ಚಿಂಚೋಳಿ: ಇಲ್ಲಿ ಭಾನುವಾರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಮತದಾನ ಬಿರುಸಿನಿಂದ ನಡೆಯುತ್ತಿದೆ. ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದು, ಕೋಡ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಅವರು ಆಗಮಿಸುತ್ತಿದ್ದಂತೆಯೆ ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗಲಾಗಿದೆ.
ಸ್ಥಳದಲ್ಲಿ ಜಮಾವಣೆಗೊಂಡ ಎರಡು ಗುಂಪುಗಳು ಬಿಜೆಪಿ ಮತ್ತು ಕಾಂಗ್ರೆಸ್ ಪರ ಘೋಷಣೆ ಕೂಗುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬಿಜೆಪಿ ಕಾರ್ಯಕರ್ತರು ಹರ್ ಹರ್ ಮೋದಿ ಘರ್ ಮೋದಿ ಅಂತಾ ಘೊಷಣೆ ಕೂಗಿದರೆ, ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪರ ಘೋಷಣೆ ಕೂಗಿದರು. ಈ ವೇಳೆ ಸುಭಾಷ್ ರಾಠೊಡ್ ಅವರು ಸ್ಥಳದಿಂದ ತೆರಳಿದ್ದಾರೆ.
ಪೊಲೀಸರು ಕಾರ್ಯಕರ್ತರನ್ನ ಸಮಾಧಾನ ಪಡಿಸಲು ಯತ್ನಿಸಿದರು. ಎರಡೂ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.