ನವದೆಹಲಿ: ಕೇಂದ್ರ ಸರ್ಕಾರ ಲ್ಯಾಟರಲ್ ಎಂಟ್ರಿ ಮೂಲಕ 45 ಪ್ರಮುಖ ಹುದ್ದೆಗಳ ನೇಮಕಕ್ಕೆ ಮುಂದಾಗಿರುವುದಕ್ಕೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಟಾಪಟಿ ನಡೆದ ಬೆನ್ನಲ್ಲೇ ಲ್ಯಾಟರಲ್ ಎಂಟ್ರಿ ಮೂಲಕದ ನೇಮಕಾತಿ ಜಾಹೀರಾತನ್ನು ರದ್ದುಪಡಿಸಲು ಮಂಗಳವಾರ (ಆ.20) ಕೇಂದ್ರ ಸರ್ಕಾರ ಯುಪಿಎಸ್ ಸಿ(UPSC)ಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಕೇಂದ್ರದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್, ಯುಪಿಎಸ್ ಸಿ ಅಧ್ಯಕ್ಷೆ ಪ್ರೀತಿ ಸುದಾನ್ ಅವರನ್ನು ಭೇಟಿಯಾಗಿ, ಲ್ಯಾಟರಲ್ ಎಂಟ್ರಿ ಕುರಿತ ಜಾಹೀರಾತನ್ನು ರದ್ದುಪಡಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಕೇಂದ್ರ ಸರ್ಕಾರದಲ್ಲಿನ ವಿವಿಧ ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿ ಸಂಬಂಧ ಜಾಹೀರಾತು ನೀಡಿತ್ತು. ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿ, ಯುಪಿಎಸ್ ಸಿ ಪ್ರಕ್ರಿಯೆಯನ್ನು ಟೀಕಿಸಿದ್ದರು. ಆದರೆ ಈ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ತಿರುಗೇಟು ನೀಡಿತ್ತು.
ಏನಿದು ಲ್ಯಾಟರಲ್ ಎಂಟ್ರಿ:
ಐಎಎಸ್ ನಂತಹ ಆಡಳಿತಾತ್ಮಕ ಹುದ್ದೆಗಳಿಗೆ ಲೋಕಸೇವಾ ಆಯೋಗ ಸರ್ಕಾರಿ ಇಲಾಖೆಗಳಲ್ಲಿನ ಮಧ್ಯಮ ಹಾಗೂ ಹಿರಿಯ ಹುದ್ದೆಗಳಿಗಾಗಿ ತನ್ನ ಸಾಂಪ್ರದಾಯಿಕ ಸರ್ಕಾರಿ ಸೇವಾ ಕೇಡರ್ ಹೊರತುಪಡಿಸಿ ಇತರ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಇದನ್ನು ಲ್ಯಾಟರಲ್ ಎಂಟ್ರಿ ಎಂದು ಕರೆಯಲಾಗುತ್ತದೆ.
ಲ್ಯಾಟರಲ್ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ 3ರಿಂದ 5 ವರ್ಷಗಳ ಅವಧಿಯ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಅವರ ಸಾಧನೆ ಮತ್ತು ಸರ್ಕಾರದ ಅಗತ್ಯಗಳಿಗೆ ಅನುಗುಣವಾಗಿ ಅವಧಿ ವಿಸ್ತರಣೆಗೆ ಅರ್ಹರಾಗಿರುತ್ತಾರೆ.