ಚುನಾವಣೆಯಲ್ಲಿ ಅಮೋಘ ಗೆಲುವು ನಿಚ್ಚಳವಾ ಗುತ್ತಲೇ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಸಂಜೆ ಟ್ವಿಟರ್‌ನಲ್ಲಿ ತಮ್ಮ ಹೆಸರಿನೊಂದಿಗಿದ್ದ ‘ಚೌಕಿದಾರ್’ ಪದವನ್ನು ತೆಗೆದುಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಧಾನಿ ಮೋದಿ, ದೇಶದಲ್ಲಿ ತಾಂಡವವಾಡುತ್ತಿರುವ ಜಾತೀಯತೆ, ಕೋಮುವಾದ, ಭ್ರಷ್ಟಾಚಾರ ಸೇರಿದಂತೆ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ‘ಮೈ ಭಿ ಚೌಕಿದಾರ್’ ಅಭಿಯಾನ ಆರಂಭಿಸಿದ್ದರು. ಆದರೆ ಈಗ ಲೋಕಸಭೆ ಚುನಾವಣೆ ಮುಗಿಯುತ್ತಲೇ ಚೌಕಿದಾರ್ ಪದ ಕಿತ್ತು ಹಾಕಿದ್ದಾರೆ. ಚೌಕಿದಾರ್ ಪದ ತೆಗೆದು ಹಾಕಿರುವುದಕ್ಕೆ ಸಮರ್ಥನೆ ನೀಡಿರುವ ಮೋದಿ, ‘ಸದ್ಯ ನಾವು ಚೌಕಿದಾರನ ಹಂತದಿಂದ ಮುಂದೆ ಸಾಗಬೇಕಿದೆ. ನೀವು ಕೂಡ ನನ್ನಂತೆಯೇ ಮಾಡಿ’ ಎಂದು ಅಭಿಮಾನಿಗಳಿಗೆ ಟ್ವಿಟರ್‌ನಲ್ಲಿ ಸಲಹೆ ನೀಡಿದ್ದಾರೆ. ಬಿಜೆಪಿ ಪ್ರಮುಖ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಸ್ಮತಿ ಇರಾನಿ ಕೂಡ ಪ್ರಧಾನಿ ಮೋದಿಯನ್ನು ಅನುಸರಿಸಿದ್ದಾರೆ.