Advertisement
ಬುಧವಾರ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿರುವ ಎಲ್ಲ ಸಚಿವರು, ಪದೋನ್ನತಿ ಗೊಂಡವರ ಪೈಕಿ ಹೆಚ್ಚಿನವರು ಆಯಾ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಪೈಕಿ ಪ್ರಮುಖರೆಂದರೆ, ರೈಲ್ವೇ, ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ವಾರ್ತಾ ಸಚಿವ ಅನುರಾಗ್ ಠಾಕೂರ್, ಆರೋಗ್ಯ ಸಚಿವ ಮನ್‌ಸುಖ್ ಮಾಂಡವ್ಯ, ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಮತ್ತು ಸಹಾಯಕ ಸಚಿವರು ಅಧಿಕಾರ ಸ್ವೀಕರಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೃಷಿ ಖಾತೆ ಸಹಾಯಕ ಸಚಿವರಾಗಿ, ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ಸಹಾಯಕ ಸಚಿವರಾಗಿ, ಬೀದರ್ ಸಂಸದ ಭಗವಂತ ಖೂಬಾ ಹೊಸ ಮತ್ತು ನವೀಕೃತ ಇಂಧನ ಖಾತೆ ಸಹಾಯಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
Related Articles
Advertisement
ರೈತರ ಮನವೊಲಿಸುವೆ: ಶೋಭಾ: ಮೂರು ಕೃಷಿ ಕಾಯ್ದೆಗಳಿಂದ ಉಂಟಾಗುವ ಲಾಭದ ಬಗ್ಗೆ ಪ್ರತಿಭಟನ ನಿರತ ರೈತರಿಗೆ ಮತ್ತು ಮುಖಂಡರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುವು ದಾಗಿ ಕೃಷಿ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ದೇಶದ ರೈತರ ಹಿತದೃಷ್ಟಿ ಯಿಂದಲೇ ಕೇಂದ್ರ ಸರಕಾರ ಈ ಕಾಯ್ದೆಗಳನ್ನು ಜಾರಿ ಮಾಡಿದೆ. ಕೆಲವರು ರಾಜಕೀಯ ಕಾರಣ ಗಳಿಗೆ ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದರು. ಅವರ ಮನವೊಲಿಕೆ ಮಾಡುವ ದೊಡ್ಡ ಹೊಣೆ ಇದೆ ಎಂದು ಹೇಳಿದ್ದಾರೆ. ನರೇಂದ್ರ ಸಿಂಗ್ ತೋಮರ್ ಜತೆಗೂಡಿ ಕೆಲಸ ಮಾಡುತ್ತೇನೆ ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಸಮಯ ಕೊಡಿ: ಪುರಿ :
“ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಸಚಿವಾಲಯದ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಅನಂತರ ಈ ಬಗ್ಗೆ ಪ್ರತಿಕ್ರಿಯೆ ಕೊಡುತ್ತೇನೆ. ಅದಕ್ಕೆ ಕೊಂಚ ಸಮಯ ಬೇಕು’ ಎಂದು ಕೇಂದ್ರದ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ. ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಈ ಸಚಿವಾಲಯದಲ್ಲಿ ತಮಗೆ ಇನ್ನೂ ತರಬೇತಿ ಮತ್ತು ಮಾಹಿತಿ ಬೇಕಾಗಿದೆ ಎಂದರು. ದೇಶಿಯವಾಗಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವುದೇ ಆದ್ಯತೆ ಎಂದು ಅವರು ಹೇಳಿಕೊಂಡಿದ್ದಾರೆ. ಗುರುವಾರ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 35 ಪೈಸೆ, 9 ಪೈಸೆ ಏರಿಕೆಯಾಗಿದೆ.
