Advertisement

ಮೋದಿಗೆ ಸರಿಸಾಟಿ ನಾಯಕ ಮತ್ತೂಬ್ಬರಿಲ್ಲ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ

10:58 AM Jun 19, 2022 | Team Udayavani |

ಹುಬ್ಬಳ್ಳಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪಕ್ಷ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಮತ್ತೂಬ್ಬರು ಇಲ್ಲ. ಮತ್ತೂಮ್ಮೆ ಮೋದಿಯವರು ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಮಿಷನ್‌ ಮೋದಿ ಅಗೇನ್‌ ಪಿಎಂ, ಡೆಮಾಕ್ರಸಿ ಡೆವಲಪ್‌ಮೆಂಟ್‌ ಟ್ರಸ್ಟ್‌ ಹಾಗೂ ಎಸ್‌.ಎಸ್‌. ಶೆಟ್ಟರ ಫೌಂಡೇಶನ್‌ನಿಂದ ಇಲ್ಲಿನ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ವಿಪಕ್ಷಗಳು ಸಾಕಷ್ಟು ಯತ್ನಿಸುತ್ತಿವೆಯಾದರೂ ಯಶಸ್ಸು ದೊರೆಯುತ್ತಿಲ್ಲ. ರೈತರು ಸೇರಿದಂತೆ ವಿವಿಧ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸೇರುವಂತೆ ಮಾಡಿದ್ದು ಮೋದಿಯವರ ಸರಕಾರ. ದೇಶದ ಅಭಿವೃದ್ಧಿ, ಜನರ ಹಿತ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ್ದರಿಂದ ಜನರು ಮೋದಿಯವರ ನಾಯಕತ್ವ ಮೆಚ್ಚಿಕೊಂಡಿದ್ದಾರೆ. ವಿಪಕ್ಷಗಳು ಎಷ್ಟೇ ಅಪಪ್ರಚಾರ, ಆರೋಪಗಳಲ್ಲಿ ತೊಡಗಿದ್ದರೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ಅಟಲ್‌ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿತ್ತು. ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಕ್ರಾಂತಿ ನಡೆದಿತ್ತು. ಸಾಮಾಜಿಕ ಅಭಿವೃದ್ಧಿ, ರಾಷ್ಟ್ರದ ಪ್ರಗತಿಗೆ ಪೂರಕ ಕಾರ್ಯಗಳನ್ನು ಕೈಗೊಂಡಿದ್ದರೂ ವಾಜಪೇಯಿ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ, ಮನವರಿಕೆ ಮಾಡುವ ಕಾರ್ಯ ಆಗದ್ದರಿಂದ ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳು ಜನರಿಗೆ ಮನವರಿಕೆ ಆಗಿದ್ದರಿಂದಲೇ 2019ರಲ್ಲಿ ಮತ್ತೆ ಅಧಿಕಾರಕ್ಕೆ ಬರುವಂತಾಯಿತು. 2024ರ ಗೆಲುವಿಗೆ ಮೋದಿಯವರ ಎರಡನೇ ಅವಧಿಯ ಅಭಿವೃದ್ಧಿ ಯೋಜನೆಗಳು ಜನರ ಮನೆ-ಮನೆಗಳಿಗೆ ತಲುಪಬೇಕಾಗಿದೆ ಎಂದರು.

ಜನರ ಸಮಸ್ಯೆ-ನೋವುಗಳಿಗೆ ಎಂದೂ ಹೋರಾಟ ಮಾಡದ ಕಾಂಗ್ರೆಸ್‌ನವರು, ನೆಹರು ಕುಟುಂಬದವರನ್ನು ವಿಚಾರಣೆಗೆ ಕರೆಸಿದ್ದಕ್ಕಾಗಿಯೇ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ನಾಚಿಕೆಗೇಡು. ಜನರ ಹಿತಕ್ಕೆ ಒತ್ತು ನೀಡದೆ, ಅಕ್ರಮಗಳಲ್ಲಿ ತೊಡಗಿದ್ದರಿಂದಲೇ ಕಾಂಗ್ರೆಸ್‌ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದೆ ಎಂದರು.

Advertisement

ಮಿಷನ್‌ಮೋದಿ ಅಗೇನ್‌ ಪಿಎಂ ರಾಷ್ಟ್ರೀಯ ಅಧ್ಯಕ್ಷ ರಾಮ ಗೋಪಾಲ ಕಾಕಾ, ಗೋವಿಂದ ಕುಲಕರ್ಣಿ ಮಾತನಾಡಿದರು.

ಮುಖಂಡರಾದ ನಾಗೇಶ ಕುಲಬುರ್ಗಿ, ಡಾ| ಕ್ರಾಂತಿಕಿರಣ, ಡಾ| ಜಿ.ಬಿ. ಸತ್ತೂರ, ಡಾ| ಅಮಿತ್‌ ಸತ್ತೂರ, ವೀರಣ್ಣ ಶೆಟ್ಟರ, ಸಂಕಲ್ಪ ಶೆಟ್ಟರ, ಸಂಜಯ ರಾಂಕಾ, ವಿನಯ ಕುಲಕರ್ಣಿ, ಚಂದ್ರಶೇಖರ ಗೋಕಾಕ, ಡಾ| ಲಿಂಗರಾಜ ಅಂಗಡಿ, ಮಲ್ಲಿಕಾರ್ಜುನ ಸಾವಕಾರ, ಎ.ಬಿ. ಕುರ್ತಕೋಟಿ ಇನ್ನಿತರರು ಇದ್ದರು. ಗಿರಿಧರ ಹಿರೇಮಠ ಸ್ವಾಗತಿಸಿದರು. ಗುರು ಬನ್ನಿಕೊಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next