿಲ್ಲಿ: “ದೇಶೀಯ ಉದ್ಯಮಶೀಲತೆಯನ್ನು ಬಲ­ಗೊಳಿಸಲು ನೂತನ ಉದ್ದಿಮೆದಾರರನ್ನು ಬೆಳೆಸಲು ನಮ್ಮ ಸರಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ದೇಶದ ಎಲ್ಲ ನವ ಉದ್ಯಮಿಗಳಿಗೆ ಸೂಕ್ತವಾದ ಸಾಲ ಹಾಗೂ ಇನ್ನಿತರ ಆರ್ಥಿಕ ಸಹಕಾರಗಳನ್ನು ನೀಡಲು ನಮ್ಮ ಸರಕಾರ ಕಟಿಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಆರ್ಥಿಕ ಸೇವೆಗಳಲ್ಲಿ ಬಜೆಟ್‌ನ ಪಾತ್ರ ಎಂಬ ವಿಷಯಾಧಾರಿತ ವೆಬಿನಾರ್‌ನಲ್ಲಿ ಮಾತನಾಡಿದ ಅವರು, “ಭಾರತದ ಆರ್ಥಿಕತೆ ಬೆಳೆದಂತೆಲ್ಲ  ಉದ್ಯಮಗಳೂ ಬೆಳೆಯಬೇಕಾಗುತ್ತದೆ. ಅದಕ್ಕಾ­ಗಿಯೇ  ನಮ್ಮ ದೇಶದ ಉದ್ಯಮಗಳ ಬೆಳವಣಿಗೆಗೆ ಮೂಲಸೌಕರ್ಯಗಳ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಬೇಕಾದ ಆರ್ಥಿಕ ನೆರವನ್ನು ನೀಡಲು ತೀರ್ಮಾನಿ­ಸಲಾಗಿದೆ. ಅದರಲ್ಲೂ ಯುವ ಉದ್ಯಮಿಗಳಿಗೆ ಬೇಕಾದ ಸಾಲ ಸೌಲಭ್ಯ, ಈಗಾಗಲೇ ಸಂಸ್ಥಾಪಿತ­ವಾಗಿ ರುವ ಉದ್ಯಮಗಳಿಗೆ ಇನ್ನಷ್ಟು ಹೆಚ್ಚಿನ ಉತ್ತೇಜನ­ಗಳನ್ನು ನೀಡಲಾಗುತ್ತದೆ. ಹೆಚ್ಚೆಚ್ಚು ಸ್ಟಾರ್ಟ್‌ಅಪ್‌ಗ್ಳನ್ನು ಬೆಳೆಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವೆಲ್ಲದ­ರಿಂದ ದೇಶೀಯ ಉತ್ಪಾದನ ಪ್ರಮಾಣ ಹೆಚ್ಚಾಗಿ ಆರ್ಥಿಕತೆಯ ಬೆಳವಣಿಗೆಗೂ ವರದಾನವಾ ಗುತ್ತದೆ’ ಎಂದು ಅವರು ವಿವರಿಸಿದರು.

ಖಾಸಗಿ-ಸರಕಾರಿ ಎರಡೂ ಅವಶ್ಯ:  ಸರಕಾರದ ಖಾಸಗೀಕರಣದ ಬಗ್ಗೆ ಎದ್ದಿರುವ ಟೀಕೆಗಳಿಗೆ ಪರೋಕ್ಷ ಉತ್ತರ ನೀಡಿದ ಮೋದಿ, ಸರಕಾರಿ ಉದ್ದಿಮೆ ಗಳಲ್ಲಿ ಖಾಸಗಿಯವರ ಪಾಲುದಾರಿಕೆಯನ್ನು ಸರಕಾರ ಪ್ರೋತ್ಸಾಹಿಸುತ್ತದೆ. ಆದರೆ ದೇಶದ ಅಭಿವೃದ್ಧಿಗೆ ಸರಕಾರಿ-ಖಾಸಗೀಕರಣ ಎರಡೂ ಅವಶ್ಯ ಎಂದು ತಿಳಿಸಿದರು.

ಸಾಲಸೌಲಭ್ಯದಲ್ಲೂ ಪಾರದರ್ಶಕತೆ ಅವಶ್ಯ: ಇದೇ ವೇಳೆ, ಸಾಲ ನೀಡುವಿಕೆಯನ್ನೂ ಕೆಲವಾರು ಮಾನ­ದಂಡ­ಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುವುದು ಅತ್ಯವಶ್ಯ ಎಂದ ಪ್ರಧಾನಿ, ದಶಕಗಳ ಹಿಂದೆ, ಇಂಥ ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಸಾಲ ನೀಡುವಿಕೆ ಪದ್ಧತಿ ಇಲ್ಲದಿದ್ದಕ್ಕೆ ನಮ್ಮ ದೇಶದ ಬ್ಯಾಂಕ್‌ಗಳು ತೀವ್ರ ನಷ್ಟದತ್ತ ಮುಖ ಮಾಡಿದ್ದವು ಎಂದು ನೆನಪಿಸಿಕೊಂಡರು.

