ಹೊಸದಿಲ್ಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಗುರುವಾರ ಎರಡೂ ರಾಷ್ಟ್ರಗಳ ನಡುವೆ ನಡೆದ ವರ್ಚುವಲ್ ಶೃಂಗಸಭೆ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೈಡ್ರೋಕಾರ್ಬನ್ಸ್, ಕೃಷಿ, ಜವುಳಿ ಸೇರಿದಂತೆ ಹಲವು ವಲಯಗಳಿಗೆ ಸಂಬಂಧಿಸಿದ 7 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನಮ್ಮ “ನೆರೆಹೊರೆಯವರೇ ಮೊದಲು ‘ಎಂಬ ನೀತಿಗೆ ಬಾಂಗ್ಲಾದೇಶವು ಆಧಾರ ಸ್ತಂಭವಾಗಿದೆ ಎಂದು ಶ್ಲಾ ಸಿದ್ದಾರೆ.
ಈ ಏಳು ಒಪ್ಪಂದಗಳ ಜತೆಗೇ, ಎರಡೂ ದೇಶಗಳ ನಡುವೆ 55 ವರ್ಷಗಳ ಅನಂತರ ಚಿಲ್ಹಟಿ- ಹಲ್ದಿಬಾರಿ ರೈಲು ಸಂಪರ್ಕಕ್ಕೆ ಮರುಚಾಲನೆ ನೀಡಲು ನಿರ್ಧರಿಸಿರುವುದು ವಿಶೇಷ. ಈ ರೈಲ್ವೇ ಜಾಲದ ಮೂಲಕ ಬಾಂಗ್ಲಾದೇಶದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಲದ ನಡುವಿನ ಸಂಪರ್ಕ ಸುಧಾರಿಸಲಿದೆ ಎನ್ನಲಾಗುತ್ತಿದ್ದು, ಆರಂಭದಲ್ಲಿ ಸರಕುಗಳನ್ನು ಸಾಗಿಸಲು ಮಾತ್ರ ಈ ರೈಲ್ವೇ ಲೈನ್ ಬಳಕೆಯಾಗಲಿದೆ. ಮುಂದಿನ ದಿನಗಳಲ್ಲಿ ಎರಡೂ ಬದಿಯಲ್ಲಿ ಅಗತ್ಯ ಮೂಲಸೌಕರ್ಯ ಸುಧಾರಣೆಯ ಅನಂತರ ಪ್ರಯಾಣಿಕರ ರೈಲುಗಳನ್ನು ಓಡಿಸುವ ಯೋಚನೆ ಇದೆ.
ಭಾರತೀಯ ಯೋಧರಿಗೆ ನಮಿಸಿದ ಹಸೀನಾ: ಭಾರತವು 1971ರ ಪಾಕ್ ವಿರುದ್ಧದ ಗೆಲುವಿನ 50ನೇ ಸಂಭ್ರಮಾಚರಣೆಯಲ್ಲಿದ್ದು, ಡಿ.16ರಿಂದ ದೇಶಾದ್ಯಂತ ಸ್ವರ್ಣಿಂ ವಿಜಯದ ವರ್ಷಪೂರ್ತಿ ಆಚರಣೆ ಆರಂಭಿಸಿದೆ. ಈ ಯುದ್ಧದಲ್ಲಿನ ಭಾರತದ ಗೆಲುವು ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ಮಾತನಾಡಿದ ಶೇಖ್ ಹಸೀನಾ, ವಿಜಯದ ತಿಂಗಳಲ್ಲಿ ಭಾರತವನ್ನುದ್ದೇಶಿಸಿ ಮಾತನಾಡಲು ಸಂತೋಷವಾಗುತ್ತಿದೆ. ಭಾರತವು ನಮ್ಮ ನಿಜವಾದ ಮಿತ್ರ. ಬಾಂಗ್ಲಾ ವಿಮೋಚನೆಯಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತುಂಬು ಹೃದಯದಿಂದ ಬೆಂಬಲ ನೀಡಿದ ಭಾರತ ಮತ್ತು ಭಾರತೀಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದಿದ್ದಾರೆ. ಮುಂದಿನ ವರ್ಷ ಬಾಂಗ್ಲಾ ಮಾರ್ಚ್ 26ರಂದು ಸ್ವತಂತ್ರ ರಾಷ್ಟ್ರವಾಗಿ 50ನೇ ವರ್ಷಕ್ಕೆ ಕಾಲಿಡಲಿದೆ. ಈ ಸಂಭ್ರಮಾಚರಣೆಗೆ ಬಾಂಗ್ಲಾ ಸರಕಾರ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದು, ಈ ವಿಷಯವನ್ನೂ ಹಸೀನಾ ಉಲ್ಲೇಖೀಸಿದ್ದಾರೆ.
ಆತ್ಮನಿರ್ಭರ ಪರಿಕಲ್ಪನೆಗೆ ಶ್ಲಾಘನೆ
ಭಾರತದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಹಸೀನಾ, ಬಿಕ್ಕಟ್ಟಿನಿಂದ ದೇಶವಾಸಿಗಳನ್ನು ಹೊರತರಲು ಆರಂಭಿಸಿರುವ ಆತ್ಮನಿರ್ಭರ ಭಾರತ ಯೋಜನೆ ಬಗ್ಗೆಯೂ ಶ್ಲಾ ಸಿದ್ದಾರೆ. ಮೋದಿ ಅವರು ಜಾರಿ ಮಾಡಿರುವ ನೀತಿಗಳಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಭಾರತವು ಮಹತ್ವದ ಪಾತ್ರ ವಹಿಸುವುದು ಖಚಿತ ಎಂದೂ ಹಸೀನಾ ಹೇಳಿದ್ದಾರೆ.