ಹಾವೇರಿ: ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ‘ಚೌಕಿದಾರ’ ಎಂದು ಘೋಷಿಸಿಕೊಂಡಿದ್ದಾರೆ. ನನ್ನ ಪ್ರಕಾರ ಅವರು ‘ಚೌಕಿದಾರ’ ಅಲ್ಲ; ಶೋಕಿದಾರ ಎಂದು ಮಾಜಿ ಸಚಿವ ಎಚ್. ಆಂಜನೇಯ ಟೀಕಿಸಿದರು.
ಪ್ರಧಾನಿಯಾದ ಬಳಿಕ ಸಂಸತ್‌ನಲ್ಲಿ ಕುಳಿತಿದ್ದು 19 ದಿನ ಮಾತ್ರ. ಉಳಿದೆಲ್ಲ ದಿನ ವಿದೇಶ ಓಡಾಡಿ ಜಾಲಿ ಟ್ರಿಪ್ ಮಾಡಿದರು. ಪಾಕ್‌ನ ಹಿಂದಿನ ಪ್ರಧಾನಿಯನ್ನು ಇವರೇ ಹೋಗಿ ಭೇಟಿಯಾಗಿ ಆಲಿಂಗನ ಮಾಡಿಕೊಳ್ಳುತ್ತಾರೆ. ಬಿಜೆಪಿ ಪಕ್ಷದ ಆಡಳಿತ ಅವಧಿಯಲ್ಲಿಯೇ ಪಾಕಿಸ್ತಾನಕ್ಕೆ ಬಸ್ ಬಿಡುತ್ತಾರೆ. ಆದರೆ, ಕಾಂಗ್ರೆಸ್ ಯಾವತ್ತೂ ಭಯೋತ್ಪಾದನೆ ಬೆಂಬಲಿಸುವವರೊಂದಿಗೆ ಸ್ನೇಹ ಬೆಳೆಸಿಲ್ಲ. ದೇಶದ ಸೈನಿಕರ ಶೌರ್ಯವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದ ಅವರು, ದೇಶದ ಸೈನಿಕರ ಸಾವಿನಲ್ಲಿ ಬಿಜೆಪಿಗರು ರಾಜಕೀಯ ಮಾಡುತ್ತಿರುವುದು ವಿಷಾದನೀಯ ಎಂದರು.
ಮೋದಿ ಬರೀ ಘೋಷಣೆಯಲ್ಲಿಯೇ ರೈತರು ಹಾಗೂ ಬಡವರ ಹೊಟ್ಟೆ ತುಂಬಿಸಿದ್ದಾರೆ. ವಾಸ್ತವದಲ್ಲಿ ಹೊಟ್ಟೆ ತುಂಬಿಸುವ ಕೆಲಸ ಮಾಡಿಲ್ಲ. ಕೆಲ ಯುವಕರು ‘ಮೋದಿ ಮೋದಿ’ ಎನ್ನುತ್ತಾರೆ. ಮೋದಿ ಯುವಕರಿಗಾಗಿ ಏನೂ ಮಾಡಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಅದನ್ನೂ ಮಾಡಿಲ್ಲ. ಇದನ್ನು ಯುವಕರು ತಿಳಿಯಬೇಕು. ದೇಶದ ಇತಿಹಾಸ ಅರಿಯಬೇಕು. ಅಂಬೇಡ್ಕರ್ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುವ ಬಿಜೆಪಿಗರು, ಚುನಾವಣೆ ವೇಳೆ ಅಂಬೇಡ್ಕರ್ ಮೇಲೆ ಹುಸಿಪ್ರೇಮ ತೋರಿಸುತಿದ್ದಾರೆ ಎಂದರು.
ಈ ದೇಶ ಕಟ್ಟಿದವರು ಕಾಂಗ್ರೆಸ್ಸಿಗರು. ದೇಶದ ಎಲ್ಲ ರಂಗಗಳ ಅಭಿವೃದ್ಧಿಗೆ ಭೂಮಿಕೆ ಹಾಕಿದವರೇ ಕಾಂಗ್ರೆಸ್ಸಿಗರು. ಈಗ ಬಂದಿರುವ ಮೋದಿಯವರು ಎಲ್ಲವನ್ನೂ ತಾವೇ ಮಾಡಿದ್ದೇವೆ ಎನ್ನುತ್ತಿದ್ದಾರೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.
Advertisement
ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೋದಿಯವರು ದಿನಕ್ಕೆ ಐದಾರು ಜತೆ ಉಡುಪು ಬದಲಾಯಿಸುತ್ತಾರೆ. ಲಕ್ಷಾಂತರ ಮೌಲ್ಯದ ಉಡುಪು ಧರಿಸುತ್ತಾರೆ. ಸದಾ ಮೆಕಪ್‌ನಲ್ಲೇ ಇರುತ್ತಾರೆ. ಒಟ್ಟಾರೆ ಮೋದಿ ಈ ದೇಶದ ಬಡವರನ್ನು ಆಳುವ ಶ್ರೀಮಂತ ಪ್ರಧಾನಿ ಎಂದರು.
