Advertisement

ಮೋದಿಯಿಂದ ಬ್ಯಾಂಕಿಂಗ್‌ ವ್ಯವಸ್ಥೆ ನಾಶ: ಎಟಿಎಂ ಖಾಲಿ ಬಗ್ಗೆ ರಾಹುಲ್‌

03:35 PM Apr 17, 2018 | Team Udayavani |

ಹೊಸದಿಲ್ಲಿ : ನೋಟು ಅಮಾನ್ಯದ ದಿನಗಳನ್ನು ನೆನಪಿಸುವ ರೀತಿಯಲ್ಲಿ  ಇಂದು ದೇಶದ ವಿವಿಧ ಭಾಗಗಳಲ್ಲಿ ತೀವ್ರ ನಗದು ಕೊರತೆ ಉಂಟಾಗಿ ಎಟಿಎಂ ಗಳು ಖಾಲಿಯಾಗಿರುವ ವರದಿಗಳು ಇಂದು ವ್ಯಾಪಕವಾಗಿ ಹರಡುತ್ತಿರುವಂತೆಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ  ಹೊಸ ವಾಗ್ಧಾಳಿಯನ್ನು ಆರಂಭಿಸಿದ್ದಾರೆ. ಮೋದಿ ಜೀ ಅವರು ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ನಾಶ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ.

Advertisement

ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಅವರು ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 30,000 ಕೋಟಿ ರೂ. ವಂಚಿಸಿರುವ ಉದಾಹರಣೆಯನ್ನು ಎತ್ತಿಕೊಂಡ ರಾಹುಲ್‌ ಗಾಂಧಿ, ಇಷ್ಟೊಂದು ದೊಡ್ಡ ಮೊತ್ತದ ಬ್ಯಾಂಕ್‌ ವಂಚನೆ ನಡೆದರೂ ಪ್ರಧಾನಿ ಮೋದಿ ಮೌನವಹಿಸಿದ್ದಾರೆ ಎಂದು ಟೀಕಿಸಿದರು. 

ನೋಟು ಅಮಾನ್ಯ ಕ್ರಮದ ಮೂಲಕ ಪ್ರಧಾನಿ ಮೋದಿ ಅವರು ಚಲಾವಣೆಯಲ್ಲಿದ್ದ 500 ರೂ. ಮತ್ತು 1,000 ರೂ. ನೋಟುಗಳನ್ನು  ದೇಶದ ಹಣಕಾಸು ಮಾರುಕಟ್ಟೆಯಿಂದ ಹಿಂಪಡೆದುಕೊಂಡು ನೀರವ್‌ ಮೋದಿಗೆ ನೀಡಿದ್ದಾರೆ; ನಮ್ಮನ್ನೆಲ್ಲ ಬ್ಯಾಂಕ್‌ ಮುಂದೆ ಕ್ಯೂನಲ್ಲಿ ನಿಲ್ಲಿಸಿದ್ದಾರೆ  ಎಂದು ರಾಹುಲ್‌ ಗಾಂಧಿ, ನೋಟು ಅಪನಗದೀಕರಣ ಕ್ರಮವನ್ನು ಖಂಡಿಸಿದರು. 

“ಇಂತಹ ಅನೇಕ ಕಾರಣಗಳಿಗಾಗಿ ಪ್ರಧಾನಿ ಮೋದಿ ಅವರು ಸಂಸತ್ತನ್ನು ಎದುರಿಸಲು ಹೆದರುತ್ತಾರೆ. ಅದು ಬೇಕಿದ್ದರೆ ರಾಫೇಲ್‌ ವಿಷಯವೇ ಇರಲಿ ಅಥವಾ ನೀರವ್‌ ಮೋದಿ ವಿಷಯವೇ ಇರಲಿ; ಮೋದಿ ಅವರು ಸಂಸತ್ತಿನಲ್ಲಿ ನಿಂತು ಮಾತನಾಡುವುದಿಲ್ಲ; ಕೇವಲ 15 ನಿಮಿಷ ಮಾತನಾಡಿ ಎಂದು ನಾವು ಕೇಳಿಕೊಂಡರೂ ಅವರು ಮಾತನಾಡಲು ಎದ್ದು ನಿಲ್ಲುವುದಿಲ್ಲ’ ಎಂದು ರಾಹುಲ್‌ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next