ಹೊಸದಿಲ್ಲಿ: ನನಗೆ ನರೇಂದ್ರ ಮೋದಿ ಅವರೊಂದಿಗೆ 43 ವರ್ಷಗಳ ಸ್ನೇಹವಿತ್ತು , ಎಂದೂ ಅವರು ಚಹಾ ಮಾರಿದ್ದನ್ನು ನೋಡಿಯೇ ಇಲ್ಲ ಎಂದು ವಿಶ್ವ ಹಿಂದು ಪರಿಷದ್‌ನ ಮಾಜಿ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ‘ಇಂಡಿಯಾ ಟುಡೇ’ಗೆ ಹೇಳಿಕೆ ನೀಡಿದ್ದಾರೆ.
‘ಅಂತರಾಷ್ಟ್ರೀಯ ಹಿಂದು ಪರಿಷದ್’ ಸಂಘಟನೆಯನ್ನು ಮುನ್ನಡೆಸುತ್ತಿರುವ ತೊಗಾಡಿಯಾ ಅವರು ‘ಮೋದಿ ಅವರನ್ನು ಜನರ ಅನುಕಂಪ ಗಿಟ್ಟಿಸಿಕೊಳ್ಳುವ ಸಲುವಾಗಿ ಮಾತ್ರ ಚಾಯ್‌ವಾಲಾ ಎಂದು ಬಿಂಬಿಸಲಾಗಿದೆ’ ಎಂದಿದ್ದಾರೆ.
‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಉದ್ದೇಶವೇ ಇಲ್ಲ. ಆರ್‌ಎಸ್‌ಎಸ್ ನಾಯಕ ಭಯ್ಯಾಜಿ ಜೋಷಿ ಅವರೇ ಹೇಳಿದ್ದಾರೆ, ಮುಂದಿನ 5 ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಿಲ್ಲ ಎಂದು. ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶದ 125 ಕೋಟಿ ಜನರನ್ನು ಕತ್ತಲೆಯಲ್ಲಿ ಇಟ್ಟಿವೆ. ದೇಶದ ಜನ ಈಗ ಎಚ್ಚೆತ್ತುಕೊಂಡಿದ್ದಾರೆ’ ಎಂದು ತೊಗಾಡಿಯಾ ಹೇಳಿದ್ದಾರೆ.
‘ಫೆಬ್ರವರಿ 9 ರಂದು ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡುತ್ತೇವೆ. ನಾವು ಒಮ್ಮೆ ಲೋಕಸಭೆ ಚುನಾವಣೆ ಗೆದ್ದರೆ ತಕ್ಷಣ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ’ ಎಂದರು.
‘ಮೋದಿ ಮತ್ತೆ ಆಯ್ಕೆಯಾದರೂ ರಾಮ ಮಂದಿರ ನಿರ್ಮಾಣ ಮಾಡುವುದೇ ಇಲ್ಲ. ಯಾಕೆಂದರೆ ಅದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಲೈಫ್ ಬ್ಲಡ್ ಆಗಿದೆ ‘ಎಂದರು.
‘2019 ರ ಚುನಾವಣೆ ಸೋಲಿನ ಬಳಿಕ ಮೋದಿ ಗುಜರಾತ್‌ಗೆ ಮರಳಬೇಕಾಗುತ್ತದೆ. ಭಯ್ಯಾಜಿ ಜೋಷಿ ಅವರು ನಾಗಪುರಕ್ಕೆ ಮರಳಬೇಕಾಗುತ್ತದೆ’ ಎಂದು ತೊಗಾಡಿಯಾ ತೀವ್ರ ವಾಗ್ಧಾಳಿ ನಡೆಸಿದ್ದಾರೆ.