Advertisement

ರಾಜ್ಯದಲ್ಲಿ BJP ಅಲೆ ಸೃಷ್ಟಿಸಿದ ಮೋದಿ

12:23 AM May 08, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಗಟ್ಟಿಯಾಗಿ ನಿಂತು ಬಿಜೆಪಿ ಪರ ಅಲೆ ಮೂಡಿಸುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಕಾರ್ಯ ಭಾನುವಾರ ಮುಕ್ತಾಯಗೊಂಡಿದೆ. ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ರೋಡ್‌ ಶೋ ಸೇರಿದಂತೆ ಒಟ್ಟು 27 ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಿದ್ದಾರೆ.

Advertisement

ಒಟ್ಟು 21ಸಭೆ ಹಾಗೂ 6 ರೋಡ್‌ ಶೋದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಎ. 29ರಂದು ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಮೊದಲ ಕಾರ್ಯಕ್ರಮ ಆರಂಭವಾಗುವುದರೊಂದಿಗೆ ಕರ್ನಾಟಕದಲ್ಲಿ ಮೋದಿ ಹವಾ ಪ್ರಾರಂಭಗೊಂಡಿತು. ಇದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಬಿಜೆಪಿ ಪರ ಕಳೆದ ಹದಿನೈದು ದಿನಗಳಿಂದ ಭರ್ಜರಿ ಪ್ರಚಾರವನ್ನೇ ನಡೆಸಿದ್ದಾರೆ.

ಭರ್ಜರಿ ರೋಡ್‌ ಶೋ
ಹರಿದಬಂದ ಜನಸಾಗರ, ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಕಾದುನಿಂತಿದ್ದ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ರವಿವಾರವೂ ಭರ್ಜರಿ ರೋಡ್‌ ಶೋ ನಡೆಸಿದ್ದು. ರಾಜಧಾನಿ ಬೆಂಗಳೂರಿನಲ್ಲಿ ಕೇಸರಿ ಘರ್ಜನೆ ಮುಂದುವರಿದಿದೆ.

ಬೆಳಗ್ಗೆ 10.20ಕ್ಕೆ ನ್ಯೂತಿಪ್ಪಸಂದ್ರ ಬೆಮೆಲ್‌ ಗೇಟ್‌ ಬಳಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭಗೊಂಡ ಮೋದಿ ರೋಡ್‌ ಶೋ ಟ್ರಿನಿಟಿ ವೃತ್ತದ ಬಳಿ ಅಂತ್ಯಗೊಂಡಿತು. ಒಟ್ಟು 6.1 ಕಿ.ಮೀ. ರೋಡ್‌ ಶೋ ನಡೆಸಲಾಯಿತು. ಸಿ.ವಿ.ರಾಮನ್‌ನಗರ, ಮಹದೇವಪುರ, ಕೆ.ಆರ್‌.ಪುರ, ಶಿವಾಜಿನಗರ, ಶಾಂತಿನಗರ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮೋದಿ ಅವರು ರೋಡ್‌ ಶೋ ನಡೆಸುವ ಮೂಲಕ ಬಿಜೆಪಿಗೆ ಪೂರಕವಾದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಸಿದರು.
ಬಿಳಿ ಕುರ್ತಾ, ಕೆಂಪು ಬಣ್ಣದ ಶಾಲು ಹಾಕಿ ಜನರತ್ತ ಕೈ ಬೀಸುತ್ತಾ, ಕೈಮುಗಿಯುತ್ತಾ ತೆರೆದ ವಾಹನದಲ್ಲಿ ಪ್ರಧಾನಿ ನರೇಂದ್ರಮೋದಿ ಸಾಗಿದರು. ಸಂಸದ ಪಿ.ಸಿ. ಮೋಹನ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಈ ಸಂದರ್ಭದಲ್ಲಿ ಸಾಥ್‌ ನೀಡಿದರು.

ಮಾರ್ಗ ಮಧ್ಯೆ ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ| ಶಂಕನಾಗ್‌ ಪ್ರತಿಮೆಗೆ ವಾಹನದಲ್ಲಿದ್ದುಕೊಂಡೇ ಮೋದಿ ಪುಷ್ಪಾರ್ಚನೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಮೇಲೆ ಬಿಜೆಪಿ ಕಾರ್ಯಕರ್ತರು ಹೂಮಳೆ ಸುರಿಸಿದ್ದರಿಂದ ರಸ್ತೆ ಕೇಸರಿಮಯವಾಗಿತ್ತು. ಮೋದಿ ಅಭಿಮಾನಿಗಳು ರಸ್ತೆಯಲ್ಲಿ ಕಮಲದ ರಂಗೋಲಿ ಬಿಡಿಸಿ ಸ್ವಾಗತಿಸಿದರು. ಶನಿವಾರ 13 ಕ್ಷೇತ್ರಗಳ ವ್ಯಾಪ್ತಿಯಲ್ಲಿ 26 ಕಿ.ಮೀ. ರೋಡ್‌ ಶೋ ನಡೆಸಿದ ಪ್ರಧಾನಿ ಮೋದಿ, ಗುಜರಾತ್‌ ಬಳಿಕ, ಕರ್ನಾಟಕದಲ್ಲಿ ಮತ್ತೂಂದು ದಾಖಲೆ ಸೃಷ್ಟಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next