ಕಲಬುರಗಿ: ದೇಶದಲ್ಲಿ ಇದುವರೆಗೂ ಯಾವ ಪ್ರಧಾನಿಯೂ ಸಿನಿಮಾ ಪ್ರಮೋಟ್ ಮಾಡಿದ ಉದಾಹರಣೆಯಿಲ್ಲ. ದಿ ಕಾಶ್ಮೀರ್ ಫೈಲ್ಸ್ ಫಿಲಂನ್ನು ಬಿಜೆಪಿಯವರು ಥೇಟರ್ ಬುಕ್ ಮಾಡಿ ಜನರಿಗೆ ತೋರಿಸುವ ಮೂಲಕ “ದೇಶದಲ್ಲಿ ಬೆಂಕಿ ಹಚ್ಚುವ’ ಮತ್ತು ಜನರ ವಿಶೇಷವಾಗಿ ಯುವಕರ ಮನಸ್ಸಿನಲ್ಲಿ “ವಿಷ ಬೀಜ ಬಿತ್ತುವ’ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿರುವ ಅವರು ಶುಕ್ರವಾರ ಪತ್ರಕರ್ತರೊಂದಿಗೆ ಮಾತ ನಾಡಿ, ಜನರನ್ನು ತಾವೇ ಕರೆ ತಂದು ಸಿನಿಮಾ ತೋರಿಸಿ, ಬಳಿಕ ಒಂದು ಸಮುದಾಯದವರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೋಮು ಸೌಹಾರ್ದತೆ ಹಾಳು ಮಾಡುತ್ತಿದ್ದಾರೆ. ಜನರ ನಡುವೆ ಜಗಳ ಹಚ್ಚುವ ಕುತಂತ್ರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರ ಚೆನ್ನಾಗಿದ್ದರೆ ಜನರು ನೋಡ್ತಾರೆ. ಆದರೆ, ಪ್ರಧಾನಿಗಳೇ ಖುದ್ದಾಗಿ ಪ್ರಮೋಟ್ ಮಾಡೋದನ್ನು ನೋಡಿದ್ದೀರಾ?, ಕೇಳಿದ್ದಿರಾ ಎಂದು ಪ್ರಶ್ನಿಸಿದರು.
ಅವರೇನು ಪ್ರಧಾನಿಗಳ್ಳೋ ಅಥವಾ ಸಿನಿಮಾ ನಟರೋ ಎಂದು ಕಿಚಾಯಿಸಿದರು. ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ಅದನ್ನು ತೋರಿಸಿ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಜನರು ತಾವಾಗಿಯೇ ನೋಡಿದರೆ ಯಾರದ್ದೇ ಅಭ್ಯಂತರವಿಲ್ಲ. ಆದ್ರೆ ಬಿಜೆಪಿಯವರು ತಮ್ಮ ಪಕ್ಷದ ಮೀಟಿಂಗ್ ನಲ್ಲಿ ಪ್ರಮೋಟ್ ಮಾಡುತ್ತಿದ್ದಾರೆ. ಅವರೇ ಟಿಕೇಟ್ ಬುಕ್ ಮಾಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಬೆಂಕಿ ಹಚ್ಚುವುದು, ದೇಶ ವಿಭಜನೆ ಮಾಡುವ ಮನಸ್ಸುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಖರ್ಗೆ ವ್ಯಾಖ್ಯಾನಿಸಿದರು.
ದೇಶಕ್ಕಾಗಿ ಬಲಿದಾನ ಆದವರ ಕುರಿತು ಚಿತ್ರ ತಗೆದು ತೋರಿಸಲಿ. ಆ ಕೆಲಸ ಮಾಡಬೇಕೆಂದರೆ ಬಿಜೆಪಿಯವರು ದೇಶಕ್ಕಾಗಿ, ಸ್ವಾತಂತ್ರಕ್ಕೆ ಯಾರೂ ಬಲಿದಾನವಾಗಿಲ್ಲ. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಶ್ಮೀರಿ ಪಂಡಿತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲಿ, ಅವರಿಗೆ ನ್ಯಾಯ ಕೊಡಿಸಲಿ. ಸರ್ಕಾರಿ ಸವಲತ್ತು ಗಳನ್ನು ನೀಡುವ ಕೆಲಸ ಮಾಡುವುದನ್ನು ಬಿಟ್ಟು ಬಿಜೆಪಿಯವರು ಸಿನಿಮಾ ಮೂಲಕ ಯುವ ಸಮುದಾಯದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಲೋಕಸಭೆಯ ಚುನಾವಣೆವರೆಗೂ ಇಂತಹ ಇನ್ನೂ ಹಲವಾರು ಚಿತ್ರಗಳು ಬರುತ್ತವೆ. ಆ ತೆರನಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ಲಾನ್ ಮಾಡುತ್ತಿದೆ ಎಂದು ಹೇಳಿದರು.
ಇಷ್ಟಕ್ಕೂ ದಿ ಕಾಶ್ಮೀರ್ ಫೈಲ್ ಸಿನಿಮಾ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಬಿಜೆಪಿ ಜತೆಗಿದ್ದವರು. ಕೇಂದ್ರ ಸರ್ಕಾರದ ಸಾಂಸ್ಕೃತಿಕ ವಿಭಾಗದಲ್ಲಿ ನಾಮಕರಣಗೊಂಡಿದ್ದಾರೆ. ಇನ್ನೂ ನಟ ಅನುಪಮ ಖೇರ್ ಅವರ ಪತ್ನಿ ಯಾರು? ಅವರು ಯಾವ ಪಕ್ಷದಲ್ಲಿದ್ದಾರೆ ಯೋಚಿಸಿ. ಬಿಜೆಪಿ ಜತೆಗಿದ್ದವರೆ ಸೇರಿಕೊಂಡು ಈ ಫಿಲಂ ಮಾಡಿದ್ದಾರೆ. 2024ರ ವರೆಗೂ ಇನ್ನೂ ಇಂತಹ ಭಾವನೆ ಕೆರಳಿಸುವ ಸಿನಿಮಾಗಳು ಬರುತ್ತಲೇ ಇರುತ್ತವೆ. ಪ್ರಧಾನಿ ನರೇಂದ್ರ ಮೋದಿ ಹಿಂಬಾಲಕರು ಜನರಿಗೆ ತೋರಿಸಿ ವಿಷಬೀಜ ಬಿತ್ತುತ್ತಲೇ ಇರುತ್ತಾರೆ.
-ಡಾ| ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