Advertisement

ಮೋದಿ ಸಮಾವೇಶ: ಮೈದಾನಕ್ಕೆ ಪೆಂಡಾಲ್‌

01:55 PM Apr 30, 2018 | Harsha Rao |

ಉಡುಪಿ: ಎಂಜಿಎಂ ಕಾಲೇಜು ಮೈದಾನದಲ್ಲಿ ಮೇ 1ರಂದು ಜರಗಲಿರುವ ಬಿಜೆಪಿ ಬೃಹತ್‌ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಂದು ಅಪರಾಹ್ನ 2.50ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ಗೆ, 
ಅಲ್ಲಿಂದ ಮೈದಾನಕ್ಕೆ ಆಗಮಿಸಲಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ಮಧ್ಯಾಹ್ನ 1 ಗಂಟೆಯ ಒಳಗೆ ಮೈದಾನ ಪ್ರವೇಶಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Advertisement

ಮೋದಿ ಆಗಮನ ಸಂದರ್ಭ ಝೀರೋ ಟ್ರಾಫಿಕ್‌ ಇರಲಿದ್ದು, ಸಂಚಾರಕ್ಕೆ ತೊಡಕಾಗಬಹುದು. ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಆರಂಭಗೊಳ್ಳಲಿದೆ. ಮೋದಿಯವರು ಅನಂತರ ಬಂದು ಸೇರಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ 1 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಬಿಸಿಲಿನಿಂದ ರಕ್ಷಣೆಗಾಗಿ ಇಡೀ ಮೈದಾನಕ್ಕೆ ಪೆಂಡಾಲ್‌ ಹಾಕಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಉಡುಪಿ ಕ್ಷೇತ್ರದಿಂದಲೇ 25 ಸಾವಿರದಷ್ಟು ಮಂದಿ ಪಾಲ್ಗೊಳ್ಳಲಿದ್ದಾರೆ. ಇತರ ಕ್ಷೇತ್ರಗಳಿಂದಲೂ ಸಾವಿರಾರು ಮಂದಿ; ಉಡುಪಿ, ಕಾರವಾರ, ಕುಮಟಾದ ಅಭ್ಯರ್ಥಿಗಳು, ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. 10ರಿಂದ 15 ಸಾವಿರ ಮಂದಿ ಸ್ವಯಂಸೇವಕರಿರುತ್ತಾರೆ ಎಂದರು.

ಚುನಾವಣ ಆಯೋಗದ ಅನುಮತಿ ಪಡೆದು ನಗರವನ್ನು ಸಿಂಗರಿಸ ಲಾಗುವುದು ಎಂದು ಮಟ್ಟಾರು ಇದೇ ಸಂದರ್ಭದಲ್ಲಿ ತಿಳಿಸಿದರು. 

ಉತ್ತರ ಪ್ರದೇಶದ ಸಚಿವ ಡಾ| ಮಹೇಂದ್ರ ಸಿಂಗ್‌, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್‌, ಪಕ್ಷದ ಮುಖಂಡರಾದ ಉದಯ ಕುಮಾರ್‌ ಶೆಟ್ಟಿ, ಸುರೇಶ್‌ ನಾಯಕ್‌ ಕುಯಿಲಾಡಿ, ಸಂಧ್ಯಾ ರಮೇಶ್‌, ಯುವಮೋರ್ಚಾದ ಪ್ರೇಮ್‌ ಪ್ರಸಾದ್‌ ಪತ್ರಿಕಾ ಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

ಮಾಥೂರ್‌, ಮಹೇಂದ್ರ ಸಿಂಗ್‌ ನೇತೃತ್ವ
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್‌ ಮಾಥೂರ್‌ ಮತ್ತು ಸಚಿವ ಡಾ| ಮಹೇಂದ್ರ ಸಿಂಗ್‌ ಅವರು ಉಡುಪಿ, ದ.ಕ, ಉ.ಕ. ಮತ್ತು ಕೊಡಗು ಜಿಲ್ಲೆಗಳ ಬಿಜೆಪಿ ಚುನಾವಣಾ ಉಸ್ತುವಾರಿಗಳಾಗಿದ್ದು, ಉಡುಪಿ ಅವರ ಕೇಂದ್ರಸ್ಥಾನ. ಮೋದಿ ಕಾರ್ಯಕ್ರಮ ಅವರ ನಿರ್ದೇಶನದಲ್ಲಿ ಆಯೋಜನೆಗೊಳ್ಳುತ್ತಿದೆ. ಎ. 29ರಂದು ಈ ಇಬ್ಬರು ಮುಖಂಡರು ಸಮಾವೇಶ ಜರಗಲಿರುವ ಎಂಜಿಎಂ ಮೈದಾನಕ್ಕೆ ಭೇಟಿ ನೀಡಿ ಸಮಗ್ರವಾಗಿ ಚರ್ಚಿಸಿ ನಿರ್ದೇಶನ ನೀಡಿದರು. ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

Advertisement

ಸಿಎಂನಂತೆ ಉದ್ಧಟತನವಲ್ಲ : ಭಟ್‌ 
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ನರೇಂದ್ರ ಮೋದಿ ಕೃಷ್ಣಮಠಕ್ಕೆ ಭೇಟಿ ನೀಡುವುದಿಲ್ಲ ಎಂದು ಉದ್ಧಟತನದಿಂದ ಹೇಳಿಲ್ಲ. ಪ್ರಚಾರ ಸಭೆ ಮತ್ತು ಮಠ ಭೇಟಿ ಎರಡಕ್ಕೂ ಏಕಕಾಲದಲ್ಲಿ ಭದ್ರತೆ ಕಷ್ಟಸಾಧ್ಯ. ಹೀಗಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ನಡೆಯದೆಯೂ ಇರಬಹುದು ಎಂದರು.

ಶ್ರೀಕೃಷ್ಣ ಮಠ ಭೇಟಿ ಖಚಿತವಿಲ್ಲ
ಮೋದಿ ಶ್ರೀಕೃಷ್ಣ ಮಠ ಭೇಟಿ ಇನ್ನೂ ಖಚಿತಗೊಂಡಿಲ್ಲ. ಭದ್ರತೆ ಕಷ್ಟಸಾಧ್ಯ, ಹೀಗಾಗಿ ಖಚಿತವಾಗಿ ಹೇಳಲಾಗದು ಎಂದು ಮಟ್ಟಾರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next