“ಒಂದು ದೇಶ ಮುನ್ನಡೆಯಬೇಕಾದರೆ ಉದ್ಯಮ ಗಳು ಅವಶ್ಯ. ಆ ಉದ್ಯಮಗಳು ಜೀವಂತ ವಾಗಿರಬೇಕು ಹಾಗೂ ಅಭಿವೃದ್ಧಿ ಹೊಂದುತ್ತಿರ ಬೇಕಾದರೆ ಅವುಗಳಿಗೆ ಆರ್ಥಿಕ ಸಾಲ ಸೌಲಭ್ಯಗಳೂ ಅವಶ್ಯಕ. ಆದರೆ ಅಪಾರದರ್ಶಕ ಸಾಲ ವ್ಯವಸ್ಥೆಗಳಿಂದ ದೇಶ ಅಧೋಗತಿಗೆ ಇಳಿಯುತ್ತದೆ. ಈಗಾಗಲೇ ಇಂಥ ಹಲವಾರು ತಪ್ಪುಗಳಾಗಿವೆ. ಅಪಾರದರ್ಶಕ ಸಾಲದಿಂದಾಗಿ ಅನುತ್ಪಾದಕ ಆಸ್ತಿ (ಎನ್‌ಪಿಎ) ಹೆಚ್ಚಾಗಿತ್ತು. ಇದನ್ನೆಲ್ಲ ಒಂದು ಸುಸ್ಥಿತಿಗೆ ತರಲು ವರ್ಷಗಳೇ ಬೇಕಾಗಿವೆ. ಹಾಗಾಗಿ ಈಗ ಬ್ಯಾಂಕಿಂಗ್‌ ವ್ಯವಸ್ಥೆಗೆ ಹಲವಾರು ನಿಬಂಧನೆಗಳನ್ನು ಅಳವಡಿಸ ಲಾಗಿದೆ’ ಎಂದರು.

Advertisement

ಉದ್ಯಮಿಗಳಿಗೆ ಕಿವಿಮಾತು :

ಹೇರಳವಾಗಿ ಸಾಲಗಳನ್ನು ಮಾಡಿ ಕಾನೂನಾತ್ಮಕ ಕ್ರಮಗಳನ್ನು ಎದುರಿಸುವಂಥ ಕಷ್ಟಕ್ಕೆ ಒಳಗಾಗ ಬಾರದು ಎಂದು ಪ್ರಧಾನಿ ಮೋದಿ ಯುವ ಉದ್ಯಮಿಗಳಿಗೆ ಕಿವಿಮಾತು ಹೇಳಿದರು. ಪ್ರತಿ ಯೊಂದು ವ್ಯವಹಾರದಲ್ಲೂ ಏಳು- ಬೀಳುಗಳು ಇರುವುದು ಸಹಜ. ಆದರೆ ಅದೆಲ್ಲದರ ನಡುವೆಯೂ ಉದ್ಯಮಿಗಳು ತಾಳ್ಮೆಯಿಂದ ಗಟ್ಟಿ ನಿರ್ಧಾರದೊಂದಿಗೆ ಮುಂದುವರಿ­ಯಬಹುದು ಎಂದರು.

ಸರಕಾರದ ಕ್ರಮಗಳಿಗೆ ಸಮರ್ಥನೆ :

2021ರ ಬಜೆಟ್‌ ಬಗ್ಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ನಾವು ಎರಡು ದೊಡ್ಡ ಸಾರ್ವಜನಿಕ ಬ್ಯಾಂಕ್‌ಗಳನ್ನು ಖಾಸಗೀಕರಣದತ್ತ ಕೊಂಡೊಯ್ಯುವುದಾಗಿ ಪ್ರಕಟಿಸಿದ್ದೇವೆ. ಇನ್ನು, ಭಾರತೀಯ ಜೀವವಿಮಾ ನಿಗಮವನ್ನು (ಎಲ್‌ಐಸಿ) ಐಪಿಒ ಸಂಸ್ಥೆಯನ್ನಾಗಿ ಮಾರ್ಪಾಡು ಮಾಡಲು ಮುಂದಾಗಿದ್ದೇವೆ. ಇನ್ನು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇ. 74ಕ್ಕೆ ಹೆಚ್ಚಿಸಿದ್ದೇವೆ. ಇವೆಲ್ಲವೂ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವಂಥದ್ದೇ ಆಗಿವೆ ಎಂದು ಪ್ರಧಾನಿ, ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿರುವ ತಮ್ಮ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಂಡರು.

ವೈದ್ಯ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ  :

ಭಾರತೀಯ ವೈದ್ಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸರಕಾರ ನಿರ್ಧರಿಸಿದೆ. ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸರಕಾರದ ಕನಸನ್ನು ನನಸು ಮಾಡಲಿದೆ ಎಂದು ಮೋದಿ ಹೇಳಿದ್ದಾರೆ. ಶುಕ್ರವಾರ ಚೆನ್ನೈಯ ಎಂಜಿಆರ್‌ ವೈದ್ಯಕೀಯ ಕಾಲೇಜಿನ 33ನೇ ಘಟಿಕೋತ್ಸವದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, “ಎನ್‌ಎಂಸಿಯಿಂದಾಗಿ ವೈದ್ಯಕೀಯ ಶಿಕ್ಷಣ ಹಾಗೂ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ದೊರಕಲಿದೆ. ಹೊಸ ವೈದ್ಯ ಕಾಲೇಜುಗಳಿಗೆ ವಸ್ತುನಿಷ್ಠತೆ ಆಧಾರಿತ ನಿಯಮಗಳು ಜಾರಿಗೊಳ್ಳಲಿವೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಗುಣಮಟ್ಟದ ಸೇವೆ ಲಭ್ಯವಾಗಲಿವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next