Advertisement

ಮೋದಿ ರಾಜ್ಯಕ್ಕೆ ಬಂದಷ್ಟು ಜೆಡಿಎಸ್‌ಗೆ ಒಳಿತು: ಇಬ್ರಾಹಿಂ

10:14 PM Nov 12, 2022 | Team Udayavani |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಬಾರಿ ರಾಜ್ಯಕ್ಕೆ ಬಂದು ಹೋದರೂ ಅದರಿಂದ ಜೆಡಿಎಸ್‌ಗೆ ಒಳ್ಳೆಯದಾಗುತ್ತದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಒಳಗೊಳಗೆ ಕಟ್ಟಿ ಗಟ್ಟಿಗೊಳಿಸಬೇಕಾದ ಬೇಗುದಿಯಿಂದ ಪ್ರಧಾನಿಯವರು ರಾಜ್ಯಕ್ಕೆ ಪದೇಪದೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಂಪೇಗೌಡರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಪೂರ್ಣ ಬಿಜೆಪಿಮಯವಾಗಿತ್ತು ಎಂದು ದೂರಿದ ಅವರು, ಜೆಡಿಎಸ್‌ನ ಸರ್ವೋಚ್ಚ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಯದೆ ಅವಮಾನ ಮಾಡಲಾಗಿದೆ.

ಆದಿಚುಂಚನಗಿರಿ ಮಠಾಧೀಶ ಶ್ರೀನಿರ್ಮಲಾನಂದ ಸ್ವಾಮೀಜಿ ಅವರಿಗೂ ಅವಮಾನ ಮಾಡಲಾಗಿದೆ ಎಂದು ಟೀಕಿಸಿದರು.

ಮೋದಿಜಿ ಜಿಎಸ್‌ಟಿ ಹೆಚ್ಚಳದ ಕುರಿತು ಮಾತನಾಡಲಿಲ್ಲ. ಬೆಲೆ ಹೆಚ್ಚಳ, ತೈಲ ದರ ಏರಿಕೆ ಹಾಗೂ ಜನಸಂಕಷ್ಟದ ವಿಷಯಗಳ ಕುರಿತೂ ಪ್ರಸ್ತಾವಿಸಲಿಲ್ಲ. ರಾಜ್ಯದ ಜನತೆಗೆ ಹೊಸ ಕೊಡುಗೆಗಳನ್ನೂ ಘೋಷಿಸಿಲ್ಲ. ನಾಡು ಕಟ್ಟುವಂತಹ ಯೋಜನೆಗಳನ್ನೂ ಜನರಿಗೆ ಅರ್ಪಿಸಲಿಲ್ಲ ಎಂದ ಅವರು, ಮೂರ್ತಿಗಳನ್ನು ಕೊಟ್ಟರೆ ಜನತೆಯ ಹೊಟ್ಟೆ ತುಂಬುವುದಿಲ್ಲ. ಉದ್ಯೋಗಾಧಾರಿತ ಉದ್ಯಮವನ್ನಾದರೂ ಆರಂಭಿಸಬೇಕು. ಜನತೆಯ ಆರ್ಥಿಕ ಶಕ್ತಿ ವೃದ್ಧಿಗೆ ಏನಾದರೂ ಮಾಡಬೇಕು ಎಂದರು.

Advertisement

ಬಿಜೆಪಿಯಲ್ಲಿ ಶಿಷ್ಟಾಚಾರ ಹಳ್ಳ ಹಿಡಿದಿದೆ. ಬುದ್ಧಿ ಹೇಳುವವರು ಯಾರೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಬಸವಕೃಪಾ ಮರೆತು ಕೇಶವಕೃಪಾ ಸೇರಿದ್ದಾರೆ. ಬಿಜೆಪಿ ತನ್ನ ಶ್ರೇಷ್ಠತೆ ಬಗ್ಗೆ ಹೇಳಿಕೊಳ್ಳುವ ಬದಲು ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಯಬೇಕು ಎಂದು ಹೇಳಿದರು.

ನೀವು ಶೇ.20ರ ಸರಕಾರ ಎಂದು ಕಾಂಗ್ರೆಸ್‌, ಬಿಜೆಪಿ ಒಬ್ಬರಿಗೊಬ್ಬರು ಸಾರ್ವಜನಿಕವಾಗಿ ಬೀದಿಯಲ್ಲಿ ಪ್ರತಿವ್ರತೆಯರಂತೆ ಜಗಳವಾಡುತ್ತಿದ್ದಾರೆ. ಎರಡೂ ಪಕ್ಷಗಳು ಸಂಪೂರ್ಣ ಭ್ರಷ್ಟ ಆಡಳಿತ ನೀಡಿರುವುದು ಜಗಜ್ಜಾಹೀರಾಗಿದೆ. ರಾಜ್ಯದಲ್ಲಿ ರೈತರ ಮತ್ತು ಶ್ರಮಿಕರ ಪರವಾಗಿ ಆಲೋಚನೆ ಮಾಡುವುದು ಕೇವಲ ಜೆಡಿಎಸ್‌. ಅಧಿಕಾರಕ್ಕಾಗಿ ಮುಂದಿನ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿಯಲಿದ್ದಾರೆ.
-ಸಿ.ಎಂ.ಇಬ್ರಾಹಿಂ, ರಾಜ್ಯಾಧ್ಯಕ್ಷ, ಜೆಡಿಎಸ್‌

Advertisement

Udayavani is now on Telegram. Click here to join our channel and stay updated with the latest news.

Next