ಹೊಸದಿಲ್ಲಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ಮೋದಿಯವರು ರವಿವಾರ ಸುದೀರ್ಘ ಸಭೆಗಳನ್ನು ನಡೆಸಿದ್ದಾರೆ.
ಹೊಸದಿಲ್ಲಿಯಲ್ಲಿ ಬಿಸಿಲಿನ ಝಳ, ಆಸ್ಪತ್ರೆಗಳಲ್ಲಿ ವಿದ್ಯುತ್ ಮತ್ತು ಭದ್ರತೆಯ ಪರಿಶೀಲನೆ, ರೆಮಲ್ ಚಂಡಮಾರುತ
ದಿಂದ ಹಾನಿ ಸಹಿತ ಒಟ್ಟು 7 ವಿಚಾರ ಗಳಿಗೆ ಸಂಬಂಧಿಸಿ ಸರಣಿ ಸಭೆ ನಡೆಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರ ಉಳಿಸಿಕೊಳ್ಳಲಿದೆ ಎಂಬ ಸುಳಿವು ದೊರಕುತ್ತಿದ್ದಂತೆಯೇ ಪ್ರಧಾನಿ ಈ ಸಭೆ ನಡೆಸಿರುವುದು ಗಮನಾರ್ಹ.
ಬಿಜೆಪಿ ನೇತೃತ್ವದ ಸರಕಾರ 3ನೇ ಬಾರಿಗೆ ಅಧಿಕಾರಕ್ಕೆ ಬಂದರೆ ಮೊದಲ 100 ದಿನಗಳಲ್ಲಿ ಏನೇನು ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು ಎಂಬ ಬಗ್ಗೆಯೂ ರವಿವಾರ ನಡೆದ ಒಂದು ಸಭೆಯಲ್ಲಿ ನರೇಂದ್ರ ಮೋದಿ ಅವರು ಅಭಿಪ್ರಾಯ ಸಂಗ್ರಹ, ಪರಾಮರ್ಶೆ ನಡೆಸಿ ದ್ದಾರೆ ಎನ್ನಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಬಿಸಿಲಿನಿಂದ ಉಂಟಾದ ಜೀವ ಹಾನಿ ಮತ್ತಿತರ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮಾಹಿತಿ ಪಡೆದುಕೊಂಡರು. ರೆಮಲ್ ಚಂಡಮಾರುತದಿಂದ ಈಶಾನ್ಯ ರಾಜ್ಯಗಳಲ್ಲಿ ಉಂಟಾದ ಹಾನಿಯ ಬಗ್ಗೆ ಮಾಹಿತಿ ಪಡೆದು, ಕೈಗೊಳ್ಳಬೇಕಾಗಿರುವ ಪರಿಹಾರ ಕಾರ್ಯಾಚರಣೆಯ ಬಗ್ಗೆ ನಿರ್ದೇಶನ ನೀಡಿದ್ದಾರೆ. ಜ. 5ರ ವಿಶ್ವ ಪರಿಸರ ದಿನದಂದು ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.