ಬೆಂಗಳೂರು: ಮುಂಬರುವ ವಿಧಾನ ಸಭೆ ಚುನಾವಣೆಗೆ ರಾಜ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಜಾರಿಗೊಳಿಸಿದ್ದ ಚುನಾವಣಾ ರಣತಂತ್ರಗಳನ್ನು ಒಟ್ಟುಗೂಡಿಸಿ ಅನುಷ್ಠಾನ ಗೊಳಿಸಲು ಮುಂದಾಗಿರುವ ಬಿಜೆಪಿ, ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರಿತ ಪ್ರಚಾರ ತಂತ್ರಕ್ಕೆ ಮೊರೆಹೋಗಲಿದೆ.
ಸೋಮವಾರ ಚುನಾವಣಾ ಸಿದ್ಧತೆ ಕುರಿ ತಂತೆ ನಡೆದ ಸಭೆ ಮತ್ತು ಆರ್‌ಎಸ್‌ಎಸ್-ಬಿಜೆಪಿ ಸಮನ್ವಯ ಬೈಠಕ್‌ನಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತಂಡ ರಾಜ್ಯದ ಚುನಾವಣಾ ಕಾರ್ಯತಂತ್ರ ಮತ್ತು ಪ್ರಚಾರ ತಂತ್ರಗಳನ್ನು ಅಂತಿಮಗೊಳಿಸಲಿದೆ.
ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸನ್ನು ಸೋಲಿಸಲು ಬಿಜೆಪಿ ಆಡಳಿತ ವಿರೋಧಿ ಅಲೆ ಮತ್ತು ಸರಕಾರದ ವೈಫಲ್ಯಗಳನ್ನು ಆಧರಿಸಿ ತಂತ್ರಗಾರಿಕೆ ರೂಪಿಸಿತ್ತು. ಅದೇ ರೀತಿ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ, ಪಾಟೀದಾರರ ಸವಾಲುಗಳನ್ನು ಮೆಟ್ಟಿನಿಂತು ಪ್ರಧಾನಿ ನರೇಂದ್ರ ಮೋದಿ ಅವರ ಭರ್ಜರಿ ಪ್ರಚಾರದಿಂದ ಗೆಲುವು ಸಾಧಿಸಿತ್ತು. ಈ ಎರಡೂ ತಂತ್ರಗಾರಿಕೆಗಳನ್ನು ಒಟ್ಟಾಗಿ ಸೇರಿಸಿ ಕರ್ನಾಟಕಕ್ಕೆ ಪ್ರತ್ಯೇಕ ಚುನಾವಣಾ ರಣತಂತ್ರ ರೂಪಿಸಲು ಬಿಜೆಪಿ ಮುಂದಾಗಿದೆ.
ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಕೆಲವು ಸಮಸ್ಯೆಗಳಿವೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಬಲಿಷ್ಠವಾಗಿದ್ದು, ಸ್ಥಳೀಯವಾಗಿ ಪ್ರಬಲ ನಾಯಕರೂ ಇದ್ದಾರೆ. ಅದರಲ್ಲೂ ವೀರಶೈವ- ಲಿಂಗಾಯತ ಹೊರತುಪಡಿಸಿ ಉಳಿದಂತೆ ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕತ್ವಕ್ಕೆ ಸಡ್ಡು ಹೊಡೆಯುವ ನಾಯಕರು ಬಿಜೆಪಿಯಲ್ಲಿ ಇಲ್ಲ. ಹೀಗಾಗಿ ಎಲ್ಲ ವರ್ಗಕ್ಕೂ ಸಲ್ಲುವ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮುಂದಿಟ್ಟುಕೊಂಡು ಪ್ರಚಾರ ಕೈಗೊಳ್ಳುವುದು ಬಿಜೆಪಿಯ ತಂತ್ರ ಎಂದು ತಿಳಿದುಬಂದಿದೆ.
