Advertisement

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

08:33 PM Apr 29, 2024 | Team Udayavani |

ಬಾಗಲಕೋಟೆ: ‘ ಹಿಂಬದಿಯಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ.ಪಾಕಿಸ್ಥಾನದ ಬಾಲಾಕೋಟ್‌ನಲ್ಲಿನ ಉಗ್ರರ ಶಿಬಿರದ ಮೇಲೆ ನಡೆದ ವೈಮಾನಿಕ ದಾಳಿಯ ಬಗ್ಗೆ ಮೊದಲೇ ಪಾಕಿಸ್ಥಾನದ ಅಧಿಕಾರಿಗಳಿಗೆ ತಿಳಿಸಲಾಗಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಬಾಗಲಕೋಟೆಯಲ್ಲಿ ಸೋಮವಾರ ನಡೆದ ವಿಜಯ ಸಂಕಲ್ಪ ಸಮಾವೇಶ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ”ವೈಮಾನಿಕ ದಾಳಿಯ ಬಗ್ಗೆ ಮಾಧ್ಯಮಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ನಾನು ಸೇನಾಪಡೆಗಳನ್ನು ಕೇಳಿದ್ದೆ, ಆದರೆ ಅದಕ್ಕೂ ಮೊದಲು ನಾನು ಫೋನ್ ಮೂಲಕ ಪಾಕಿಸ್ಥಾನಿ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದೆ ಆದರೆ ಅವರು ಸ್ವೀಕರಿಸಲಿಲ್ಲ. ಆದ್ದರಿಂದ ನಾನು ಸೇನಾಪಡೆಗಳನ್ನು ಕಾಯಲು ಕೇಳಿದೆ, ಪಾಕಿಸ್ಥಾನದ ಅಧಿಕಾರಿಗಳಿಗೆ ತಿಳಿಸಿದ ನಂತರ, ನಾವು ರಾತ್ರಿ ನಡೆದ ವೈಮಾನಿಕ ದಾಳಿಯ ಬಗ್ಗೆ ಜಗತ್ತಿಗೆ ಬಹಿರಂಗಪಡಿಸಿದ್ದೇವೆ, ವಿಷಯಗಳನ್ನು ಮರೆಮಾಚುವುದರಲ್ಲಿ ಅಥವಾ ಹಿಂಬದಿಯಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದರು.

‘ ಚುನಾವಣೆಯಲ್ಲಿ ಸೋತವರು ಮತ್ತು ಸೋಲಬಹುದು ಎಂದು ಯೋಚಿಸುತ್ತಿರುವ ಜನರು ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ದುರುಪಯೋಗಪಡಿಸಿಕೊಂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಧ್ವನಿಯಲ್ಲಿ ತಪ್ಪು ವಿಷಯಗಳನ್ನು ಹಾಕಿದ್ದಾರೆ, ಇದು ದೊಡ್ಡ ಬೆದರಿಕೆಯನ್ನು ಸೃಷ್ಟಿಸುತ್ತಿದೆ. ಇಂತಹ ವಿಡಿಯೋಗಳು ಕಂಡುಬಂದಲ್ಲಿ ಪೊಲೀಸರಿಗೆ ಅಥವಾ ಬಿಜೆಪಿ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

“ನಿಮ್ಮ ಮತವೇ ಮೋದಿಯನ್ನು ಬಲಪಡಿಸಿ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಭಾರತವನ್ನು ಉತ್ಪಾದನಾ ಕೇಂದ್ರ ಮತ್ತು ಕೌಶಲ್ಯ ಕೇಂದ್ರವನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದೆ. ಈ ನಿರ್ಣಯಗಳನ್ನು ರಜಾದಿನಗಳನ್ನು ಆನಂದಿಸುವವರಿಂದ ಈಡೇರಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ಟೀಕೆಗಳಿಗೆ ತಿರುಗೇಟು ನೀಡಿದರು.

2019 ಫೆಬ್ರವರಿ 26 ರಂದು ಪಾಕಿಸ್ಥಾನದಲ್ಲಿ ಬಾಲಾಕೋಟ್ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿಗಳನ್ನು ನಡೆಸಿ ಹಲವು ಉಗ್ರರನ್ನು ಸದೆಬಡಿದಿತ್ತು. 2019 ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಅರೆಸೇನಾ ಸಿಬಂದಿ ಮೇಲೆ ನಡೆದ ಭೀಕರ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next