Advertisement
ಬ್ಯಾಂಕುಗಳ ಮಹಾವಿಲೀನಕಳೆದ ವರ್ಷ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಿದ್ದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ 10 ಬ್ಯಾಂಕುಗಳ ವಿಲೀನ ನಿರ್ಧಾರ ಪ್ರಕಟಿಸಿದೆ. ತನ್ಮೂಲಕ ದೇಶದಲ್ಲಿದ್ದ ಒಟ್ಟು 27 ರಾಷ್ಟ್ರೀಕೃತ ಬ್ಯಾಂಕ್‌ಗಳ ಸಂಖ್ಯೆ 12ಕ್ಕೆ ಇಳಿದಂತಾಗಿದೆ. ದೇಶದ ವಿತ್ತೀಯ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಿದ್ದ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹುಟ್ಟಿದ ಬ್ಯಾಂಕ್‌ಗಳು ಸೇರಿದಂತೆ ಹಲವು ಬ್ಯಾಂಕ್‌ಗಳ ಮಹಾವಿಲೀನವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮೆಗಾ ವಿಲೀನ ಅಥವಾ ಮಹಾ ವಿಲೀನವೆಂದು ಕರೆಸಿಕೊಳ್ಳುತ್ತಿರುವ ಬ್ಯಾಂಕುಗಳ ಈ ವಿಲೀನ ಪ್ರಕ್ರಿಯೆ ಬಗ್ಗೆ ದೇಶದೆಲ್ಲೆಡೆ ಚರ್ಚೆ ಆರಂಭಗೊಂಡಿದೆ. ಬ್ಯಾಂಕ್‌ಗಳ ಗಾತ್ರವನ್ನು ಹಿಗ್ಗಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ ಜಾಗತಿಕ ಬ್ಯಾಂಕ್‌ಗಳಿಗೆ ಸರಿಸಾಟಿಯಾಗುವಂತೆ ಮಾಡುವುದು ವಿಲೀನದ ಉದ್ದೇಶ ಎಂದು ಸರ್ಕಾರ ಹೇಳುತ್ತಿದ್ದರೂ, ಅನುತ್ಪಾದಕ ಸಾಲದ ಸುಳಿಯಿಂದ ಬ್ಯಾಂಕ್‌ಗಳನ್ನು ಪಾರು ಮಾಡಲು ಸರ್ಕಾರ ಈ ಹೆಜ್ಜೆಯಿಟ್ಟಿದೆ ಎನ್ನುವುದು ವಿತ್ತ ತಜ್ಞರ ಅಭಿಪ್ರಾಯ.
ಆರ್ಥಿಕ ಹಿಂಜರಿತವನ್ನು ತಡೆಯಲು ಕೇಂದ್ರ ಸರಕಾರ ಆರ್‌ಬಿಐ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ. ರೂಪಾಯಿ ಪಡೆಯಲು ಮುಂದಾದದ್ದು ಭಾರೀ ಚರ್ಚೆಗೆ ಒಳಗಾದ ವಿಷಯ. ಸರಕಾರ ಆರ್‌ಬಿಐ ಮೀಸಲು ನಿಧಿ ಯಿಂದ 1.76 ಲಕ್ಷ ಕೋಟಿ ರೂ. ಪಡೆಯುತ್ತಿದೆ ಎನ್ನುವುದು ನಿಜ. ಆದರೆ ಇದು ಪೂರ್ಣಚಿತ್ರಣವಲ್ಲ. 1.76 ಲಕ್ಷ ಕೋ. ರೂ.ಯಲ್ಲಿ 1.23 ಲಕ್ಷ ಕೋ. ರೂ. ಆರ್‌ಬಿಐ ವಾರ್ಷಿಕವಾಗಿ ಸರಕಾರಕ್ಕೆ ಪಾವತಿ ಮಾಡಬೇಕಿರುವ ಡಿವಿಡೆಂಡ್. ಉಳಿದ 52.6 ಸಾವಿರ ಕೋಟಿ ಏಕಕಾಲಕ್ಕೆ ಪಾವತಿಯಾಗುವ ಮೊತ್ತ. ಇದರ ಹೊರತಾಗಿಯೂ ಇದು ಹಿಂದಿನ ವರ್ಷಗಳ ಪಾವತಿಗಿಂತ ದೊಡ್ಡ ಮೊತ್ತ. ಆರ್‌ಬಿಐಯ ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದ ಸಮಿತಿ ಮಾಡಿದ ಶಿಫಾರಸಿನಂತೆ ಸರಕಾರಕ್ಕೆ 1.76 ಲಕ್ಷ ಕೋ. ರೂ. ವರ್ಗಾವಣೆ ಮಾಡಲು ಆರ್‌ಬಿಐ ನಿರ್ಧರಿಸಿದೆ. ಆರ್ಥಿಕ ತಜ್ಞರಲ್ಲೂ ಸರ್ಕಾರ ಆರ್‌ಬಿಐ ಮೀಸಲು ನಿಧಿಯಿಂದ ಇಷ್ಟೊಂದು ಭಾರೀ ಮೊತ್ತವನ್ನು ಪಡೆಯುತ್ತಿರು ವುದಕ್ಕೆ ಒಮ್ಮತವಿಲ್ಲ. ಇದು ತಾತ್ಕಾಲಿಕ ಪರಿಹಾರ ಎನ್ನುವುದು ಅವರ ವಾದ.