Related Articles
Advertisement
ಕಾಂಗ್ರೆಸ್‌ನಲ್ಲಿ ಯಾರು ಬೇಕಾದರೂ ತಮ್ಮ ಆಕಾಂಕ್ಷೆ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಹೀಗಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ. ಎಂ.ಬಿ. ಪಾಟೀಲ ಹೀಗೆ ಹಲವರು ತಾವು ಸಿಎಂ ಆಗುತ್ತೇವೆ ಎಂದು ತಮ್ಮ ಆಕಾಂಕ್ಷೆ ತೋರ್ಪಡಿಸುತ್ತಾರೆ. ಆದರೆ, ಬಿಜೆಪಿಯಲ್ಲಿ ಇಂಥ ಸ್ವಾತಂತ್ರ್ಯವಿಲ್ಲ. ತಾವು ಸಿಎಂ ಆಗುತ್ತೇನೆ ಎಂದು ಹೇಳುವ ಧೈರ್ಯ ಶೆಟ್ಟರ್, ಆರ್. ಅಶೋಕ್, ಈಶ್ವರಪ್ಪ, ಗೋವಿಂದ ಕಾರಜೋಳ ಹೀಗೆ ಯಾರಿಗೂ ಇಲ್ಲ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಕಾಂಗ್ರೆಸ್ ಧರ್ಮ ಒಡೆಯುವ ಕೆಲಸ ಮಾಡಿಲ್ಲ. ತಮಗೆ ಪ್ರತ್ಯೇಕ ಸೌಲಭ್ಯ, ವಿಶೇಷ ಸ್ಥಾನಮಾನ ಬೇಕು ಎಂದು ಕೇಳಿಕೊಂಡು ಬಂದಾಗ ಆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದೆ. ಸೌಲಭ್ಯ, ವಿಶೇಷ ಸ್ಥಾನಮಾನ ಕೊಡಿ ಎಂದರೆ ಅದು ಧರ್ಮ ಒಡೆದಂತಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಅಷ್ಟಕ್ಕೂ ಬಿಜೆಪಿ ಲಿಂಗಾಯತರಿಗೆ ಏನು ಮಾಡಿದೆ? ಒಂಭತ್ತಕ್ಕೂ ಹೆಚ್ಚು ಲಿಂಗಾಯತ ಸಂಸದರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ ಎಂದರು.
ಬಿಜೆಪಿ ರಾಜ್ಯದಲ್ಲಿ ಪ್ರತಿಪಕ್ಷವಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಪರೇಶನ್ ಕಮಲ, ವಿನಾಕಾರಣ ಆರೋಪ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತಿದೆ. ಕುಮಾರಸ್ವಾಮಿಯವರು ಸಿಎಂ ಸ್ಥಾನ ಅಲಂಕರಿಸಿದಾಗಿನಿಂದ ಬಿಜೆಪಿಯವರ ಕಾಟ ಹೆಚ್ಚಾಗಿದೆ. ಹೀಗಾಗಿ ಅವರು ಅಲ್ಲಲ್ಲಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಎಚ್. ಆಂಜನೇಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಪಕ್ಷದ ಪ್ರಣಾಳಿಕೆ, ಪಕ್ಷ ಅಧಿಕಾರದಲ್ಲಿದ್ದಾಗ ಎಲ್ಲ ವರ್ಗದ ಏಳ್ಗೆಗಾಗಿ ಜಾರಿಗೆ ತಂದ ಯೋಜನೆಗಳು ಈ ಬಾರಿ ಕೈಹಿಡಿಯಲಿವೆ ಎಂದರು.
ಪಕ್ಷದ ಪರಿಶಿಷ್ಟ ಮೋರ್ಚಾ ರಾಜ್ಯ ಅಧ್ಯಕ್ಷ ಎಫ್.ಎಸ್. ಜಟ್ಟಪ್ಪನವರ, ಕಾಂಗ್ರೆಸ್ ಅಧಿಕಾರಾವಯಲ್ಲಿ ಪರಿಶಿಷ್ಟರಿಗೆ ಹೆಚ್ಚು ಅನುದಾನ, ಸೌಲಭ್ಯ ಸಿಕ್ಕಿದೆ. ಇದು ಚುನಾವಣೆಯಲ್ಲ; ಪ್ರಜಾತಂತ್ರ ಉಳಿಸುವ ಯಜ್ಞ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಬೆಂಬಲಿಸಬೇಕಾಗಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ನೀರಲಗಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.