Advertisement

ಭಾಷಾ ವೈವಿಧ್ಯತೆ ಸಂರಕ್ಷಣೆಗೆ ಮೋದಿ ಸರ್ಕಾರ ಬದ್ಧ : ಕೇಂದ್ರ ಸಚಿವ ಸದಾನಂದ ಗೌಡ

06:53 PM Feb 08, 2021 | Team Udayavani |

ನವದೆಹಲಿ:  ಭಾರತದ ಭಾಷಾ ವೈವಿಧ್ಯತೆಯ ಸಂರಕ್ಷಣೆ ಮತ್ತು ಬೆಳವಣೆಗೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ  ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.

Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಂಘಟಿಸಿರುವ “ಭಾಷಾ ಭಾರತ ಬಲಿಷ್ಠ ಭಾರತ” ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ಭಾರತೀಯ ಭಾಷೆಗಳ ದುಂಡುಮೇಜಿನ ಪರಿಷತ್ತನ್ನು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಭಾಷಾ ವೈವಿಧ್ಯತೆಯನ್ನು ಗೌರವಿಸುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ನೀಟ್‌ (NEET) ಜೆಇಇ (JEE) ಸೇರಿದಂತೆ ರಾಷ್ಟ್ರ ಮಟ್ಟದ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಮ್ಮ ಮಾತೃಭಾಷೆಯಲ್ಲಿಯೇ ಬರೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್ ನಲ್ಲಿ ಭಾರತೀಯ ಭಾಷಾ ಅನುವಾದ ಯೋಜನೆಗಳಿಗಾಗಿ ಅನುದಾನ ನೀಡಲಾಗಿದೆ. ವೈದ್ಯಕೀಯ ಶಾಸ್ತ್ರ ಸೇರಿದಂತೆ ವಿಜ್ಞಾನ ಸಂಬಂಧಿತ ವಿಷಯಗಳು ಎಲ್ಲ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಿಸಲು ಕೇಂದ್ರವು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಇನ್ ಲೈನ್ ಸ್ಕೇಟಿಂಗ್ ನಲ್ಲಿ ಹತ್ತು ವರ್ಷದ ಪೋರಿಯ ಗಿನ್ನಿಸ್ ದಾಖಲೆ

Advertisement

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ನಮ್ಮದು ಬಹುಭಾಷೆ, ಬಹುಸಂಸ್ಕೃತಿಯ ಸಮ್ಮಿಳನವಾಗಿದೆ. ಪ್ರತಿಯೊಂದು ಭಾಷೆಗೂ ಅದರದ್ದೇ  ಆದ ಸೊಗಡು ಇದೆ. ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ವೈಶಿಷ್ಟವಿದೆ. ಆಡಳಿತವು ಆಯಾ ಭಾಷೆಯಲ್ಲಿಯೇ ಇದ್ದರೆ ಸ್ಥಳೀಯರಿಗೆ ಅನುಕೂಲ. 1956ರಲ್ಲಿ ಭಾಷಾ ಆಧಾರಿತವಾಗಿ ರಾಜ್ಯಗಳ ವಿಂಗಡಣೆ ಮಾಡಿದ್ದು ಇದೇ ಕಾರಣದಿಂದ ಎಂದು ಅವರು ಹೇಳಿದರು.

ಭಾರತೀಯ ಭಾಷೆಗಳ ಮಧ್ಯೆ ಹೆಚ್ಚೆಚ್ಚು ಸಮನ್ವಯತೆ ಸಾಧಿಸಲು ಹಾಗೂ ಭಾರತೀಯರ ಮಾತೃಭಾಷೆಗಳ ಮಹತ್ವವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿರುವುದು ಶ್ಲಾಘನೀಯವಾಗಿದೆ. ಇದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಟಿ ಎಸ್‌ ನಾಗಾಭರಣ ಮತ್ತು ಅವರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ತಿಳಿಸುತ್ತೇನೆ ಎಂದು ಸದಾನಂದ ಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next