ಧಾರವಾಡ:ದೇಶದ ರಾಜಧಾನಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಮುಖ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸಹ್ಯವೇ? ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಪ್ರಶ್ನಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಸಚಿವರು ಹಾಗೂ ಅಧಿಕಾರಿಗಳ ಬದಲಿಗೆ ನೇರವಾಗಿ ಪ್ರಧಾನಿ ಅವರೆ ರೈತರನ್ನು ಸಭೆಗೆ ಕರೆದು ಅವರ ಅಳಲು ಆಲಿಸಲಿ ಎಂದರು.
ಎಷ್ಟು ರೈತರನ್ನು ಬಲಿ ತೆಗೆದುಕೊಂಡ ಬಳಿಕ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯುತ್ತದೆ? ಎಂದ ಬಾಬಾಗೌಡ ಪಾಟೀಲ ಅವರು, ಧರ್ಮ, ಜಾತಿ, ಪೂಜೆ, ಪುರಸ್ಕಾರದ ಮೂಲಕ ದೇಶದ ಪ್ರಗತಿ ಸಾಧ್ಯವೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರೈತ ಚಳುವಳಿ ಸುತ್ತ ಕೊಳಗ
ಲಕ್ಷಾಂತರ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಇಂತಹ ಪ್ರತಿಭಟನೆ ದೇಶ ಹಿಂದೆಂದೂ ಕಂಡಿಲ್ಲ. ಆದರೆ ಈ ನಡುವೆ ನಕಲಿ ರೈತರು, ರೈತ ಮುಖಂಡರು ಹಾಗೂ ರೈತ ಸಂಘಟನೆಗಳನ್ನು ಹುಟ್ಟು ಹಾಕಿ ಕಾಯ್ದೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುತ್ತಿರುವ ಕುತಂತ್ರವೂ ಸಾಗಿದೆ. ಆದರೆ ರೈತ ವಿರೋಧಿ ಕಾಯ್ದೆಗಳನ್ನು ದೇಶದ ರೈತರು ಒಪ್ಪಿಲ್ಲ ಎಂಬ ಸತ್ಯವನ್ನು ಅರಿಯಬೇಕು ಎಂದರು.
ರಾಜಕೀಯವಾಗಿ ಸೋಲುತ್ತೇವೆ ಎಂಬ ಭಯದಿಂದ ಹಠಕ್ಕೆ ಬಿದ್ದಿದ್ದಾರೆ ಬಿಜೆಪಿ ನಾಯಕರು. ಆದರೆ ಈ ಹಠ, ಪ್ರತಿಷ್ಠೆದಿಂದ ರೈತರ ಬದುಕು ಹಾಳಾಗಲಿದೆ. ರೈತರ ಹಿತದೃಷ್ಟಿಯಿಂದ ಕಾಯ್ದೆ ಹಿಂಪಡೆದರೆ ರೈತ ಸಮುದಾಯ ಹಾಗೂ ಕೃಷಿ ಕ್ಷೇತ್ರಕ್ಕೆ ಒಳಿತಾಗಲಿದೆ ಎಂದರು.