ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಅನುದಾನ ನೀಡಿದ್ದು, ಜಿಲ್ಲೆಯ ಪ್ರಗತಿಗೆ ಕೇಂದ್ರ ಸರ್ಕಾರದ ಕೊಡುಗೆ ಅಪಾರವಾಗಿದೆ ಎಂದು ಸಂಸದ ಡಾ.ಉಮೇಶ ಜಾಧವ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಪ್ರಧಾನಿಯಾದ ನಂತರ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 210 ಕಿಮೀ ಪಿಎಂಜಿಎಸ್‌ವೈ ರಸ್ತೆಗಳ ಕಾಮಗಾರಿ ಮಂಜೂರಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ಮೆಡಿಕಲ್ ರೆಕಾರ್ಡ್‌ಸ್ ಇನ್ ಡಿಪ್ಲೋಮಾ, ಒಟಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗಿದೆ. ಅಲ್ಲದೇ, ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಒದಗಿಸಲಾಗುತ್ತಿದೆ. ರಕ್ತ ಭಂಡಾರ ಕೇಂದ್ರ ಆರಂಭಿಸಲಾಗಿದೆ. ಈ ಹಿಂದೆ ನೂರು ರೂ.ಗಳಿದ್ದ ಚಿಕಿತ್ಸೆ ವೆಚ್ಚವನ್ನು 25 ರೂ.ಗಳಿಗೆ ಇಳಿಸುವ ಕ್ರಮ ವಹಿಸಲಾಗಿದೆ ಎಂದರು.
ಎರಡನೇ ಅವಧಿಯ ಮೊದಲ ವರ್ಷದಲ್ಲಿ ಜನ್‌ಧನ್‌ದಲ್ಲಿ 2.21 ಲಕ್ಷ ಫಲಾನುಭವಿಗಳು ಇದ್ದಾರೆ. ಮುದ್ರಾ ಯೋಜನೆಯಡಿ 6,387 ಜನರಿಗೆ 65 ಕೋಟಿ. ಸಾಲ ಹಂಚಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1.94 ಲಕ್ಷ ಜನರಿಗೆ ವೃದ್ಧಾಪ್ಯ ಹಾಗೂ 18 ಲಕ್ಷ ಜನರಿಗೆ ಆಹಾರ ಸಾಮಾಗ್ರಿ ವಿತರಿಸಲಾಗಿದೆ. ಬೆಂಬಲ ಬೆಲೆಯಲ್ಲಿ 325 ಕೋ.ರೂ. ವೆಚ್ಚದಲ್ಲಿ ತೊಗರಿ ಖರೀದಿಸಲಾಗಿದೆ ಎಂದು ವಿವರಿಸಿದರು.
ವಿಮಾನ ನಿಲ್ದಾಣ ಆರಂಭಕ್ಕೆ ಕ್ರಮ ವಹಿಸಲಾಯಿತು. ರೈಲ್ವೆ ವಿಭಾಗ ಆರಂಭಿಸಲು ಸಹ ಶ್ರಮಿಸುತ್ತಿದ್ದು, ಅದಷ್ಟು ಶೀಘ್ರದಲ್ಲೇ ಶುರು ಮಾಡುವ ವಿಶ್ವಾಸ ಇದೆ. ಕೋವಿಡ್ ಲಾಕ್‌ಡೌನ್‌ದಿಂದಾಗಿ ಕೊಂಚ ಹಿನ್ನಡೆಯಾಗಿದ್ದು, ಇದಕ್ಕೂ ಪರಿಹಾರ ಸಿಗಲಿದೆ ಎಂದು ಜಾಧವ್ ಹೇಳಿದರು. ದೇಶದಲ್ಲೇ ಮೊದಲ ಕೋವಿಡ್ ಸಾವು ಸಂಭವಿಸಿದ್ದು ಕಲಬುರಗಿಯಲ್ಲೇ ಆದರೂ, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲಾಗದೆ. ತಕ್ಷಣವೇ ಪ್ರಯೋಗಾಲಯದ ವರದಿ ಲಭ್ಯವಾಗಬೇಕೆಂಬ ಉದ್ದೇಶದಿಂದ ಜಿಮ್ಸ್‌ನಲ್ಲಿ ಕೇಂದ್ರ ಸರ್ಕಾರದ ಸಹಾಯದಿಂದ ಸ್ಥಾಪಿಸಲಾಯಿತು. ವಲಸೆ ಕಾರ್ಮಿಕರ ಸಮಸ್ಯೆ ನಮ್ಮಲ್ಲಿ ಅಷ್ಟೆ ಅಲ್ಲ, ಎಲ್ಲೆಡೆ ಉದ್ಭವಿಸಿದೆ ಎಂದು ಪ್ರಶ್ನೆಯೊಂದಕ್ಕೆ ಜಾಧವ್ ಉತ್ತರಿಸಿದರು.
ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮತ್ತು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ, ಬಾಬುರಾವ ಹಾಗರಗುಂಡಗಿ ಇದ್ದರು.