ಅನಗತ್ಯ ಹೇಳಿಕೆ ಬೇಡ; ಹಿರಿಯ ಸಚಿವರ ಸಲಹೆ ಪಡೀರಿ :
ಹೊಸದಿಲ್ಲಿ: “ಅನಗತ್ಯವಾಗಿ ಹೇಳಿಕೆ ನೀಡ ಬೇಡಿ. ನಿಮ್ಮ ಖಾತೆಯಲ್ಲಿ ಈ ಹಿಂದೆ ಸಚಿವರಾಗಿ ದ್ದವರ ಜತೆ ಮಾತನಾಡಿ ಅವರಿಂದ ಸಲಹೆ ಪಡೆಯಿರಿ. ಸರಿಯಾದ ಸಮಯಕ್ಕೆ ಕಚೇರಿಗೆ ಬನ್ನಿ’ - ಇದು ಪ್ರಧಾನಿ ನರೇಂದ್ರ ಮೋದಿ ನೂತನ ಸಚಿವರಿಗೆ ಹೇಳಿದ ಕಿವಿಮಾತು. ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಸಂಪುಟ ದರ್ಜೆ ಮತ್ತು ಸಹಾಯಕ ಸಚಿವರು ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ಸಂಜೆಯಿಂದ ರಾತ್ರಿಯ ವರೆಗೆ ಪೂರ್ಣ ಸಚಿವ ಸಂಪುಟ ಸಭೆ ನಡೆಯಿತು. ಈ ಸಂದರ್ಭದಲ್ಲಿ ಸಚಿವರಾಗಿ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬ ಬಗ್ಗೆ ಸಮಗ್ರವಾಗಿ ವಿವರಿಸಿದ್ದಾರೆ.
ಆಯಾ ಖಾತೆಗಳನ್ನು ಹೊಂದಿರುವ ನೂತನ ಸಚಿವರು ಹಿರಿಯ ಸಚಿವರ ಜತೆಗೆ ನಿಕಟ ಸಂಪರ್ಕ ಇರಿಸಿಕೊಳ್ಳಬೇಕು. ಈ ಮೂಲಕ ಅವರಿಂದ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಹೊಸ ಖಾತೆಗಳನ್ನು ಪಡೆದವರು ಈ ಹಿಂದೆ ಅದನ್ನು ನಿರ್ವಹಿಸಿದ್ದವರ ಜತೆಗೆ ಅದರ ಬಗ್ಗೆ ಸಲಹೆ ಪಡೆಯಬೇಕು ಎಂದು ಹೇಳಿದ್ದಾರೆ.
ಕೊರೊನಾ ಬಗ್ಗೆ ಮಾತನಾಡಿದ ಅವರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಮತ್ತು ಮಾಸ್ಕ್ ಧರಿಸದೇ ಇರುವುದನ್ನೂ ಪ್ರಸ್ತಾವಿಸಿದ್ದಾರೆ.
ಕಳಪೆ ಸಾಧನೆ ಕಾರಣವಲ್ಲ: ರವಿಶಂಕರ ಪ್ರಸಾದ್, ಪ್ರಕಾಶ್ ಜಾಬ್ಡೇಕರ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಕಳಪೆ ಸಾಧನೆ ಎಂಬ ಕಾರಣಕ್ಕೆ ಅಲ್ಲ. ಅವರಿಗೆ ಬಿಜೆಪಿಯಲ್ಲಿ ಉನ್ನತ ಹೊಣೆಗಾರಿಕೆ ನೀಡಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಹೀಗಾಗಿ, ಅವರಿಬ್ಬರಿಗೆ ಮುಂದಿನ ವರ್ಷದ ವಿಧಾನಸಭೆ ಚುನಾವಣೆ ವೇಳೆ ಹೊಣೆಗಾರಿಕೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅನಗತ್ಯ ಹೇಳಿಕೆ ಬೇಡ :
ಯಾವುದೇ ಕಾರಣಕ್ಕೆ ಅನಗತ್ಯ ಹೇಳಿಕೆ ನೀಡಬಾರದು ಎಂದು ಪ್ರಧಾನಿ ಹೇಳಿದ್ದಾರೆ. ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸಬೇಕು. ಆಯಾ ಖಾತೆಗಳ ಮಹತ್ವ ಮತ್ತು ಪ್ರಾಮುಖ್ಯದ ಅಧ್ಯಯನ ನಡೆಸಬೇಕು. ಸರಕಾರದ ಯೋಜನೆಗಳನ್ನು ಜನರಿಗೆ ತಲಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬೇಕು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆಯಾ ಖಾತೆ ಸಂಬಂಧಿಸಿದ ಸಭೆ ಇದ್ದಲ್ಲಿ ಸಂಪುಟ ದರ್ಜೆ ಮತ್ತು ಸಹಾಯಕ ಸಚಿವರೂ ಅದರಲ್ಲಿ ಭಾಗಿಯಾಗಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ.