Advertisement
ಅಮೆರಿಕ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದು ಹೀಗೆ. ಅಮೆರಿಕ ಪ್ರವಾಸದಲ್ಲಿರುವ ಮೋದಿಯವರು ಯುಎಸ್ ಕಾಂಗ್ರೆಸ್‌ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತ ಚೀನ ಮತ್ತು ಪಾಕ್ ಮೇಲೆ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ.
Related Articles
Advertisement
ಭಯೋತ್ಪಾದನೆ ಎನ್ನುವುದು ಒಟ್ಟು ಮನುಕುಲಕ್ಕೆ ಅಪಾಯ. ಹೀಗಾಗಿ ಉಗ್ರವಾದವನ್ನು ಪ್ರಾಯೋಜಿಸುತ್ತಿರುವ ಮತ್ತು ರಫ್ತು ಮಾಡುತ್ತಿರುವ ಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಮೋದಿ ಕರೆ ನೀಡಿದರು. ವ್ಯೂಹಾತ್ಮಕವಾಗಿ ಮಹತ್ವದ ಪ್ರದೇಶವಾದ ಇಂಡೋ ಪೆಸಿಫಿಕ್ ಮೇಲೆ ಆಕ್ರಮಣ ಮತ್ತು ಸಂಘರ್ಷದ ಕರಿನೆರಳು ಬಿದ್ದಿದೆ ಎಂದು ಹೇಳುವ ಮೂಲಕ ಮೋದಿ ಅವರು ಚೀನದ ವಿಸ್ತರಣಾವಾದದ ವಿರುದ್ಧವೂ ಕಿಡಿಕಾರಿದರು. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಯೇ ನಮಗೆ ದೊಡ್ಡ ಸವಾಲಾಗಿದೆ ಎಂದರು.
15 ಬಾರಿ ಎದ್ದು ನಿಂತು ಗೌರವ; 79 ಬಾರಿ ಕರತಾಡನ!
ಮೋದಿ ಭಾಷಣಕ್ಕೆ ಅಮೆರಿಕ ಸಂಸದರಿಂದ ಚಪ್ಪಾಳೆಯ ಸುರಿಮಳೆಯೇ ಸುರಿದಿದೆ. ಸಂಸದರು ಸುಮಾರು 15 ಬಾರಿ ಎದ್ದು ನಿಂತು ಗೌರವ ಸೂಚಿಸಿದ್ದಲ್ಲದೆ 79 ಬಾರಿ ಕರತಾಡನ ಮಾಡುವ ಮೂಲಕ ಮೋದಿಯ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದರು.
ನಗು ಉಕ್ಕಿಸಿದ ಸಮೋಸಾ ಕಾಕಸ್
ಅಮೆರಿಕದಲ್ಲಿ ಇರುವ ಲಕ್ಷಾಂತರ ಮಂದಿ ಭಾರತದಲ್ಲಿ ಬೇರುಗಳನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಈ ಸದನದ ಛೇಂಬರ್‌ನಲ್ಲಿ ಕುಳಿತಿದ್ದಾರೆ. ಒಬ್ಬರು ನನ್ನ ಹಿಂದೆ ಆಸೀನರಾಗಿದ್ದಾರೆ. ಅವರು ಇತಿಹಾಸವನ್ನೇ ನಿರ್ಮಿಸಿದವರು ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತು ಪ್ರಧಾನಿ ಮೋದಿ ನುಡಿದಾಗ ಚಪ್ಪಾಳೆಯ ಸುರಿಮಳೆಯಾಯಿತು.
ಭಾರತೀಯರು ಕೇವಲ ಸ್ಪೆಲ್ಲಿಂಗ್ ಬೀಯಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಬುದ್ಧಿವಂತರು ಎಂದು ಮೋದಿ ಹೇಳಿದಾಗ ಸಂಸದರು ನಗೆಗಡಲಲ್ಲಿ ತೇಲಿದರು. “ಸಮೋಸಾ ಕಾಕಸ್ ಈಗ ಇಡೀ ಸದನದ ಫ್ಲೇವರ್ ಆಗಿ ಹೊರಹೊಮ್ಮಿದೆ. ಅದು ಇನ್ನಷ್ಟು ಬೆಳೆದು ವೈವಿಧ್ಯಮಯ ಭಾರತೀಯ ಖಾದ್ಯಗಳ ಸವಿಯನ್ನು ಇಲ್ಲಿ ಪಸರಿಸಲಿ” ಎಂದೂ ಮೋದಿ ಹೇಳಿದರು. ಜನಪ್ರಿಯ ಭಾರತೀಯ ಖಾದ್ಯಗಳಲ್ಲಿ ಒಂದಾದ ಸಮೋಸಾವನ್ನು ಅಮೆರಿಕಕ್ಕೆ ಹೋದ ಭಾರತೀಯರು ಅಲ್ಲೂ ಜನಪ್ರಿಯಗೊಳಿಸಿದ್ದಾರೆ. ಅಮೆರಿಕ ಸಂಸತ್ತಿನಲ್ಲಿರುವ ದಕ್ಷಿಣ ಏಷ್ಯಾ ಮೂಲದ ಚುನಾಯಿತ ಪ್ರತಿನಿಧಿಗಳ ಸಮೂಹ (ವಿಶೇಷವಾಗಿ ಭಾರತೀಯರು)ವನ್ನು “ಸಮೋಸಾ ಕಾಕಸ್” ಎಂದೇ ಕರೆಯಲಾಗುತ್ತದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.