Advertisement

ಮತ ಎಣಿಕೆ ಕೇಂದ್ರದ ಸುತ್ತಲೂ “ಮೋದಿ ಮೇನಿಯಾ’

06:30 AM May 16, 2018 | |

ಉಡುಪಿ: ಅತ್ತ ಕುಂಜಿಬೆಟ್ಟು ಟಿ.ಎ. ಪೈ ಶಾಲೆಯಲ್ಲಿನ ಮತ ಎಣಿಕೆ ಕೇಂದ್ರದಿಂದ ಅಭ್ಯರ್ಥಿಗಳಿಗೆ ಬಿದ್ದ ಮತಗಳ ವಿವರ ಮೈಕ್‌ನಲ್ಲಿ ಘೋಷಣೆಯಾಗುತ್ತಿದ್ದರೆ, ಇತ್ತ 100 ಮೀ. ದೂರದ ಎಂಜಿಎಂ ಕಾಲೇಜು ಮೈದಾನದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಆವರಣ ಗೋಡೆಯಿಂದ ಮುಖವನ್ನು ತೂರಿ ಮೋದಿ… ಮೋದಿ… ಮೋದಿ… ಎನ್ನುವ ಘೋಷಣೆಯನ್ನು ಕೂಗುತ್ತಲೇ ಇದ್ದರು.

Advertisement

ಬೆಳ್ಳಂಬೆಳಗ್ಗೆ 7.30ರ ಸುಮಾರಿಗೆ ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ನಾಯಕರು, ಕಾರ್ಯಕರ್ತರು ಎಂಜಿಎಂ ಕಾಲೇಜು ಮೈದಾನಕ್ಕೆ ಬರತೊಡಗಿದ್ದರು. ಕುತೂಹಲಿ ಗರೂ ಮೈದಾನದಲ್ಲಿ ಸೇರಿದ್ದರು. ಐದಾರು ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿಗಳ ಮತಗಳ ಅಂತರ ಹೆಚ್ಚುತ್ತಿದ್ದಂತೆ ಬಿಜೆಪಿಯ ಯುವ ಕಾರ್ಯಕರ್ತರು ಮೈದಾನದ ಪೆವಿಲಿಯನ್‌ ಮೇಲೇರಿ ಘೋಷವಾಕ್ಯ ಕೂಗುತ್ತಲೇ ಇದ್ದರು.

ಹಿಂದೆ  ಸರಿದ ಕಾಂಗ್ರೆಸಿಗರು 
ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆಯೇ ಆಯಾ ಕ್ಷೇತ್ರಗಳ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮೈದಾನದಿಂದ ಮೆಲ್ಲಗೆ ಚದುರತೊಡಗಿದ್ದರು. ಅದೇ ಸಂದರ್ಭ ಬಿಜೆಪಿಗರ ಸಂಖ್ಯೆ ಹೆಚ್ಚಾಗುತ್ತಿತ್ತು. ಬಿಗಿ ಭದ್ರತೆ ಇದ್ದ ಕಾರಣ ಮೈದಾನದಿಂದ ಹೊರಕ್ಕೆ ಅಂದರೆ ಮತ ಎಣಿಕೆ ಕೇಂದ್ರದ ಮುಂಭಾಗಕ್ಕೆ ತೆರಳಲು ಅವಕಾಶವಿರಲಿಲ್ಲ. ಎಲ್ಲರೂ ಎಂಜಿಎಂ ಮೈದಾನದ ಪಶ್ಚಿಮ ಬದಿಯಲ್ಲಿ ಸೇರಿದ್ದರು. ಬಿಜೆಪಿ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಮೈದಾನದೆಲ್ಲೆಡೆ ಬಿಜೆಪಿ ಪಕ್ಷ ಧ್ವಜ, ಪತಾಕೆ ಏಕಾಧಿಪತ್ಯ ಸಾಧಿಸಿ ಬಿಟ್ಟಿತ್ತು.

ಜನರ ಕುತೂಹಲ
ಹೆಚ್ಚಿನ ಎಲ್ಲರೂ ಮೊಬೈಲ್‌ನಲ್ಲಿ ಚುನಾವಣಾ ವಿವರವನ್ನು ಷೇರ್‌ ಮಾಡಿಕೊಳ್ಳುತ್ತಿದ್ದರು. ಕೆಲವರು ರಾಜ್ಯದಾದ್ಯಂತ 
ಏನೇನಾಗುತ್ತಿದೆ ಎನ್ನುವುದನ್ನು ಮೊಬೈಲ್‌ನಲ್ಲೇ ವೈಬ್‌ಸೈಟ್‌ ಮೂಲಕ ನೋಡುತ್ತ ಲಿದ್ದರು. 

ಕಾಂಗ್ರೆಸಿಗರ ಮುಂದೆಯೂ ಜೈಕಾರ
ಮತ ಎಣಿಕೆ ಕೇಂದ್ರದಿಂದ ಕಾಂಗ್ರೆಸ್‌ ನಾಯಕರು ಹೊರಗೆ ಬರುತ್ತಿದ್ದಂತೆಯೇ ಮೈದಾನದ ಕಾಂಪೌಂಡ್‌ ಸುತ್ತಲೂ ಸೇರುತ್ತಿದ್ದ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಲಿದ್ದರು.

Advertisement

ಅಭ್ಯರ್ಥಿಗಳಿಗೆ ಜೈಕಾರ!
ಲೀಡ್‌ ಕಾಯ್ದುಕೊಳ್ಳುತ್ತಿದ್ದಂತೆಯೇ ಬೈಂದೂರು ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ 12 ಗಂಟೆಯ ಹೊತ್ತಿಗೆ ಎಂಜಿಎಂ ಮೈದಾನಕ್ಕೆ ಆಗಮಿಸಿದರು. ಅವರು ಬರುತ್ತಲೇ ಅಭಿಮಾನಿಗಳು ಅವರನ್ನು ಸುತ್ತುವರಿದು ಜೈಕಾರ ಹಾಕಿ ಗೇಟಿನ ವರೆಗೆ ಕರೆದೊಯ್ದರು. 

ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನೀಲ್‌ ಕುಮಾರ್‌  ಅವರು  12.30ರ ಸುಮಾರಿಗೆ ಮೈದಾನಕ್ಕೆ ಬಂದಾಗ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಕರೆದೊಯ್ದರು. 

ಮೋದಿ, ಹಾಲಾಡಿಗೆ ಕ್ಷೀರಾಭಿಷೇಕ
ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದು ಕೊಂಡೇ ಬಂದಿದ್ದ ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅಭಿಮಾನಿಗಳು ವಾಹನದಲ್ಲಿ ಹಾಲಾಡಿಯವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು. ಕೆಲ ಹೊತ್ತಿನ ಬಳಿಕ ಪೆವಿಲಿಯನ್‌ನ ಮೇಲೆ ಮೋದಿ ಭಾವಚಿತ್ರಕ್ಕೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next