ಏನಿದು ಹೊಸ ಕಾರ್ಯತಂತ್ರ?: ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯ ಲಾಭ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ರಾಜ್ಯ ಸರಕಾರದ ವೈಫಲ್ಯಗಳ ಪಟ್ಟಿ ಮಾಡಿ ಅದನ್ನು ಜನರ ಮನಸ್ಸಿಗೆ ನಾಟುವಂತೆ ಹೇಳಲು ವ್ಯವಸ್ಥಿತ ಕಾರ್ಯಕ್ರಮ ರೂಪಿಸಿತ್ತು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನೂ ಜನರಿಗೆ ಮನವರಿಕೆ ಮಾಡಿಕೊಡು ವುದರ ಜತೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೆ ಅದರಿಂದ ರಾಜ್ಯಕ್ಕೆ ಏನು ಅನುಕೂಲವಾಗುತ್ತದೆ ಎಂಬುದನ್ನು ವಿವರಿಸುವಲ್ಲಿ ಯಶಗಳಿಸಿತ್ತು.
ಅದೇ ರೀತಿ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಕೇಂದ್ರದ ಜಿಎಸ್‌ಟಿ ಮತ್ತು ನೋಟು ಅಪಮೌಲ್ಯದಿಂದ ಉದ್ದಿಮೆದಾರರಲ್ಲಿ ಬಿಜೆಪಿ ಬಗ್ಗೆ ಉಂಟಾಗಿದ್ದ ಆಕ್ರೋಶವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಮೂಲಕ ಬದಿಗೆ ಸರಿಸಿತ್ತು. ಅಲ್ಲದೆ ರಾಜ್ಯದ ಬುಡಕಟ್ಟು ಸಮುದಾಯದ ಮತಗಳನ್ನು ಕ್ರೋಢೀಕರಿಸಿ ಪಟೇಲ್ ಸಮುದಾಯ ವಿಭಜನೆ ಯಾಗಿದ್ದರಿಂದ ಪಕ್ಷದ ವೋಟ್‌ಬ್ಯಾಂಕ್‌ಗೆ ಉಂಟಾಗಿದ್ದ ನಷ್ಟವನ್ನು ಭರಿಸಿತ್ತು.
ಹೊಸ ತಂತ್ರಗಾರಿಕೆ
ರಾಜ್ಯದಲ್ಲಿ ಹಿಮಾಚಲ ಪ್ರದೇಶ, ಗುಜರಾತ್‌ನ ತಂತ್ರಗಾರಿಕೆಗಳನ್ನು ಒಟ್ಟು ಗೂಡಿಸಿ ಹೊಸ ಕಾರ್ಯತಂತ್ರರೂಪಿಸಲು ಬಿಜೆಪಿ ಮುಂದಾಗಿದೆ. ಅಂದರೆ, ಆಡಳಿತ ವಿರೋಧಿ ಅಲೆಯ ಲಾಭ ಪಡೆಯುವುದ ರೊಂದಿಗೆ ರಾಜ್ಯ ಸರಕಾರದ ವೈಫಲ್ಯ ಮತ್ತು ಕೇಂದ್ರ ಸರಕಾರದ ಸಾಧನೆ ಹಾಗೂ ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ವಿವರಿಸಿ ಅವರನ್ನು ಬಿಜೆಪಿಯತ್ತ ಒಲಿಸಿಕೊಳ್ಳುವುದು ಒಂದು ಅಂಶ. ಇನ್ನೊಂದೆಡೆ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿನಿಂದ ವೀರಶೈವ- ಲಿಂಗಾಯತ ಮತಗಳು ವಿಭಜನೆಯಾದರೆ ಆಗುವ ಸಮಸ್ಯೆ ಬಗೆಹರಿಸಲು ಹಿಂದುಳಿದ ವರ್ಗ ಮತ್ತು ಮಹಿಳೆಯರ ಮತಗಳನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿದೆ.
ಪ್ರದೀಪ್ ಕುಮಾರ್ ಎಂ.