ವಿಜಯಪುರ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅ ಧಿಕಾರಕ್ಕೆ ಬರುತ್ತಲೇ ದೇಶದಲ್ಲಿ ಅವೈಜ್ಞಾನಿಕ ತೆರಿಗೆ ನೀತಿ ಜಾರಿಗೊಂಡಿದೆ. ಮೋದಿ ಆಡಳಿತದಲ್ಲಿ ಭಾರತದ ಜಿಡಿಪಿ ಪುಟ್ಟ ಬಾಂಗ್ಲಾದೇಶಕ್ಕಿಂತ ಭಾರಿ ಕುಸಿತ ಕಂಡಿದೆ. ತೋಟದ ಮಾಲಿ-ಕಾವಲುಗಾರನಂತೆ ಇರಬೇಕಿದ್ದ ಪ್ರಧಾನಿ ಮೋದಿ, ಹಣ್ಣಿ ಮರ ಕಡಿದು ಇದ್ದಿಲು ಮಾರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೊಡ ವಾಗ್ಧಾಳಿ ನಡೆಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ಕಡಿಮೆ ಹಾಗೂ ನಾಗರಿಕರಿಗೆ ಹೆಚ್ಚು ತೆರಿಗೆ ವಿಧಿಸಿ ಶ್ರೀಮಂತರ ಪರ ಕೆಲಸ ಮಾಡುತ್ತಿದೆ ಎಂದು ಅಂಕಿ-ಸಂಖ್ಯೆ ನೀಡಿದರು. ಮೋದಿ ಅಧಿ ಕಾರಕ್ಕೆ ಬರುತ್ತಲೇ ರಫ್ತು ನೀತಿಯನ್ನು ಕೂಡ ಹದಗೆಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ಕಚ್ಚಾ ಹಾಗೂ ಸಿದ್ಧ ವಸ್ತುಗಳಿಗೆ ಬೇಡಿಕೆ ಇದ್ದರೂ ರಫ್ತು ಕುಸಿತ ಮಾಡಿದ್ದಾರೆ. ಪರಿಣಾಮ ದೇಶಿ ರೈತರ ರೇಷ್ಮೆ ಸೇರಿದಂತೆ ಬಹುತೇಕ ಉತ್ಪನ್ನಕ್ಕೆ ಬೇಡಿಕೆ ಕುಸಿತವಾಗಿ, ಚೀನಾ ವಸ್ತುಗಳ ಆಮದು ಹೆಚ್ಚಿದೆ ಎಂದು ದೂರಿದರು.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕುಸಿತವಾಗದಿದ್ದರೂ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ಮೋದಿ ಸರ್ಕಾರ ದೇಶದ ಜನರ ಮೇಲೆ ಪೆಟ್ರೋಲ್-ಡೀಸೆಲ್ ಸೇರಿದಂತೆ ಎಲ್ಲ ತೈಲ ಬೆಲೆ ಏರಿಕೆ ಮಾಡಿದೆ. ಇದರಿಂದ ಅಗತ್ಯ ವಸ್ತಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ಈ ಸಂಕಷ್ಟ ಮಧ್ಯೆಯೇ ಅನಿಲ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ ಎಂದು ಕಿಡಿಕಾರಿದರು.
ಕೋವಿಡ್ ಹಾಗೂ ಕೋವಿಡ್ ನಂತರ ಸೃಷ್ಟಿಯಾಗಿರುವ ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧಿ ಯೇ ಲಭ್ಯವಿಲ್ಲ. ದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ಗೂ ಅಗತ್ಯ ಲಸಿಕೆಯೇ ಸಿಗುತ್ತಿಲ್ಲ. ಕಳೆದ ನಾಲ್ಕಾರು ದಿನಗಳಿಂದ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆಯೇ ಸಿಗುತ್ತಿಲ್ಲ ಎಂದು ದೂರಿದರು. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಆಡಳಿತದ ದುರವಸ್ಥೆ ಬಗ್ಗೆ ಹೊರಹಾಕಲು ಆಡಳಿತ ಪಕ್ಷದ ಸಚಿವ ಯೋಗೇಶ್ವರ, ಶಾಸಕ ಯತ್ನಾಳ ಅವರೇ ಸಾಕು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಗಿಂತ ಅವರೇ ನಿಖರವಾಗಿ ಯಡಿಯೂರಪ್ಪ ಸರ್ಕಾರದ ಅವ್ಯವಹಾರಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿದ್ದಾರೆ.
ಹೀಗಾಗಿ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಹೊರಗಿನವರು ಹೇಳುವ ಅಗತ್ಯವೇ ಇಲ್ಲ ಎಂದೂ ಕುಟುಕಿದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೋವಿಡ್ ನಿರ್ವಹಣೆ ಮರೆತು ಲೋಪ ಎಸಗಿದ್ದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ, ಔಷಧ, ಲಸಿಕೆ, ಚಿಕಿತ್ಸೆ ಸಿಗದೇ ಸಾವು ಹೆಚ್ಚಲು ಕಾರಣ. ಕೋವಿಡ್ ಪರಿಹಾರದ ಕಿಟ್ ನೀಡುವಲ್ಲೂ ಈ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ದೂರಿದರು. ಎಸ್.ಎಂ. ಪಾಟೀಲ ಗಣಿಹಾರ, ವಸಂತ ಹೊನಮೋಡೆ, ಅಬ್ದುಲ್ ಹಮೀದ್ ಮುಶ್ರೀಫ್, ಟಪಾಲ್ ಇಂಜೀಯರ್, ಈರಪ್ಪ ಜಕ್ಕಣ್ಣವರ ಇದ್ದರು.