ತ್ರಿವಳಿ ತಲಾಖ್‌ಗೆ ತಿಲಾಂಜಲಿ
ದೇಶಾದ್ಯಂತ ಬಹು ಚರ್ಚೆಗೆ ಗ್ರಾಸವಾಗಿದ್ದ, ಏಕಕಾಲಕ್ಕೆ 3 ಬಾರಿ ತಲಾಖ್ ಹೇಳುವಂಥ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದ ಹಾದಿಯಲ್ಲಿ ಮಹತ್ತರ ಹೆಜ್ಜೆಯಿಟ್ಟಿತು. ವಿವಾಹಿತ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡುವ ಹೊಸ ಕಾನೂನಿನಲ್ಲಿ, ತನ್ನ ಪತ್ನಿಗೆ ಒಂದೇ ಬಾರಿಗೆ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಹಿಂದೆ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ರಿವಳಿ ತಲಾಖ್ ಪದ್ಧತಿಗೆ ಸಮ್ಮತಿ ಇತ್ತು. ಇದರನ್ವಯ ಪತಿಯು ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ಕೊಡಬಹುದಾಗಿತ್ತು. ಆದರೆ ಪುರುಷರು ಇದನ್ನು ದುರ್ಬಳಕೆ ಮಾಡುವುದರಿಂದ ಮಹಿಳೆಯರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿತ್ತು. ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿ ಬಳಿಕ ದೇಶಾದ್ಯಂತ ಹಲವೆಡೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ ಮೊದಲ ಎಫ್ಐಆರ್ ಕೂಡ ಇತ್ತೀಚೆಗಷ್ಟೇ ದಾಖಲಾಗಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತ್ರಿವಳಿ ತಲಾಖ್ ನಿಷೇಧವನ್ನು ವಿರೋಧಿಸಿ ಜನರ ಕೆಂಗಣ್ಣಿಗೆ ಗುರಿಯಾದವು.
Related Articles
Advertisement
ಫಿಟ್ ಆಗು ಇಂಡಿಯಾ
ಮೋದಿ ಸರ್ಕಾರದ ಎರಡನೇ ಅವಧಿಯ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ‘ಫಿಟ್ ಇಂಡಿಯಾ’ ಕೂಡ ಒಂದು. ದೇಶವನ್ನು ಸ್ವಸ್ಥ-ಸದೃಢಗೊಳಿಸಬೇಕೆಂಬ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಈ ಆಂದೋಲನವು ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು(ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ರ ಜನ್ಮದಿನದಂದು) ಚಾಲನೆ ಪಡೆಯಿತು. ಸ್ವಚ್ಛ ಭಾರತ ಯೋಜನೆಯ ರೀತಿಯಲ್ಲಿಯೇ ಭಾರತದಾದ್ಯಂತ ಈ ಆಂದೋಲನವನ್ನು ವೇಗವಾಗಿ ವಿಸ್ತರಿಸಬೇಕು ಎಂಬ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದ್ದು, ಕ್ರೀಡಾಪಟುಗಳು, ಸಿನೆಮಾ ತಾರೆಯರು ಸೇರಿದಂತೆ ಹಲವು ಕ್ಷೇತ್ರಗಳ ಘಟಾನುಘಟಿಗಳು ಈ ಆಂದೋಲನವನ್ನು ಮುನ್ನಡೆಸಲಿದ್ದಾರೆ. ದೇಶದ ಶೇ. 64 ಭಾರತೀಯರು ವ್ಯಾಯಾಮ ಮಾಡುವುದೇ ಇಲ್ಲ ಎಂಬುದಾಗಿ ಇತ್ತೀಚೆಗೆ ಬಂದ ವರದಿಯನ್ನು ಆಧರಿಸಿ ಹೇಳುವುದಾದರೆ ಇಂಥದ್ದೊಂದು ಕಾರ್ಯಕ್ರಮ ಭಾರತಕ್ಕೆ ತೀರಾ ಅಗತ್ಯವಾಗಿದೆ ಎನ್ನುತ್ತಾರೆ ಫಿಟ್ನೆಸ್ ಪರಿಣತರು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ವಿದಾಯ
