Advertisement

ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಸಂಸದರ ಜತೆ ಮೋದಿ ಸಭೆ

12:04 PM Aug 05, 2017 | |

ಬೆಂಗಳೂರು: ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ದೆಹಲಿಯಲ್ಲಿ ಶುಕ್ರವಾರ ರಾಜ್ಯ ಬಿಜೆಪಿ ಸಂಸದರು ಹಾಗೂ ಸಚಿವರ ಜೊತೆ ಸಭೆ ನಡೆಸಿ, ಚುನಾವಣಾ ಪೂರ್ವ ಸಿದ್ಧತೆ, ಕಾರ್ಯತಂತ್ರಗಳ ಬಗ್ಗೆ ಸುಧೀರ್ಘ‌ ಚರ್ಚೆ ನಡೆಸಿದರು. ಕೇರಳ, ತೆಲಂಗಾಣ, ಆರುಣಚಲಪ್ರದೇಶ,ಆಂದ್ರಪ್ರದೇಶ, ಮಣಿಪುರ,ಸಿಕ್ಕಿಂನ ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

ಸಭೆಯಲ್ಲಿ ರಾಜ್ಯದ ಸಂಸದರಿಂದ ನರೇಂದ್ರ ಮೋದಿ ,ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರ ಅಭಿಪ್ರಾಯ ಬಗ್ಗೆ ಮಾಹಿತಿ ಪಡೆದುಕೊಂಡು ಚುನಾವಣಾ ದೃಷ್ಟಿಯಿಂದ  ಪಾಠ ಹೇಳಿದರು ಎನ್ನಲಾಗಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫ‌ಲ್ಯಗಳನ್ನು ಜನತೆಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿನ ಬಿಜೆಪಿ ಸಂಸದರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ, ಒಂದು ಹಂತದಲ್ಲಿ ಕೆಲವು ಸಂಸದರು ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯನಿರ್ವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ರಾಜ್ಯದಲ್ಲಿ  ಪ್ರಸ್ತುತಯಿರುವ ವೀರಶೈವ ಲಿಂಗಾಯತ ಧರ್ಮ ವಿಚಾರ, ಕನ್ನಡ ಧ್ವಜ ವಿವಾದ, ಕರಾವಳಿ ಭಾಗದ ಕೋಮುಗಲಭೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು,

ರಾಜ್ಯಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು,  ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಮತ್ತು ಅವರ ಬೆಂಬಲಿಗರ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳಲ್ಲಿ ಬಿಜೆಪಿಯ ನಡೆ ಏನಿರಬೇಕು, ಈ ವಿವಾದಗಳನ್ನು ಪಕ್ಷಕ್ಕೆ ಅನುಕೂಲವಾಗುವಂತೆ ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಪ್ರಧಾನಿ ಮೋದಿ ಸಂಸದರಿಗೆ ಕೆಲ ಉಪಯುಕ್ತ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ್‌ ಕೋರೆ, ಮಹದಾಯಿ ಹೋರಾಟದ ಗಂಭೀರತೆಯನ್ನು ಪ್ರಸ್ತಾಪಿಸಿ ಶೀಘ್ರವಾಗಿ ಈ ವಿವಾದ ಇತ್ಯರ್ಥಗೊಳಿಸಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ ಎಂದು ಮನವಿ ಮಾಡಿದರು ಎನ್ನಲಾಗಿದೆ. ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್‌ ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್‌, ಸದಾನಂದಗೌಡ, ರಮೇಶ್‌ ಜಿಗಜಣಿಗಿ, ಶೋಭ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲ್‌ಉಪಸ್ಥಿತರಿದ್ದರು.

Advertisement

ಸಂಸದರ ಹೇಳಿಕೆಯಿಂದ ಸರ್ಕಾರದ ವರ್ಚಸ್ಸಿಗೆ ದಕ್ಕೆ 
ಮೋದಿಯವರು ಸಭೆಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಪುರಸ್ಕೃತ ಯೋಜನೆಗಳನ್ನು ರಾಜ್ಯಗಳಲ್ಲಿ ಸಮರ್ಪಕ ಅನುಷ್ಟಾನಗೊಳ್ಳುವಂತೆ ನೋಡಿಕೊಳ್ಳುವಲ್ಲಿ ಸಂಸದರು ವಿಫ‌ಲರಾಗಿದ್ದಾರೆ. ಕೆಲವು ಸಂಸದರು ನೀಡುತ್ತಿರುವ ಕೆಲ ಹೇಳಿಕೆಗಳು ಅನಗತ್ಯ ಗೊಂದಲ ಸೃಷ್ಟಿಮಾಡುತ್ತಿರುವುದು ಕೆಂದ್ರ ಸರ್ಕಾರದ ವರ್ಚಸಿಗೆ ಧಕ್ಕೆಯಾಗಿದೆ. ಹೀಗಾಗಿ, ಮಾಧ್ಯಮಗಳ ಮುಂದೆ ಬಾಯಿಬಿಡಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜತೆಗೆ ಇತ್ತೀಚೆಗೆ ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆಯಾದಾಗ ಬಿಜೆಪಿ ಸದಸ್ಯರು ಗೈರು ಹಾಜರಾದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.   

Advertisement

Udayavani is now on Telegram. Click here to join our channel and stay updated with the latest news.

Next