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಮತ್ತು 35(ಎ) ಪರಿಚ್ಛೇದದಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 72ವರ್ಷಗಳ ನಂತರ ರದ್ದು ಮಾಡುವ ಮೂಲಕ ಕೇಂದ್ರ ಸರ್ಕಾರ ಹೊಸ ಇತಿಹಾಸ ಬರೆಯಿತು. ಜತೆಗೆ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಸ್ಥಾಪನೆ ಮಾಡಿದೆ. ದೀರ್ಘ ಕಾಲದಿಂದ ರಾಜಕೀಯವಾಗಿ ವಾದ ಪ್ರತಿವಾದಕ್ಕೆ ಕಾರಣವಾಗಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡುವ ವಿಚಾರವನ್ನು ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ ತನ್ನ ಮಾತನ್ನು ಉಳಿಸಿಕೊಂಡಿತು. ನವ ನಿಯಮದ ಅನ್ವಯ ಜಮ್ಮು ಮತ್ತು ಕಾಶ್ಮೀರ, ದೆಹಲಿ ಹಾಗೂ ಪುದುಚೇರಿ ರೀತಿ ಆಡಳಿತ ನಿರ್ವಹಣೆ ಮಾಡಿದರೆ, ಲಡಾಖ್‌ನಲ್ಲಿ ಚಂಡೀಗಢದ ರೀತಿ ಆಡಳಿತ ವ್ಯವಸ್ಥೆ ಜಾರಿಗೆ ಬಂದಿದೆ. ಜು.27ರಿಂದಲೇ ಜಮ್ಮು ಕಾಶ್ಮೀರದಲ್ಲಿ ಏನೋ ಒಂದು ಪ್ರಮುಖ ಘಟನೆಯಾಗಲಿದೆ ಎಂಬ ಸುಳಿವು ಸಿಕ್ಕಿತ್ತಾದರೂ, ಏನಾಗಲಿದೆ ಎಂಬ ಖಚಿತ ಮಾಹಿತಿ ಯಾರಿಗೂ ಸಿಕ್ಕಿರಲಿಲ್ಲ. ಪೂರ್ವ ಸಿದ್ಧತೆಯ ಅಂಗವಾಗಿ ಕೇಂದ್ರ ಸರ್ಕಾರ 38 ಸಾವಿರ ಹೆಚ್ಚುವರಿ ಸೈನಿಕರನ್ನು ಕಣಿವೆ ರಾಜ್ಯಕ್ಕೆ ಕಳುಹಿಸಿತ್ತು. ಈಗ ಆ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.16 ರಷ್ಟು ಮೀಸಲಾತಿ, ಹೊರಗಿನ ರಾಜ್ಯದವರೂ ಆಸ್ತಿ ಖರೀದಿಸಬಹುದು ಎಂಬ ನಿಯಮ ಜಾರಿಗೆ ಬಂದಿದೆ. ಅಲ್ಲದೆ ಮಾಹಿತಿ ಹಕ್ಕು ಕಾಯ್ದೆ, ಭಾರತೀಯ ದಂಡ ಸಂಹಿತೆ ಅನ್ವಯವಾಗಿದೆ. ಅಲ್ಲದೇ ಹೊರಗಿನ ರಾಜ್ಯದವರಿಗೂ ಸರ್ಕಾರಿ ಉದ್ಯೋಗ ಸಿಗುವಂತಾಗಿದ್ದು, ಈಗಾಗಲೇ ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಪ್ಲಾಸ್ಟಿಕ್ ಮೇಲೆ ಸಮರ
ಒಂದು ಬಾರಿಗೆ ಬಳಸಿ ಎಸೆಯುವ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿ ಸುವ ಕುರಿತು ದೇಶದಲ್ಲಿ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಾ ಬಂದಿದೆಯಾದರೂ, ಈ ನಿಟ್ಟಿನಲ್ಲಿ ಸಕಾರಾತ್ಮಕ ಸಂದೇಶ ಸಿಕ್ಕದ್ದು ಪ್ರಧಾನಿಯವರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ. ಸ್ವಚ್ಛ ಭಾರತ ಅಭಿಯಾನದಂತೆ ಪ್ಲಾಸ್ಟಿಕ್ ನಿಷೇಧವನ್ನೂ ಒಂದು ಆಂದೋಲನವಾಗಿ ಬದಲಾಯಿಸಬೇಕೆಂದು ಮೋದಿ ಹೇಳಿದ್ದಾರೆ. ‘ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ’ ಘೋಷಣೆಯಡಿ 2022ರೊಳಗೆ ಯೂಸ್ ಅ್ಯಂಡ್ ತ್ರೋ ಪ್ಲಾಸ್ಟಿಕ್‌ನ್ನು ಸಂಪೂರ್ಣ ನಿಷೇಧಿಸುವ ಪ್ರತಿಜ್ಞೆ ಮಾಡಿದೆ ಕೇಂದ್ರ ಸರ್ಕಾರ. ಈ ಬಾರಿ ಗಾಂಧಿ ಜಯಂತಿ ಯಂದು ಪ್ಲಾಸ್ಟಿಕ್ ನಿಷೇಧದ ಆದೇಶ ಹೊರಬೀಳಬಹುದು.
ಉಗ್ರ ನಿಗ್ರಹಕ್ಕೆ ಹೊಸ ಅಸ್ತ್ರ
ಭಯೋತ್ಪಾದನೆ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಜರುಗಿಸಲು ಅವಕಾಶ ಕಲ್ಪಿಸಿರುವ ಅಕ್ರಮ ಚಟುವಟಿಕೆಗಳ ತಡೆ ಕಾಯೆಗೆ ಕೇಂದ್ರ ಸರ್ಕಾರ ಮಹತ್ವದ ತಿದ್ದುಪಡಿ ತಂದಿದೆ. 1967ರ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಶಂಕಿತ ವ್ಯಕ್ತಿಯನ್ನೂಭಯೋತ್ಪಾದಕನೆಂದು ಘೋಷಿಸುವ ಮಸೂದೆಯಲ್ಲಿನ ಅಂಶವು ಉಗ್ರವಾದವನ್ನು ಬೇರು ಸಹಿತ ಕಿತ್ತೂಗೆಯಲು ಅಗತ್ಯವಾಗಿದೆ ಎಂದು ಕೇಂದ್ರ ವಾದಿಸುತ್ತಿದ್ದರೆ, ಪ್ರತಿಪಕ್ಷಗಳು ಈ ಅಂಶವನ್ನು ವಿರೋಧಿಸುತ್ತಿವೆ. ಈವರೆಗೆ ಸಂಘಟನೆಗಳನ್ನಷ್ಟೇ ‘ಉಗ್ರ’ ಎಂದು ಘೋಷಿಸಲು ಅವಕಾಶವಿತ್ತು. ಈಗ ವ್ಯಕ್ತಿಯನ್ನು ಉಗ್ರ ಎಂದು ಘೋಷಿಸಬಹುದಾಗಿದೆ. ಜೈಶ್ ಎ ಮೊಹಮದ್ ಉಗ್ರ ಮಸೂದ್ ಅಜರ್, ಲಷ್ಕರ್ ಎ ತೊಯ್ಬಾ ಉಗ್ರ ಹಫೀಜ್ ಸಯೀದ್, ಮುಂಬೈ ಉಗ್ರ ದಾಳಿ ಸಂಚುಕೋರ ಝಕಿ ಉರ್ ರೆಹಮಾನ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ‘ಉಗ್ರರು’ ಎಂದು ಘೋಷಿಸಲಾಗಿದೆ.
ಮೋಟಾರು ವಾಹನ ತಿದ್ದುಪಡಿ ಕಾಯ್ದೆ
ದೇಶದ ಒಟ್ಟಾರೆ ಸಂಚಾರ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ‘ಮೋಟಾರು ವಾಹನ ತಿದ್ದುಪಡಿ ಕಾಯ್ದೆ’ ಯನ್ನು ಜಾರಿಗೆ ತಂದಿದೆ. 1988ರ ಮೋಟಾರು ವಾಹನ ಕಾಯ್ದೆ ಅನೇಕ ನ್ಯೂನತೆಗಳಿಂದ ಕೂಡಿತ್ತು. ಅದರಲ್ಲಿನ ಲೋಪಗಳೇ ಸಂಚಾರ ವ್ಯವಸ್ಥೆಯ ಅಧೋಗತಿಗೆ ಕಾರಣ ಎಂದು ಪರಿಣತರು ವಾದಿಸುತ್ತಲೇ ಬಂದಿದ್ದರು. ಈ ನಿಟ್ಟಿನಲ್ಲಿ ತಿದ್ದುಪಡಿ ಕಾಯ್ದೆಯು ಹಲವು ಲೋಪಗಳನ್ನು ಸರಿಪಡಿಸಿಕೊಂಡಿದೆಯಾದರೂ, ಸಾರಿಗೆ ನಿಯಮವನ್ನು ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ತೆರುವಂಥ ನಿಯಮಗಳು ಮಾತ್ರ ತೀವ್ರ ವಿವಾದಕ್ಕೆ -ಟೀಕೆಗೆ ಒಳಗಾಗಿವೆ.